ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 800 ಕೆ,ಪಿ,ಎಸ್ ಶಾಲೆಗಳ ನಿರ್ಮಾಣ, 3 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು ಒಳಮೀಸಲಾತಿ ಜಾರಿಯಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ 18 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ, 4 ಕೋಟಿ ರು. ವೆಚ್ಚದ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮ ಇಂದಿನ ಪೀಳಿಗೆಗೆ ನಾವು ಏನಾದರೂ ಒಳ್ಳೆಯ ಕೊಡುಗೆ ನೀಡಬೇಕಾದರೆ ಊರುಗಳಲ್ಲಿ ದೇವಸ್ಥಾನದ ಗಂಟೆಗಳಿಗಿಂತ ಶಾಲೆಗಳ ಗಂಟೆ ಹೊಡೆಯಬೇಕು. ನಮ್ಮ ಪೀಳಿಗೆ ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿದಾಗ ಮಾತ್ರ ಸದೃಢ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ 2023ರ ನವೆಂಬರ್ 1ನೇ ತಾರೀಖಿನಿಂದ ಉಚಿತ ವಿದ್ಯುತ್ ನೀಡುತ್ತಿದ್ದು ಧೂಳು ಹಿಡಿದು ಕೂತಿದ್ದ ಕಂಪ್ಯೂಟರ್, ಸ್ಮಾಟ್ ಕ್ಲಾಸ್‌ಗಳು ಈಗ ಮತ್ತೆ ಪ್ರಾರಂಭವಾಗಿ ಬಡವರ್ಗದ ಜನರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ ಎಂದರು.
ಸರ್ಕಾರಿ ನೌಕರರಿಗೆ 6ನೇ ವೇತನ ಮತ್ತು 7ನೇ ವೇತನ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಾಗಿದ್ದು ನಮ್ಮ ಚುನಾವಣೆಯ ಪ್ರನಾಳಿಕೆಯಲ್ಲಿ ತಿಳಿಸಿದಂತೆ ಓಪಿಎಸ್ ಅನ್ನು ಜಾರಿಗೆ ತಂದಿದ್ದೇವೆ ಎಂದರು.ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ, ನೀಟ್ ನ ತರಬೇತಿಯನ್ನು ನೀಡುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡಲಾಗುವುದು ಎಂದರು.
ಶಾಸಕ ಬಸವರಾಜು ವಿ.ಶಿವಗಂಗಾ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಯಿಂದ 45 ಶಾಲಾ ಕೊಠಡಿಗಳ ನಿರ್ಮಾಣ 17 ಹೊಸ ಶಾಲೆಗಳ ಕಟ್ಟಡ ನಿರ್ಮಾಣ, ಶಾಸಕರ ಅನುಧಾನದಲ್ಲಿ 85ಕೊಠಡಿಗಳ ನಿರ್ಮಾಣ ಮಾಡಿಸಿದ್ದು ಇನ್ನು 45 ಶಾಲಾ ಕೊಠಡಿಗಳ ನಿರ್ಮಾಣ ಬಾಕಿ ಇದ್ದು ಇವುಗಳ ನಿರ್ಮಾಣಕ್ಕೆ ಶಿಕ್ಷಣ ಸಚಿವರು ಅನುದಾನ ನೀಡಬೇಕು ಎಂದರು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ 1 ಲಕ್ಷ ರು. ನಗದು ಬಹುಮಾನ ಘೋಷಣೆ ಮಾಡಿದ್ದೆ. ಅದು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಮುಂದುವರಿಯಲಿದ್ದು, ಅತಿ ಹೆಚ್ಚು ಫಲಿತಾಂಶ ಪಡೆದ ಶಾಲೆಗಳಿಗೆ ಪ್ರಥಮ ಬಹುಮಾನ 55ಸಾವಿರ, ದ್ವಿತೀಯ ಬಹುಮಾನ 33 ಸಾವಿರ ರು., ತೃತೀಯ ಬಹುಮಾನವಾಗಿ 11 ಸಾವಿರ ರು. ನೀಡಲಾಗುವುದು ಎಂದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್, ಡಯಟ್‌ನ ಪ್ರಾಚಾರ್ಯೆ ಗೀತಾ, ತಹಶೀಲ್ದಾರ್ ಎನ್.ಜೆ.ನಾಗರಾಜ್, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಂಕರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸ್ವಾಮಿ, ತಿಪ್ಪೇಶಪ್ಪ, ಜಯಪ್ರಕಾಶ್, ಗಣೇಶ್, ಉಮೇಶ್, ಶೋಭಾ, ಅಮಾನುಲ್ಲಾ, ನೇತ್ರಾವತಿ ಹಾಜರಿದ್ದರು.