- ಶಾದಿಮಹಲ್‌ನಲ್ಲಿ ೮೦೦ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ
- - -ಮಲೇಬೆನ್ನೂರು: ಬೆಂಗಳೂರಿನ ಹೊರವಲಯದಲ್ಲಿ ೧೦ ಎಕರೆ ಪ್ರದೇಶದಲ್ಲಿ ವೃದ್ಧಾಶ್ರಮ, ಬಡವರಿಗೆ ಶಾಲೆ ಮತ್ತು ಆಸ್ಪತ್ರೆ ಸ್ಥಾಪನೆ ಮಾಡುವ ಕನಸು ಇದೆ ಎಂದು ನೋವೆಲ್ ಹೋಪ್ ಫೌಂಡೇಶನ್ ಸಂಸ್ಥೆ ಮುಖ್ಯಸ್ಥ ದೀಪಕ್ ಹೇಳಿದರು.
ಪಟ್ಟಣದ ನಂದಿಗುಡಿ ರಸ್ತೆಯ ಶಾದಿಮಹಲ್‌ನಲ್ಲಿ ಸರ್ಕಾರಿ/ ಖಾಸಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ೮೦೦ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿ ಅವರು ಮಾತನಾಡಿದರು. ಕಳೆದ ವರ್ಷ ನಮ್ಮ ಸಂಸ್ಥೆಯಿಂದ ೨೪ ಶಾಲೆಗಳ ೨೫೦೦೦ ಮಕ್ಕಳಿಗೆ ಅನುಕೂಲವಾಗುವ ಶುದ್ಧ ನೀರು ಘಟಕ, ಶೌಚಾಲಯ, ನೋಟ್‌ಬುಕ್‌ಗಳನ್ನು ವಿತರಣೆ ಮಾಡಿದ್ದೇವೆ. ಕೊಳಚೆ ಪ್ರದೇಶದಲ್ಲೂ ಸಮೀಕ್ಷೆ ನಡೆಸಿ ಔಷಧಿ, ಅಗತ್ಯ ಇರುವವರಿಗೆ ಚಿಕಿತ್ಸೆ ನೆರವು ನೀಡಿದ್ದೇವೆ ಎಂದರು.ಮುಖ್ಯ ಶಿಕ್ಷಕ ಆರ್. ಮಠ ಮಾತನಾಡಿ, ಹರಿಹರ ತಾಲೂಕಿನ ಶಾಲೆಗಳಲ್ಲಿ ನೂರಾರು ಮಕ್ಕಳ ಹಾಜರಾತಿ ಉತ್ತಮಪಡಿಸಲು ಬೆಂಗಳೂರಿನ ಕಾರ್ಪೋರೇಟ್ ಸಂಸ್ಥೆಗಳು ನೋಟ್‌ಬುಕ್, ಬ್ಯಾಗ್, ಕಲಿಕಾ ಸಾಮಗ್ರಿಗಳು, ನಲಿಕಲಿ ವಸ್ತುಗಳು ಇನ್ನಿತರೆ ಸಹಾಯ ಮಾಡಿದ್ದು ಮರೆಯಲು ಸಾಧ್ಯವಿಲ್ಲ. ಅದಕ್ಕೆ ಶರಣ್‌ಕುಮಾರ್ ಹೆಗಡೆ ಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಮನವೊಲಿಸಿ ಪೋಷಕರ ಮತ್ತು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದಾರೆ ಎಂದರು.
ಶಿಕ್ಷಕ ಮುಷ್ತಾಕ್ ಅಹ್ಮದ್ ಮಾತನಾಡಿ, ಭಾರತೀಯರಲ್ಲಿ ದಾನ, ಧರ್ಮ ರಕ್ತಗತವಾಗಿದೆ. ಬಡವರಿಗೆ ನೆರವು ನೀಡಿದಲ್ಲಿ ಮಕ್ಕಳ ರೂಪದಲ್ಲಿ ಭಗವಂತ ಆಶೀರ್ವಾದ ಮಾಡುತ್ತಾನೆ ಎಂದರು.
ಸಂಘಟಕ ಶರಣ್‌ಕುಮಾರ್ ಹೆಗಡೆ, ಪತ್ರಕರ್ತ ಎನ್.ಎಲ್. ಪ್ರಕಾಶ್, ಸದಾನಂದ, ರಾಘವೇಂದ್ರ, ಪೀರು ನಾಯ್ಕ್, ಆನಂದ್ ಭೂತ ರೆಡ್ಡಿ, ಪ್ರವೀಣ್, ಸಾಕಮ್ಮ, ಭೀಮಪ್ಪ, ಶಾಂತ, ಗುಲಾಬ್ ಜಾನ್, ಅಷ್ಪಾಕ್ ಅಹಮ್ಮದ್, ಸಮೀನಾ, ಎಸ್‌ಡಿಎಂಸಿ ಅಧ್ಯಕ್ಷ ರೋಷನ್ ಜಮೀರ್ ಹಾಗೂ ವಿವಿಧ ಶಾಲೆಗಳ ಉಪಾಧ್ಯಾಯರು, ನೂರಾರು ಮಕ್ಕಳು ಇದ್ದರು.
- - --ಚಿತ್ರ೧: ಮುಖ್ಯಸ್ಥ ದೀಪಕ್ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.