ಕನ್ನಡಪ್ರಭ ವಾರ್ತೆ ಬೆಂಗಳೂರು

ತ್ಯಾಜ್ಯದಿಂದ ಸ್ವಾತಂತ್ರ್ಯಅಭಿಯಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳದ ಸರ್ಕಾರಿ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಆ.1ರಿಂದ ಆರಂಭಿಸಿರುವ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಪ್ರಗತಿ ಪರಿಶೀಲನಾ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಕೆಲ ಇಲಾಖೆಗಳು ಅಭಿಯಾನ ಆರಂಭಿಸಿರುವುದಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದು, ಇಲಾಖೆಯ ಕಚೇರಿಗಳ ಆವರಣದಲ್ಲಿರುವ ದೀರ್ಘಕಾಲದ ತ್ಯಾಜ್ಯವನ್ನು ತೆರವುಗೊಳಿಸುತ್ತಿಲ್ಲ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತಂದರು, ಇದರಿಂದ ಗರಂ ಆದ ಸಚಿವರು, ಕೂಡಲೇ ಅಂತಹ ಇಲಾಖೆಗಳಿಗೆ ನೋಟೀಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿದರು.

ನಗರದಲ್ಲಿ ಕಳೆದ 6 ದಿನಗಳಲ್ಲಿ 453 ಸ್ಥಳಗಳಿಂದ 10,056 ಮೆಟ್ರಿಕ್ ಟನ್ ನಿರ್ಮಾಣ ಮತ್ತು ಕಟ್ಟಡ ತೆರವು (ಸಿ ಆ್ಯಂಡ್ ಡಿ) ತ್ಯಾಜ್ಯ ತೆರವು ಮಾಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳು ತಮ್ಮ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ತ್ಯಾಜ್ಯವನ್ನು ಕಡ್ಡಾಯವಾಗಿ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದರು.

ಇತರೆ ಇಲಾಖೆಗಳು ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳ ಮಾಹಿತಿಯನ್ನೂ ಸಂಗ್ರಹಿಸಬೇಕು. ತ್ಯಾಜ್ಯ ತೆರವು ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂಬುದು ನಾಗರಿಕರಿಗೆ ಅರಿವಾಗುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.


ಮಳೆಯ ಸಮಯದಲ್ಲಿ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಟ್ಟಡ ನಿರ್ಮಾಣದ ಭಗ್ನಾವಶೇಷಗಳನ್ನು ಸರ್ಕಾರ ಗುರುತಿಸಿರುವ ನಿಗದಿತ ಸ್ಥಳಗಳಲ್ಲಿಯೇ ವಿಲೇವಾರಿ ಮಾಡಬೇಕು. ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ತೆರವಿಗೆ ಟಿಪ್ಪರ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕು.ಅವಶ್ಯಕತೆಯಿರುವ ಜೆಸಿಬಿ, ಟ್ರ್ಯಾಕ್ಟರ್, ಹಿಟಾಚಿಗಳನ್ನು ಕೂಡಾ ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಂಸ್ಥೆಯ ಸಿಇಒ ಕರೀಗೌಡ, ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಜಗದೀಶ್, ಡಾ. ರಾಜೇಂದ್ರ ಕೆ.ವಿ ಉಪಸ್ಥಿತರಿದ್ದರು.

ಬೆಳಗ್ಗೆ 7ರಿಂದಲೇ ಸಂಚಾರಿ

ಪೊಲೀಸರೊಂದಿಗೆ ಚರ್ಚೆ

ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು ಬೆಳಿಗ್ಗೆ 7ರಿಂದ 10 ಹಾಗೂ ಸಂಜೆ 5ರಿಂದ 9ರವರೆಗೆ ತ್ಯಾಜ್ಯ ತೆರವುಗೊಳಿಸುತ್ತಿರುವ ಟಿಪ್ಪರ್ ವಾಹನಗಳ ಸಂಚಾರಕ್ಕೆ ಅನುಮತಿ ನೀಡದ ಕಾರಣ ತ್ಯಾಜ್ಯ ತೆರವು ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಈ ಸಂಬಂಧ ಮುಖ್ಯ ಆಯುಕ್ತರು ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿಯಾನದಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೆ ಎಲ್ಲ ಸಮಯದಲ್ಲಿಯೂ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಸೋಮಣ್ಣ ನಿರ್ದೇಶನದಂತೆ

ರೈಲ್ವೆ ಜಾಗದಲ್ಲಿ ಕೆಲಸವಾಗಿಲ್ಲ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ನಿರ್ದೇಶನದಂತೆ ರೈಲ್ವೆ ಇಲಾಖೆಯ ಜಮೀನುಗಳಲ್ಲಿ ಸ್ವಚ್ಛತಾ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಈ ಸಂಬಂಧ ಮುಖ್ಯ ಆಯುಕ್ತರು ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯವನ್ನು ತ್ವರಿತಗೊಳಿಸುವಂತೆ ಕೃಷ್ಣ ಸೂಚಿಸಿದರು.