ಸಾರಾಂಶ
- ಕೂಲಂಬಿಯಲ್ಲಿ ದೇವಸ್ಥಾನ ಕಳಸಾರೋಹಣ, ಧರ್ಮಸಭೆಯಲ್ಲಿ ಸಿರಿಗೆರೆ ಶ್ರೀ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದಲ್ಲಿ ಎಷ್ಟೇ ವಿಧ್ವಂಸಕ ಕೃತ್ಯಗಳು ನಡೆದರೂ ಈ ದೇಶದ ದೇವರು, ದೈವನಂಬಿಕೆ, ಸನಾತನ ಧರ್ಮ, ಸಂಸ್ಕೃತಿಗಳನ್ನು ಯಾರಿಂದರೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಈಶ್ವರ ದೇವಸ್ಥಾನ ಮತ್ತು ಶ್ರೀ ಮಾರಿಕಾಂಬ ದೇವಿ ದೇವಸ್ಥಾನ ಕಳಸಾರೋಹಣ, ಧರ್ಮಸಭೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಸ್ತುತ ಸಮಾಜದಲ್ಲಿ ದೀಪ ಹಚ್ಚುವವರಿಗಿಂತ, ಬೆಂಕಿ ಹಚ್ಚುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೌಟಂಬಿಕ ಸಂಬಂಧಗಳು ಹೆಚ್ಚು ಸಂಕೀರ್ಣವಾಗುತ್ತಿವೆ. ಈ ಬಗ್ಗೆ ಪ್ರತಿಯಬ್ಬರೂ ಚಿಂತಿಸಬೇಕಾಗಿದೆ. ಮಾನವೀಯ ಮೌಲ್ಯಗಳು ಪಕ್ಷಾತೀತ ಹಾಗೂ ಜಾತ್ಯತೀತವಾಗಿದ್ದಾಗ ಮಾತ್ರ ಮಾನವೀಯತೆ ಹೆಚ್ಚು ಪ್ರಜ್ವಲಿಸುತ್ತದೆ. ಹೆಣ್ಣು ತನಗೆ ಜನಿಸಿದ ಮಗುವಿನಿಂದ ತಾಯಿಪಟ್ಟ ಪಡೆಯುತ್ತಾಳೆ. ಇದೇ ರೀತಿ ದೇವರು, ಗುರುಗಳು ಭಕ್ತರ ಭಕ್ತಿಯಿಂದ ಪವಿತ್ರತೆಯ ಪಟ್ಟ ಪಡೆಯುತ್ತಾರೆ ಎಂದರು.ಗ್ರಾಮದಲ್ಲಿ ಶ್ರೀ ಈಶ್ವರ ದೇವಸ್ಥಾನ ಮತ್ತು ತಾಯಿ ಶ್ರೀಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಶುಭ ಕಾರ್ಯಗಳನ್ನು ಗುರುಗಳ ಸಾನ್ನಿಧ್ಯದಲ್ಲಿ ನಿರ್ವಹಿಸಿದ್ದೇವೆ. ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ. ಸಿರಿಗೆರೆಯ ಹಿರಿಯ ಗುರುಗಳ ಅಶಯದಂತೆ ತಾವು ಇಡೀ ವಚನ ಸಾಹಿತ್ಯವನ್ನು ಗಣಕೀರಣಗೊಳಿಸುವ ಮೂಲಕ ಜಗತ್ತಿನ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಠಾಧೀಶರು, ಮಠಗಳು ಸೂಜಿ ಮತ್ತು ದಾರದಂತೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.ತರಳಬಾಳು ಕೃಷಿ ವಿಜ್ಞಾನ ದಾವಣಗೆರೆ ತೋಟಗಾರಿಕೆ ವಿಜ್ಞಾನಿ ಡಾ. ಬಸವನಗೌಡ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಗುರು ಗದ್ದಿಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಸ್. ಸೋಮಶೇಖರ್ ವಹಿಸಿದ್ದರು.
ಮುಖಂಡರಾದ ಹೊನ್ನಾಳಿ ತಾಲೂಕಿನ ಸಾಧುವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್, ನ್ಯಾಮತಿ ಅಧ್ಯಕ್ಷ ಜಿ. ಶಿವಪ್ಪ, ಶಿವಬ್ಯಾಂಕ್ ಮಾಜಿ ಉಪಾಧ್ಯಕ್ಷ ಲೋಕೇಶಪ್ಪ, ಕೆಂಗಲಹಳ್ಳಿ, ಗುರುಮೂರ್ತಿ, ಷಣ್ಮುಖಪ್ಪ, ಕಸಾದ ಜಿಲ್ಲಾಧ್ಯಕ್ಷ ವಾಮದೇವಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಕೆ.ಬಿ. ಲಿಂಗರಾಜು, ಕೂಲಂಬಿ ನಾಗರಾಜ್, ಸಾವಿರಾರು ಭಕ್ತರು ಇದ್ದರು.- - -
(ಕೋಟ್) ಗುರುಗಳ ಮಾರ್ಗದರ್ಶದಂತೆ ಪ್ರತಿಯೊಬ್ಬರು ಆತ್ಮಪೂರ್ವಕವಾಗಿ ನಡೆದುಕೊಂಡಾಗ ಸುಖಿ ಮತ್ತು ಶಾಂತಿಯ ಸಮಾಜವನ್ನು ಕಾಣಲು ಸಾಧ್ಯ. 20 ವರ್ಷಗಳಿಂದ ಹೆಣ್ಣುಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಪಾಲಿದೆ ಎಂದು ಕಾನೂನು ಬಂದ ಮೇಲೆ ಹೆಚ್ಚಿನ ಮಹಿಳೆಯರು ನ್ಯಾಯಾಲಯಕ್ಕೆ ಹೋಗುವ ಪರಿಪಾಠವಾಗಿದೆ. ಇದರ ಬದಲಿಗೆ ಸಿರಿಗೆರೆ ನ್ಯಾಯ ಪೀಠದಲ್ಲಿ ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು.- ಡಿ.ಜಿ.ಶಾಂತನಗೌಡ, ಶಾಸಕ.
- - --1ಎಚ್.ಎಲ್.ಐ1:
ಧರ್ಮಸಭೆಯಲ್ಲಿ ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಇದ್ದರು.