ಚನ್ನಪಟ್ಟಣ: ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆ ಅಲ್ಲ, ಪ್ರಾಯಶ್ಚಿತ ಯಾತ್ರೆ. ಅದು ನಿಖಿಲ್ ಪಟ್ಟಾಭಿಷೇಕ ಯಾತ್ರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟ್ಟಾಭಿಷೇಕ ಮಾಡಲು ನಿನ್ನೆ ಕುಮಾರಸ್ವಾಮಿ ಭೈರಮಂಗಲದಲ್ಲಿ ಚಾಲನೆ ಕೊಟ್ಟಿದ್ದರು. ಇವತ್ತು ಅವರ ತಾತ ಇಲ್ಲಿ ಚಾಲನೆ ಕೊಡೋಕೆ ಬಂದಿದ್ದಾರೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ತಾಲೂಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿರುವ ಸಚಿವರು, ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಾದಯಾತ್ರೆ ಮಾಡೋರಿಗೆ ಯಾರಿಗಾದರೂ ಸೀರಿಯೆಸ್‌ನೆಸ್ ಇದೆಯಾ, ರೈತರ ಪರ ಕಾಳಜಿ ಇತ್ತಾ ಅಲ್ಲಿ ಎಂದು ಪ್ರಶ್ನಿಸಿದರು.

ಪಾದಯಾತ್ರೆಗೆ ಬಿಜೆಪಿ ನಾಯಕರ ಅಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅದನ್ನು ನಾನು ಹೇಳೋದಿಲ್ಲ. ನೀವು ವಿಶ್ಲೇಷಣೆ ಮಾಡಬೇಕು. ಬಿಜೆಪಿಯವರಿಗೆ ಸತ್ಯ ಅರ್ಥವಾಗಿದೆ. ವಾಸ್ತವಾಂಶದ ಅರಿವಾಗಿದೆ. ಅದಕ್ಕೆ ಅಂತರ ಕಾಯ್ದುಕೊಂಡಿದ್ದಾರೆ. ಇವರು ನಿಖಿಲ್‌ಗೆ ಪಟ್ಟಾಭಿಷೇಕ ಮಾಡೋಕೆ ಹೊರಟಿದ್ದಾರೆ ಮಾಡಲಿ. ಪಾದಯಾತ್ರೆ ಅನ್ನೋ ಬದಲು ಪಟ್ಟಾಭಿಷೇಕ ಯಾತ್ರೇನೆ ಮಾಡಲಿ ಜನ ಏನು ಬೇಜಾರು ಮಾಡ್ಕೊಳೊಲ್ಲ ಎಂದರು.

ಬಾಲಕೃಷ್ಣಗೆ ಸಚಿವ ಸ್ಥಾನ ಸಿಕ್ಕಿರೋ ಬಗ್ಗೆ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ, ಅವರು ಸಿಎಂ ಆಗಿದ್ದವರು, ಇಂದು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಯಕಶ್ಚಿತ್ ಆದರೆ ಇದು ನಮಗೆ ದೊಡ್ಡದು. ದೇವರು ನಮಗೆ ಕರುಣಿಸಿದ್ದಾನೆ. ಅವರು ಯಾರಿಗೂ ಪಟ್ಟಾಭಿಷೇಕ ಮಾಡೋಲ್ಲ. ಅವರು ಅವರೇ ಸ್ಥಾನಮಾನ ಪಡ್ಕೊತಾರೆ ಎಂದರು.

ನಾನು ಜೆಡಿಎಸ್‌ನಲ್ಲಿದ್ದಾಗ ಮಂತ್ರಿ ಮಾಡಬಹುದಿತ್ತು. ಆದರೆ ಅವರು ಮಾಡಲಿಲ್ಲ. ನನಗೆ ಮಂತ್ರಿಸ್ಥಾನ ಕೈ ತಪ್ಪಿದ್ದಾಗ ಒಂದಷ್ಟು ಸಚಿವರು ಹೋಗಿ ಬಾಲಕೃಷ್ಣಗೆ ಬಿಡಿಎ ಅಧ್ಯಕ್ಷ ಸ್ಥಾನ ಕೊಡಿ ಅಂತ ಕೇಳಿದರು. ಅದಕ್ಕವರು ದುಡ್ಡು ಹೊಡೆಯೋಕೆ ಕೊಡಬೇಕಾ ಅಂತ ಹೇಳಿದ್ದರು. ಇಂತವರಿಂದ ಕಾರ್ಯಕರ್ತರಿಗೆ ಏನ್ ತಾನೆ ಸಿಗುತ್ತೆ ಹೇಳಿ ಎಂದು ಕಿಡಿಕಾರಿದರು.


ನಾನು ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಇದು ಸಿಎಂ ಅವರ ಕ್ಷೇತ್ರ, ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಏನು ಇರಲಿಲ್ಲ. ಆದರೆ ಸಿಎಂ, ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಸ್ಥಾನ ಕೊಟ್ಟಿದ್ದಾರೆ ಎಂದರು.

ಬಾಕ್ಸ್...................

ಸಚಿವ ಬಾಲಕೃಷ್ಣರಿಗೆ ಅದ್ಧೂರಿ ಸ್ವಾಗತ

ಬರ ಪರಿಸ್ಥಿತಿ ಅಧ್ಯಯನಕ್ಕೆ ತಾಲೂಕಿಗೆ ಆಗಮಿಸಿದ ಸಚಿವ ಎಚ್.ಸಿ.ಬಾಲಕೃಷ್ಣ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರವಾಸಿ ಮಂದಿರ ಬಳಿ ಬೃಹತ್ ಸೇಬಿನ ಹಾರ, ರೇಷ್ಮೆಗೂಡಿನ ಹಾರ ನೂತನ ಸಚಿವ ಅದ್ಧೂರಿ ಸನ್ಮಾನ ಮಾಡಿದರು. ವಿವಿಧ ಕಾಲತಂಡಗಳೊಂದಿಗೆ ಬಾಲಕೃಷ್ಣಗೆ ಅದ್ಧೂರಿ ಸ್ವಾಗತ ಕೋರಿದರು. ಇದಕ್ಕೂ ಮುನ್ನ ಸಚಿವ ಬಾಲಕೃಷ್ಣ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

(ಪ್ಯಾಕೇಜ್)

ಜೆ.ಬ್ಯಾಡರಹಳ್ಳಿಯಲ್ಲಿ ಸಚಿವರಿಂದ ಬರ ಪರಿಸ್ಥಿತಿ ವೀಕ್ಷಣೆ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ವೀಕ್ಷಿಸಿ, ಅಧ್ಯಯನ ನಡೆಸಿ, ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಚನ್ನಪಟ್ಟಣ, ಹಾರೋಹಳ್ಳಿ ಹಾಗೂ ಕನಕಪುರದಲ್ಲಿ ಬರ ಪರಿಸ್ಥಿತಿ ವೀಕ್ಷಿಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬರ ನಿರ್ವಹಣೆ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಬರ ಪರಿಸ್ಥಿತಿ ಪರಿಶೀಲನೆ ಮಾಡಲು ತಾಲೂಕಿನ ಜೆ.ಬ್ಯಾಡರಹಳ್ಳಿ ರೈತ ಮಾಯಿಗೆಗೌಡರ ಜಮೀನಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳ ಕುರಿತು ಖುದ್ದು ಪರಿಶೀಲನೆ ನಡೆಸಿದರು.

ಮುಂಗಾರು ಮಳೆ ಕೊರತೆಯಿಂದಾಗಿ ಇಲ್ಲಿ ಅಲಸಂದೆ, ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ರೈತರು ಬೆಳೆ ಕೈಕೊಡುವ ಆತಂಕದಲ್ಲಿದ್ದಾರೆ. ರೈತರಿಂದಲೇ ಅವರ ಸಂಕಷ್ಟ ಹಾಗೂ ಅಗತ್ಯತೆಗಳ ಕುರಿತು ಸಚಿವರು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಶಾಸಕರಾದ ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಎಸ್.ರವಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಉಪಾಧ್ಯಕ್ಷ ಎಸ್.ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಜೆ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಂಬಿಕಾ, ಚನ್ನಪಟ್ಟಣ ತಹಸೀಲ್ದಾರ್ ಗಿರೀಶ್, ತಾಪಂ ಇಒ ಇತರರಿದ್ದರು.

ಪೊಟೋ೧೦ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ಸಚಿವ ಬಾಲಕೃಷ್ಣ ಬರ ಪರಿಸ್ಥಿತಿ ಅಧ್ಯಯನ ನಡೆಸಿದರು.

ಪೊಟೋ೧೦ಸಿಪಿಟಿ೩:

ಚನ್ನಪಟ್ಟಣದ ಪ್ರವಾಸಿ ಮಂದಿರದ ಬಳಿ ಸಚಿವ ಬಾಲಕೃಷ್ಣರಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು.

ಪೊಟೋ೧೦ಸಿಪಿಟಿ೪:

ಚನ್ನಪಟ್ಟಣ ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಾಲಕೃಷ್ಣ ವಿಶೇಷ ಪೂಜೆ ಸಲ್ಲಿಸಿದರು.