ಶಿಕ್ಷಕರು ನಿರ್ಲಕ್ಷಿಸಿದರೆ ಮಕ್ಕಳ ಭವಿಷ್ಯ ರೂಪಿಸಲು ಅಸಾಧ್ಯ: ಸಂಸದ ಬಿ.ವೈ ರಾಘವೇಂದ್ರ

| Published : Sep 21 2025, 02:00 AM IST

ಶಿಕ್ಷಕರು ನಿರ್ಲಕ್ಷಿಸಿದರೆ ಮಕ್ಕಳ ಭವಿಷ್ಯ ರೂಪಿಸಲು ಅಸಾಧ್ಯ: ಸಂಸದ ಬಿ.ವೈ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಕ್ಷೇತ್ರದಲ್ಲಿ ವಿಪರೀತ ಸ್ವರ್ದೆಯಿದ್ದು, ಶಿಕ್ಷಕರು ಪ್ರತಿ ವಿದ್ಯಾರ್ಥಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಲ್ಲಿ ನಿರ್ಲಕ್ಷಿಸಿದಲ್ಲಿ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಲು ಅಸಾದ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಶೈಕ್ಷಣಿಕ ಕ್ಷೇತ್ರದಲ್ಲಿ ವಿಪರೀತ ಸ್ವರ್ದೆಯಿದ್ದು, ಶಿಕ್ಷಕರು ಪ್ರತಿ ವಿದ್ಯಾರ್ಥಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಲ್ಲಿ ನಿರ್ಲಕ್ಷಿಸಿದಲ್ಲಿ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಲು ಅಸಾದ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಶನಿವಾರ ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ(ರಿ) ಎಲ್ಲ ಅಂಗಸಂಸ್ಥೆಗಳ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವಿಪರೀತ ಸ್ಪರ್ಧೆಯಿದ್ದು, ಉತ್ತಮ ಭೌತಿಕ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚು ಉಗಮವಾಗುತ್ತಿರುವ ಕ್ಷೇತ್ರದಲ್ಲಿ ಶಿಕ್ಷಕರ ಜವಾಬ್ದಾರಿ ವಿಪರೀತವಾಗಿದೆ ಎಂದ ಅವರು ಈ ದಿಸೆಯಲ್ಲಿ ಶಿಕ್ಷಕರು ಪ್ರತಿ ವಿದ್ಯಾರ್ಥಿ ಬಗ್ಗೆ ಗಮನ ಹರಿಸಲು ವಿಫಲವಾದಲ್ಲಿ ಭವ್ಯ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಶಿಕ್ಷಕರ ಜ್ಞಾನದ ಹರಿವನ್ನು ವಿಸ್ತಾರಗೊಳಿಸುವ ಗುರುತರವಾದ ಜವಾಬ್ದಾರಿ ಸಂಸ್ಥೆ ಮತ್ತು ಕೆಲಸ ನಿರ್ವಹಿಸುವ ಪ್ರತಿಯೊಬ್ಬರ ಮುಂದಿದ್ದು, ಕೇಂದ್ರ ಸರ್ಕಾರ ಎನ್ ಇ ಪಿ ಎಂಬ ಶೈಕ್ಷಣಿಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಭವಿಷ್ಯವನ್ನು ಕಾಣಲು ಸಾಧ್ಯ ಎಂದ ಅವರು ಉತ್ತಮ ಶಿಕ್ಷಕರಾಗುವವರು ಕೇವಲ ಬೋಧನೆಯಿಂದಲ್ಲ ಅನುಷ್ಠಾನಗೊಳಿಸಿ ವಿದ್ಯಾರ್ಥಿಗಳ ಸಾಧನೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ.ಶಿಕ್ಷಕರು ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಧಾರೆ ಎರೆದು ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಾರ್ಗದರ್ಶಕರಾಗಿ ಮತ್ತು ಸ್ಫೂರ್ತಿದಾಯಕರಾಗಿದ್ದಾರೆ ಎಂದರು.

ಶಿಕ್ಷಕರು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯನ್ನು ಬೆಂಬಲಿಸುವರಾಗಬೇಕು. ಬದುಕಿನಲ್ಲಿ ಯಶಸ್ವಿಯಾಗಲು ಮಾರ್ಗದರ್ಶಕರಾಗಬೇಕು, ಶಿಕ್ಷಕರ ಸಮರ್ಪಣೆ, ತಾಳ್ಮೆ ಮತ್ತು ನಿಸ್ವಾರ್ಥ ಕೆಲಸವನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಇದು ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾಗಿದ್ದು ಮಹಾನ್ ಚೇತನರ ಶೈಕ್ಷಣಿಕ ಸೇವೆಯನ್ನು ಮನದಲ್ಲಿ ಸ್ಮರಿಸಿ ಸದೃಡ ದೇಶ ನಿರ್ಮಾಣಕ್ಕೆ ಒಗ್ಗೂಡಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಸತತ 15 ವರ್ಷಗಳಿಂದ ಸೇವೆ ಸಲ್ಲಿಸಿದ ಸಿಬ್ಬಂದಿಗೆ "ಸೇವಾ ಸಿರಿ " ಪ್ರಶಸ್ತಿ, ಸಂಶೋಧನಾ ಕ್ಷೇತ್ರದಲ್ಲಿ ಅಭ್ಯಾಸ ಮಾಡಿ ಪಿ.ಎಚ್.ಡಿ ಡಾಕ್ಟರೇಟ್ ಪಡೆದವರಿಗೆ ಗೌರವ ಸನ್ಮಾನ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಾಗಿ ಶಿಕ್ಷಕ ವೃತ್ತಿಯಲ್ಲಿ ಸಾಧನೆ ಮೂಲಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಹಾಗೂ ವಿದ್ಯಾರ್ಥಿಗಳು ಶೇ.100 ಅಂಕಗಳಿಸಲು ಶ್ರಮಿಸಿದ ಉಪನ್ಯಾಸಕರಿಗೆ, ಶಿಕ್ಷಣ ಕ್ಷೇತ್ರಕ್ಕೆ ಪುಸ್ತಕ ಕೊಡುಗೆ ಸಲ್ಲಿಸಿದ ಸಂಸ್ಥೆ ಕೀರ್ತಿ ಹೆಚ್ಚಿಸಿದ ಉಪನ್ಯಾಸಕರನ್ನು ಗೌರವಿಸಲಾಯಿತು.ಶಿವಮೊಗ್ಗ ಮೈತ್ರಿ ನರ್ಸಿಂಗ್ ಕಾಲೇಜಿನಲ್ಲಿ ಸಿದ್ದಪಡಿಸಿದ “ವಿಸ್ಮಯ” ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸಮಾಜ ಸುಧಾರಕ ದುರ್ಗಪ್ಪರನ್ನು ಗೌರವಿಸಲಾಯಿತು.

ಪ್ರಶಿಕ್ಷಣಾರ್ಥಿ ಶೃತಿ ತಂಡ ಸ್ವಾಗತಿಸಿ, ಪ್ರಾಚಾರ್ಯ ಡಾ.ಶಿವಕುಮಾರ್‌ ಸ್ವಾಗತಿಸಿ, ಡಾ.ರವಿ ನಿರೂಪಿಸಿ, ಡಾ.ರವೀಂದ್ರ ವಂದಿಸಿದರು.