ಶಿವಮೊಗ್ಗದಲ್ಲಿ ಈ ಬಾರಿ 11 ದಿನ ದಸರಾ ವೈಭವ

| Published : Sep 21 2025, 02:00 AM IST

ಸಾರಾಂಶ

ನಾಡಹಬ್ಬ ಶಿವಮೊಗ್ಗ ದಸರಾವನ್ನು ಈ ಭಾರಿ ಅತ್ಯಂತ ಸಡಗರ-ಸಂಭ್ರಮ-ವಿಜೃಂಭಣೆಯಿಂದ 11 ದಿನಗಳ ಕಾಲ ನಡೆಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಹಬ್ಬ ಶಿವಮೊಗ್ಗ ದಸರಾವನ್ನು ಈ ಭಾರಿ ಅತ್ಯಂತ ಸಡಗರ-ಸಂಭ್ರಮ-ವಿಜೃಂಭಣೆಯಿಂದ 11 ದಿನಗಳ ಕಾಲ ನಡೆಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಮಹಾನಗರ ಪಾಲಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ರಾಜ್ಯದಲ್ಲಿ ಅತ್ಯಂತ ಹೆಸರಾಗಿದೆ. ಶಿವಮೊಗ್ಗದಲ್ಲಿ ಸೆ.22ರಿಂದ ಅಕ್ಟೋಬರ್ 2ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈಗಾಗಲೇ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 14 ಸಮಿತಿ ರಚಿಸಲಾಗಿದೆ ಎಂದರು.

ಸೆ.22ರಂದು ಬೆಳಗ್ಗೆ 11ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ಬಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿರುವ ಬಗ್ಗವಳ್ಳಿ ಸೋಮಶೇಖರ ರಾಜು ಅವರು ದಸರಾ ಉದ್ಘಾಟನೆ ನಡೆಸುವರು. ಸ್ವಾಗತ ಸಮಿತಿ, ಉತ್ಸವ ಸಮಿತಿ, ಮಹಿಳಾ ಹಾಗೂ ಗಮಕ ದಸರಾ ಸಮಿತಿ, ಅಲಂಕಾರ ದಸರಾ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿ, ಯುವದಸರಾ ಸಮಿತಿ, ಪರಿಸರ ಮತ್ತು ಪೌರಕಾರ್ಮಿಕರ ದಸರಾ ಸಮಿತಿ, ಯೋಗ ದಸರಾ ಸಮಿತಿ, ರಂಗದಸರಾ ಸಮಿತಿ, ರೈತದಸರಾ ಸಮಿತಿ, ಆಹಾರ ದಸರಾ ಸಮಿತಿ, ಚಲನಚಿತ್ರ ಹಾಗೂ ಪತ್ರಿಕಾ ದಸರಾ ಸಮಿತಿ, ಮಕ್ಕಳ ದಸರಾ ಸಮಿತಿ, ಕಲಾ ಮತ್ತು ಜ್ಞಾನ ದಸರಾ ಸಮಿತಿಗಳಿಂದ 11 ದಿನ ದಸರಾ ಮಹೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸೆ.23ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷ ಸಂಭ್ರಮ ನಡೆಯುತ್ತದೆ. ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಹಾಗೂ ಅಂತಾರಾಷ್ಟ್ರೀಯ ನೃತ್ಯಗಾರ್ತಿ ಕು. ಋತುಸ್ಪರ್ಶ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸೆ.24ರಂದು ನಡೆಯಲಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟರಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಭಾಗವಹಿಸಲಿದ್ದಾರೆ ಎಂದರು.

ಸೆ.25ರಂದು ರೈತ ದಸರಾ, ಕಲಾ ದಸರಾ ನಡೆಯಲಿದೆ. ಸೆ.26ರಂದು ಕಲಾ ದಸರಾ ಕಾರ್ಯಕ್ರಮ ಸಂಜೆ 6 ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಉದ್ಘಾಟಿಸುವರು. ಸೆ.26ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ.27ರಂದು ಬೆಳಗ್ಗೆ 10 ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್. ರವಿಕುಮಾರ್ ಉದ್ಘಾಟಿಸುವರು ಎಂದರು.

ಸೆ.28ರಂದು ಯೋಗದಸರಾ ಗಮಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದೆ.

ಸೆ.28ರಂದು ಸಂಜೆ 5 ಗಂಟೆಗೆ ಅಲ್ಲಮಪ್ರಭು(ಫ್ರೀಡಂಪಾರ್ಕ್) ಮೈದಾನದಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದ್ದು, ನಟ ಡಾ. ಶಿವರಾಜ್‌ಕುಮಾರ್ ಭಾಗವಹಿಸುವರು. ಸೆ.29ರಂದು ಬೆಳಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ನಡೆಯಲಿದೆ. ಸಂಜೆ 6 ಗಂಟೆಗೆ ಗೀತ ನೃತ್ಯವೈಭವ ಕಾರ್ಯಕ್ರಮ, ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದೆ. ಸೆ.30ರಂದು ಕಲಾ ಮತ್ತು ಜ್ಞಾನ ದಸರಾ ಕುವೆಂಪು ರಂಗಮಂದಿರದಲ್ಲಿ ಅಡುಗೆ ಮಾಡುವ ಸ್ಪರ್ಧೆ, ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ನಾದವೈಭವ ಕಾರ್ಯಕ್ರಮ ನಡೆಯಲಿದ್ದು, ನಟಿ ಗೀತಾ ಇದರಲ್ಲಿ ಭಾಗವಹಿಸುತ್ತಾರೆ ಎಂದರು.

ಅ.1ರಂದು ಸಂಜೆ 5 ಗಂಟೆಗೆ ಇಲ್ಲಿಯೇ ನಡೆಯುವ ನಾಟ್ಯವೈಭವ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂರ್ಣಚ್ಚ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭಾಗವಹಿಸಲಿದ್ದಾರೆ. ಅ.2ರಂದು ಸಂಜೆ 5 ಗಂಟೆಗೆ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ, ವಿವಿಧ ಸಮಿತಿಯ ಮುಖ್ಯಸ್ಥರಾದ ಪುಷ್ಪಾವತಿ ಹೆಚ್.ಎಸ್. ಸಂತೋಷ್ ಹೆಚ್.ರಾಥೋಡ್, ಅನುಪಮ ಟಿ.ಆರ್., ಹರೀಶ್ ಡಿ., ಸಿದ್ದಪ್ಪ ಸಿ.ಆರ್., ಮಧುನಾಯಕ, ಸುಧಾಕರ ಬಿಜ್ಜೂರ್, ಕೃಷ್ಣಮೂರ್ತಿ, ಸತೀಶ್ ಆರ್.ಬಿ. ಮುಂತಾದವರಿದ್ದರು.

ಅಂಬಾರಿ ಹೊರಲಿರುವ ಸಾಗರ್‌ ಆನೆ

ಅ.2ರಂದು ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭವಾಗುತ್ತದೆ. ಅಂಬಾರಿ ಮೆರವಣಿಗೆಯಲ್ಲಿ ಈ ಬಾರಿ ಸಕ್ರೆಬೈಲು ಆನೆ ಬಿಡಾರದ ಸಾಗರ್, ಬಾಲಣ್ಣ, ಕುಂತಿ ಭಾಗವಹಿಸಲಿದ್ದು, ಸಾಗರ್ ಅಂಬಾರಿ ಹೊರಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ನಂತರ ಸಂಜೆ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ವಿ.ಎಸ್. ರಾಜೀವ್ ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಸಿಡಿಮದ್ದು ಮತ್ತು ರಾವಣ ದಹನವನ್ನು ಏರ್ಪಡಿಸಲಾಗಿದೆ. ಸಚಿವರಾದ ಮಧುಬಂಗಾರಪ್ಪ , ಶಿವರಾಜ್ ಎಸ್. ತಂಗಡಗಿ, ಬಿ.ಎಸ್. ಸುರೇಶ್, ರಹೀಂಖಾನ್ ಭಾಗವಹಿಸುವರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಸಕ್ರೇಬೈಲು ಆನೆಗಳಿಗೆ ಪೂಜೆ; ಅರಣ್ಯ ಇಲಾಖೆಗೆ ಆಹ್ವಾನ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ನಡೆಯವ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಕ್ರೇಬೈಲು ಆನೆ ಬಿಡಾರದ ಆನೆಗಳಿಗೆ ಶನಿವಾರ ಶಾಸಕ ಎಸ್.ಎನ್. ಚನ್ನಬಸಪ್ಪ, ಅಧಿಕಾರಿಗಳು ಪೂಜೆ ಸಲ್ಲಿಸಿ ಅರಣ್ಯ ಇಲಾಖೆಗೆ ಅಧಿಕೃತ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸೂಡ ಮಾಜಿ ಅಧ್ಯಕ್ಷ ನಾಗರಾಜ್, ಜ್ಞಾನೇಶ್ವರ್, ಪಾಲಿಕೆ ಮಾಜಿ ಮೇಯರ್ ಸುವರ್ಣಾಶಂಕರ್, ಉಪ ಮೇಯರ್ ಶಂಕರ್‌ಗನ್ನಿ, ಸದಸ್ಯರಾದ ಇ. ವಿಶ್ವಾಸ್, ಪ್ರಭು, ಶ್ರೀಶಾಂತ್ ಹಾಗೂ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಪಾಲಿಕೆಯ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.ಗೆ ಶನಿವಾರ ಶಾಸಕ ಎಸ್.ಎನ್. ಚನ್ನಬಸಪ್ಪ, ಅಧಿಕಾರಿಗಳು ಪೂಜೆ ಸಲ್ಲಿಸಿ ಅರಣ್ಯ ಇಲಾಖೆಗೆ ಅಧಿಕೃತ ಆಹ್ವಾನ ನೀಡಿದರು.