ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯವನ್ನು ತಿಳಿದುಕೊಳ್ಳುವ ಮೊದಲು ಸಾಹಿತಿಯ ವೈಯಕ್ತಿಕ ಬದುಕು-ಬರಹನ್ನು ತಿಳಿದುಕೊಳ್ಳಬೇಕು. ಬದುಕು-ಬರಹವನ್ನು ತಿಳಿದುಕೊಳ್ಳದಿದ್ದರೆ ಸಾಹಿತ್ಯ ಅರ್ಥವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಮೇಲುಕೋಟೆಯ ಡಾ.ಪು.ತಿ.ನ.ಟ್ರಸ್ಟ್, ಜಿಲ್ಲಾ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡದ ಮಹಾಕವಿ ಡಾ.ಪು.ತಿನ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪು.ತಿ.ನ. ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕವಿ. ಅವರ ಸಾಹಿತ್ಯ ಕಷ್ಟ ಎನಿಸಬಹುದು. ಆದರೆ, ಸಾಹಿತ್ಯದೊಳಗಿನ ಭಾವ, ಸಂದೇಶ, ಮೌಲ್ಯ ಈಗಲೂ ಪ್ರಸ್ತುತ. ಚಿಂತನೆಗಳ ಮೂಲಕ ಅವರನ್ನು ಜೀವಂತವಾಗಿಡಬೇಕು. ಒಳ್ಳೆಯ ಸಾಧನೆ ಮತ್ತು ಸಮಸ್ಯೆ ಮುಕ್ತ ಬದುಕಿಗೆ ಸಾಹಿತ್ಯವನ್ನು ಓದಬೇಕು. ಸಾಹಿತ್ಯವನ್ನು ಓದದಿದ್ದರೆ ಬದುಕು ನಿರರ್ಥಕ ಎಂದು ವಿಶ್ಲೇಷಿಸಿದರು.ನವೋದಯ ಸಾಹಿತ್ಯದಲ್ಲಿ ಆಸ್ಥಾನ ಕವಿಯಾಗಿ ತಾವು ಬರೆದ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ಅವರ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಾಹಿತ್ಯ ಗಟ್ಟಿಯಾಗಿದ್ದರೆ ಅದು ಸದಾ ಕಾಲಕ್ಕೂ ಜೀವಂವಾಗಿರುತ್ತದೆ. ಆಧ್ಯಾತ್ಮಿಕ ಸಾಹಿತ್ಯದ ಬದುಕು ಅಗತ್ಯ, ಆಧುನೀಕತೆಯ ಜೊತೆಯಲ್ಲಿ ಸಂಪ್ರದಾಯವೂ ಉಳಿಯಬೇಕು. ಆಧ್ಯಾತ್ಮಿಕ ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕು. ಸಾಹಿತ್ಯ ಕೃತಿಯನ್ನು ಸಂಗೀತ ಕೃತಿಯನ್ನಾಗಿಸುವುದು ಸುಲಭದ ಮಾತಲ್ಲ. ಸಾಹಿತ್ಯ-ಸಂಗೀತ ಜೊತೆಯಾಗಿ ಹೋದಾದ ಜೀವಂತವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳಿಗಿಂತ ಜೀವನದಲ್ಲಿ ಗಳಿಸುವ ಅಂಕಗಳು ಮುಖ್ಯ. ಜೀವನದ ಮೌಲ್ಯಗಳಿಗೆ ಬೆಲೆ ಕೊಡಬೇಕು. ತಂದೆ-ತಾಯಿಯರ ಕನಸನ್ನು ನನಸು ಮಾಡುವುದು ನಿಮ್ಮ ಗುರಿಯಾಗಬೇಕು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಪು.ತಿ.ನ. ಮತ್ತು ಕೆ.ಎಸ್.ನ. ಇಬ್ಬರೂ ನಮ್ಮ ಜಿಲ್ಲೆಯ ಕವಿಗಳು. ಆದರೆ, ಟ್ರಸ್ಟ್ ಕಾರ್ಯ ಚಟುವಟಿಕೆಗಳೆಲ್ಲವೂ ಬೆಂಗಳೂರಿಗಷ್ಟೇ ಸೀಮಿತವಾಗಿತ್ತು. ಪ್ರೊ.ಎಂ.ಕೃಷ್ಣೇಗೌಡರು ಅಧ್ಯಕ್ಷರಾದ ಬಳಿಕ ಪು.ತಿ.ನ.ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಮಂಡ್ಯಕ್ಕೆ ತಂದಿದ್ದಾರೆ. ಇಬ್ಬರು ಕವಿಧ್ವಯರ ತವರಿನಲ್ಲೇ ಕಾರ್ಯಕ್ರಮಗಳು ನಡೆದಾಗ ಅವರು ನಮ್ಮವರೆಂಬ ಭಾವನೆಯೊಂದಿಗೆ ಸ್ಥಳೀಯರು ಕೈಜೋಡಿಸುತ್ತಾರೆ. ಅದರಿಂದ ಕಾರ್ಯಕ್ರಮದ ಮಹತ್ವ ಹೆಚ್ಚುತ್ತದೆ. ಸ್ಥಳೀಯರಿಗೆ ಅವರನ್ನು ಅರ್ಥೈಸಿಕೊಡುವುದಕ್ಕೆ, ಅಭಿಮಾನ ಮೂಡಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ, ಕನ್ನಡದ ಪ್ರಖ್ಯಾತ ಲೇಖಕ ಜೋಗಿ, ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಹರ್ಷ, ಡಾ.ಪು.ತಿ.ನ.ಟ್ರಸ್ಟ್ ಸದಸ್ಯ ಡಾ.ಪಿ. ಸುಮಾರಾಣಿ ಕುಮಾರ ಕೊಪ್ಪ ಇದ್ದರು.ಕವಿಯೊಬ್ಬ ಸೃಷ್ಟಿಕರ್ತ: ಜೋಗಿಕನ್ನಡಪ್ರಭ ವಾರ್ತೆ ಮಂಡ್ಯ
ಕವಿ ಯಾರಿಗೂ ಸಾಧ್ಯವಾಗದ ಸಂಗತಿಗಳನ್ನು ಮೂಡಿಸುವುದರಿಂಲೇ ಆತನೊಬ್ಬ ಸೃಷ್ಟಿಕರ್ತನಾಗಿ ಕಾಣುತ್ತಾನೆ ಎಂದು ಕನ್ನಡದ ಪ್ರಖ್ಯಾತ ಲೇಖಕ ಜೋಗಿ ಅವರು ಅಭಿಪ್ರಾಯಪಟ್ಟರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಡಾ.ಪು.ತಿ.ನ. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿ, ಪು.ತಿ.ನ. ಅವರು ಕೇವಲ ಕವಿಯಷ್ಟೇ ಅಲ್ಲ. ಮಹಾನ್ ದೈವಭಕ್ತರು. ಸೂರ್ಯನ ಆರಾಧಕರೂ ಆಗಿದ್ದರು. ಸೋಮಾರಿತನ, ಅಹಂಕಾರ ತುಂಬದ ಲೇಖಕರೆಂದರೆ ಡಾ.ಪು.ತಿ.ನರಸಿಂಹಾಚಾರ್. ಪು.ತಿ.ನ ಅವರ ಮಾತೃಭಾಷೆ ತಮಿಳು, ಡಿ.ವಿ.ಗುಂಡಪ್ಪನವರ ಮಾತೃಭಾಷೆ ತೆಲುಗು. ಈ ಇಬ್ಬರೂ ಕವಿಗಳು ಕನ್ನಡವನ್ನು ಕಲಿತು, ಅರ್ಥೈಸಿಕೊಂಡು ರಚಿಸಿದ ಸಾಹಿತ್ಯ ಅರ್ಥವಾಗಲಿಲ್ಲವೆಂದರೆ ಅದು ನಮ್ಮ ಸೋಮಾರಿತನವೋ, ಮೂರ್ಖತನವೋ ಗೊತ್ತಿಲ್ಲ ಎಂದರು. ಕವಿ ಬರೆಯುವ ಸಾಲುಗಳು ಕೇವಲ ಕವಿಯ ಸಾಲುಗಳಲ್ಲ. ಅವು ಮಾರ್ಗದರ್ಶನ ತೋರುವ ಸಾಲುಗಳು. ಪು.ತಿ.ನ. ಅವರ ರೂಪ ಮತ್ತು ಚೈತನ್ಯ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಮರವಾಗಿ ಉಳಿಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪು.ತಿ.ನ. ಅವರ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು. ಅದರಲ್ಲೂ ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯುವಿಗೆ ಶ್ರೀಕೃಷ್ಣ ಚಕ್ರವ್ಯೆಹದೊಳಗೆ ನುಗ್ಗುವ ಮಾರ್ಗವನ್ನು ಹೇಳಿಕೊಟ್ಟನೇ ವಿನಃ ಹೊರಬರುವ ದಾರಿಯನ್ನು ಹೇಳಿಕೊಡಲಿಲ್ಲ. ಅದೇ ರೀತಿ ಆಧುನಿಕ ಶಿಕ್ಷಣ ಪದ್ಧತಿಯೂ ಚಕ್ರವ್ಯೆಹದಂತೆಯೇ. ಅದರೊಳಗೆ ನುಗ್ಗುವ ದಾರಿ ಗೊತ್ತೇ ಹೊರತು ಹೊರಬರುವ ದಾರಿ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಬೇಕಾದರೆ ಸಾಹಿತ್ಯವನ್ನು ಓದಬೇಕು. ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡಾಗ ಆ ಚಕ್ರವ್ಯೆಹವನ್ನು ಬೇಧಿಸಿ ಹೊರಬರಬಹುದು ಎಂದರು.ಹಣ ಸಂಪಾದನೆ ಗುರಿಯಾಗಬಾರದು: ಪ್ರೊ.ಎಂ.ಕೃಷ್ಣೇಗೌಡ
ಕನ್ನಡಪ್ರಭ ವಾರ್ತೆ ಮಂಡ್ಯಆಧುನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಹಣ ಸಂಪಾದಿಸುವ ಮಾರ್ಗವನ್ನು ತೋರಿಸುತ್ತಿದೆಯೇ ವಿನಃ ವಿವೇಕವನ್ನು ಮೂಡಿಸುತ್ತಿಲ್ಲ. ನೀವು ಜಾಣರು, ವಿವೇಕಿಗಳಾಗಬೇಕಾದರೆ ಸಾಹಿತ್ಯವನ್ನು ಓದುವಂತೆ ಪ್ರೊ.ಎಂ.ಕೃಷ್ಣೇಗೌಡ ಅವರು ಸಲಹೆ ನೀಡಿದರು.
ದುಡ್ಡು ಮಾಡುವುದು ಅಪರಾಧವಲ್ಲ. ಆದರೆ, ಅದೇ ಜೀವನದ ಗುರಿಯಲ್ಲ. ಅದರಿಂದ ಹೊರಗೂ ಏನೋ ಇದೆ ಎನ್ನುವುದನ್ನು ತಿಳಿಯಬೇಕು. ಆ ಸಾಮರ್ಥ್ಯ ಕವಿ, ಕತೆಗಾರ, ಲೇಖಕನಿಗೆ ಇದೆ. ಓದು ಜ್ಞಾನಸಂಪಾದನೆಗೆ ಮಾತ್ರ. ಚೆನ್ನಾಗಿ ಓದಿ ಉದ್ಯೋಗ ಗಳಿಸಿ ಲಕ್ಷಾಂತರ ರು. ಹಣ ಸಂಪಾದಿಸಿದರೆ ಪ್ರಯೋಜನವಿಲ್ಲ. ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಮಹಾಕವಿಗಳು, ಸಾಹಿತಿಗಳು ಬರೆದಿರುವ ಸಾಹಿತ್ಯವನ್ನು ಅರ್ಥೈಸಿಕೊಂಡು ಹೊಸ ಸಾಹಿತಿಗಳು ಉದಯಿಸಬೇಕು. ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದರು.ವಿದ್ಯಾರ್ಥಿಗಳಿಗೆ ಕವಿಗಳು, ಸಾಹಿತಿಗಳ ವಿಚಾರವನ್ನು ತಲುಪಿಸುವುದು ಬಹಳ ಮುಖ್ಯ. ಮಕ್ಕಳ ಮನಸ್ಸಿನಲ್ಲಿ ಇಂತಹ ವಿಚಾರಗಳು ಆಳವಾಗಿ ಬೇರೂರಿ ಅವರು ಸಾಹಿತ್ಯಾಸಕ್ತಿಯೊಂದಿಗೆ ಅಧ್ಯಯನದಲ್ಲಿ ತೊಡಗುವಂತಾದರೆ ಇಂತಹ ಕಾರ್ಯಕ್ರಮಗಳು ಸಾರ್ಥಕತೆ ಪಡೆಯುತ್ತವೆ ಎಂದರು.