ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಗಂಡಸರಿದ್ದರೆ ಅಭಿವೃದ್ಧಿ ಕೆಲಸ ತೋರಿಸಿ ಮತ ಕೇಳಿ, ಕೇವಲ ಮೋದಿ ಅವರನ್ನು ಮುಂದಿಟ್ಟುಕೊಂಡು ಮತ ಕೇಳಿದರೆ ಅದು ಗಂಡಸ್ತನ ಅಲ್ಲ. ಬಿಜೆಪಿಯಲ್ಲಿ ಅಭಿವೃದ್ಧಿಕ್ಕಿಂತ ಮೋದಿ ನೋಡಿ ಮತ ಹಾಕ್ರಿ ಎಂಬ ಸಂಸ್ಕಾರ ಬೆಳೆದು ಬಂದಿದೆ ಎಂದು ಸಚಿವ ಶಿವಾನಂದ ಪಾಟೀಲ ಬಿಜೆಪಿ ವಿರುದ್ಧ ಹರಿಹಾಯ್ದರು.ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಲೋಕಸಭೆಗೆ ಪ್ರಕಾಶ ರಾಠೋಡ ಅವರನ್ನು ಸ್ಪರ್ಧಿಸಿದ್ದಾರೆ. ಅವರಿಗೆ ಮತ ಹಾಕಲಿಲ್ಲ, ಸಭೆಯಲ್ಲಿ ಹಾಕುತ್ತೇವೆ ಎಂದು ಹೇಳಿ ಹೋಗಿ, ಮತದಾನದಲ್ಲಿ ಮೋದಿ ನೋಡಿ ಮತ ಹಾಕಿದ್ದೇವೆ ಎಂದು ಹೇಳುತ್ತಿರಿ. ಮೋದಿಗೆ ಮತ ನೀಡಿ ನೀವು ಅಭಿವೃದ್ದಿ ಸಾಧಿಸಿದ್ದು ಏನು ಎಂದು ಪ್ರಶ್ನಿಸಿದ ಅವರು, ಶಿರಾಡೋಣ-ಲಿಂಗಸೂರು ರಸ್ತೆ ಮಾಡಿಕೊಳ್ಳಲು ಆಗಿಲ್ಲ. ನಿಮಗೇನು ಉದ್ದಾರ ಮಾಡುತ್ತಾರೆ ಎಂದು ಖಾರವಾಗಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, 70 ವರ್ಷ ದೇಶವಾಳಿದ ಕಾಂಗ್ರೆಸ್ಸಿನವರು ದೇಶಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಬ್ರಿಟಿಷರು ದೇಶಬಿಟ್ಟು ಹೋದಾಗ, ಒಂದು ಗುಂಡು ಸೂಚಿಯೂ ತಯಾರಾಗದಂತ ಇರುವ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಸೂಜಿಯಿಂದ ಹಿಡಿದು ವಿಜ್ಞಾನ,ತಂತ್ರಜ್ಞಾನ ಅಭಿವೃದ್ದಿಪಡಿಸಿದ್ದು ಕಾಂಗ್ರೆಸ್ ಪಕ್ಷ ಎಂಬುದು ತಿಳಿದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಆರಂಭಿಸಿದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯಾಗಿ ಪರಿವರ್ತಿಸಿ ಯುವಕರನ್ನು ನಿರುದ್ಯೋಗಿಯನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಿದರು.ಶಾಸಕ ಅಪ್ಪಾಜಿ ನಾಡಗೌಡ ಮಾತನಾಡಿ, ದೇಶದ ನಾಲ್ಕೈದು ಜನರಿಗೆ ಮಾತ್ರ ಪ್ರಧಾನಿ ಮೋದಿ ಅವರು ಶ್ರೀಮಂತ ಮಾಡಿದ್ದಾರೆ ವಿನ , ದೇಶದ ಎಲ್ಲ ಜನರನ್ನು ಬಡವರನ್ನಾಗಿಸಿದ್ದಾರೆ. ₹350 ಸಂಬಳ ಪಡೆಯುತ್ತಿರುವ ಒಬ್ಬ ಉದ್ದಿಮೆದಾರ ಇಂದು ದೇಶದ 3ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾನೆ ಎಂದರೆ ಅದಕ್ಕೆ ಮೋದಿ ಅವರ ಕೃಪೆ ಇದೆ. ಪ್ರೀತಿಯ ಮೂಲಕ ದೇಶವನ್ನು ಕಟ್ಟಲು ಸಾಧ್ಯ, ಧ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ದೇಶ, ಜಿಲ್ಲೆಯ ಅಭಿವೃದ್ಧಿಯನ್ನು ಇಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಚಿಂತನೆ ಹೊಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮಾತನಾಡಿದರು. ಸಿಂದಗಿ ಶಾಸಕ ಅಶೋಕ ಮನಗೂಳಿ, ವಿಠಲ ಕಟಕದೊಂಡ, ಎಐಸಿಸಿ ವೀಕ್ಷಕ ಸಯ್ಯದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ಹಮೀದ ಮುಶ್ರೀಪ, ಮಾಜಿ ಶಾಸಕ ಡಾ.ಮಕಬೂಲ ಬಾಗವಾನ, ಕಾಂತಾ ನಾಯಕ, ಸುನೀಲಗೌಡ ಪಾಟೀಲ,ಶಂಕರ ಚವ್ಹಾಣ, ಬಾಬುಸಾಹುಕಾರ ಮೇತ್ರಿ, ಜಾವೀದ ಮೋಮಿನ,ಇಲಿಯಾಸ ಬೊರಾಮಣಿ, ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ,ಅವಿನಾಶ ಬಗಲಿ,ನಿರ್ಮಲಾ ತಳಕೇರಿ, ಶೈಲಜಾ ಜಾಧವ ಮೊದಲಾದವರು ವೇದಿಕೆ ಮೇಲೆ ಇದ್ದರು.