ಕನ್ನಡಪ್ರಭ ವಾರ್ತೆ ರಾಮನಗರ:
ನನಗೀಗ 93 ವರ್ಷ ವಯಸ್ಸು. ಶರೀರಕ್ಕೆ ವಯಸ್ಸಾಗಿದ್ದು, ಬುದ್ಧಿ ಇನ್ನೂ ಚೆನ್ನಾಗಿದೆ. ಹೋರಾಟದ ಕಿಚ್ಚು ತಣ್ಣಗಾಗಿಲ್ಲ. ನೀವು ಎರಡು ವರ್ಷ ರಾಜ್ಯವನ್ನಾಳಿ, ನಮಗೇನು ಅಸಮಾಧಾನ ಇಲ್ಲ. ಆದರೆ, ಬಡ ರೈತರ ಹೊಟ್ಟೆ ಮೇಲೆ ಹೊಡೆದು ಸೌಧ ನಿರ್ಮಿಸಲು ನಾನೆಂದೂ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೇರವಾಗಿ ಎಚ್ಚರಿಕೆ ನೀಡಿದರು.ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ 2ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಅವರು ಮಾತನಾಡಿದರು. ದೆಹಲಿಯಲ್ಲಿ ಯಾರ್ಯಾರಿಗೊ ಏನೇನೊ ಭರವಸೆ ಕೊಟ್ಟು ಸಿಎಂ ಆಗಿದ್ದೀರಿ. ಅವರಿಗೆ ಸಹಾಯ ಮಾಡಲು ಬಡ ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ. ರೈತರಿಗೆ ಕಿಂಚಿತ್ತು ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದರು.
ಮುಖ್ಯಮಂತ್ರಿಗಳೇ ಬೇರೊಬ್ಬ ಒಕ್ಕಲಿಗ ನಾಯಕನನ್ನು ಬೆಳೆಯಲು ದೇವೇಗೌಡ ಮತ್ತು ಕುಮಾರಸ್ವಾಮಿ ಬಿಡುತ್ತಿಲ್ಲ ಎಂದು ಸುಳ್ಳು ಆಪಾದನೆ ಮಾಡಬೇಡಿ. ಆಡಳಿತ ಮಾಡಿ, ಬೇಡ ಅನ್ನಲ್ಲ. ರೈತನ ಮಗನಾಗಿ ರೈತರ ಹೊಟ್ಟೆ ಮೇಲೆ ಹೊಡೆದು ಯಾವ ಪುರುಷಾರ್ಥಕ್ಕೆ ಬಿಡದಿ ಟೌನ್‌ಶಿಪ್ ಯೋಜನೆ ತೆಗೆದುಕೊಂಡಿದ್ದೀರಿ ಸತ್ಯ ಹೇಳಿ ಎಂದು ತಿವಿದರು.ಬೆಂಗಳೂರು ಬಿಡಿಎನಲ್ಲಿ 20 ಸಾವಿರ ನಿವೇಶನಗಳು ಹಾಗೂ ಆಪಾರ್ಟ್‌ಮೆಂಟ್‌ಗಳಲ್ಲಿ ಮನೆಗಳು ಖಾಲಿ ಬಿದ್ದಿವೆ. ಅವುಗಳನ್ನು ಖರೀದಿಸುವವರೇ ಇಲ್ಲ. ಇದನ್ನು ಸಚಿವ ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹೀಗಿರುವಾಗ ಎರಡು ಗುಂಟೆ ಜಮೀನು ಉಳಿಸಿಕೊಂಡು ಹಸುಗಳಿಗೆ ಮೇವು ಬೆಳೆಸಿ, ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಹೊಟ್ಟೆ ಮೇಲೆ ಹೊಡೆದು ಯಾರಿಗಾಗಿ ಟೌನ್‌ಶಿಪ್ ಯೋಜನೆ ಮಾಡುತ್ತಿದ್ದೀರಿ. ಈ ಯೋಜನೆಯನ್ನು ತಕ್ಷಣವೇ ಕೈಬಿಡಿ ಎಂದು ಸಿಎಂ ಶಿವಕುಮಾರ್ ಅವರಿಗೆ ದೇವೇಗೌಡರು ಕೈ ಮುಗಿದು ಮನವಿ ಮಾಡಿದರು.ಸಿದ್ದು ಬಗ್ಗೆ ಒಂದು ಮಾತನಾಡಿಲ್ಲ:
ಡಿ.ಕೆ.ಶಿವಕುಮಾರ್ ಅವರೇ ಎರಡು ವರ್ಷ ರಾಜ್ಯವನ್ನಾಳಿ, ನಮಗೇನು ಅಸಮಾಧಾನ ಇಲ್ಲ. ಯಾರೇ ಮುಖ್ಯಮಂತ್ರಿ ಆದರು ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ಬೆಂಬಲಿಸುತ್ತೇವೆ. ಈ ಹಿಂದೆ ಸಿದ್ದರಾಮಯ್ಯ 16 ಬಜೆಟ್ ಮಂಡಿಸಿದರು. ನಾನು ಒಂದೇ ಒಂದು ಮಾತು ಆಡಲಿಲ್ಲ. ಆದರೆ, ನೀವೇಕೆ ಅಸತ್ಯವನ್ನು ಹೇಳಿ ರೖೆತರ ಮನೆ ಹಾಳು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ 2008ರಲ್ಲಿ ಮಾಡಿದ ನಿರ್ಣಯವನ್ನು ನಾನು ಜಾರಿಗೆ ತರುತ್ತೇನೆ ಅನ್ನುತ್ತಾರೆ. ಬೆಂಗಳೂರಿನಲ್ಲಿ ಜನರ ಒತ್ತಡ ನಿಯಂತ್ರಿಸಲು ಬಿಡದಿ ಸೇರಿದಂತೆ ಐದು ನವ ನಗರಗಳ ನಿರ್ಮಾಣ ಮಾಡುವ ನಿರ್ಧಾರವನ್ನು ಕುಮಾರಸ್ವಾಮಿ ಮಾಡಿದರು. ರೈತರ ವಿರೋಧದ ಕಾರಣ ಅದನ್ನು ಕೈಬಿಟ್ಟರು. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು - ಮೈಸೂರು ಕಾರಿಡಾರ್ ಇನ್ಫ್ರಾಸ್ಟ್ರೆಕ್ಚರ್ ಯೋಜನೆ ಮಾಡಿದಾಗ ಬಿಡದಿಯೂ ಸೇರಿತ್ತು. ಆದರೆ, ನಾವ್ಯಾರು ನಿಮ್ಮಂತೆ ರೈತರ ಭೂಮಿಯನ್ನು ಬಲವಂತವಾಗಿ ಕಸಿಯುವ ಕೆಲಸ ಮಾಡಲಿಲ್ಲ. ಟೌನ್‌ಶಿಪ್ ಯೋಜನೆ ಕುಮಾರಸ್ವಾಮಿಯವರ ತೀರ್ಮಾನವೆಂದು ಯಾವ ನಾಲಿಗೆಯಿಂದ ಹೇಳುತ್ತೀರಾ ಎಂದು ತಿರುಗೇಟು ನೀಡಿದರು.ಸರ್ಕಾರದ ಸಮಿತಿ ಮೇಲೆ ಅನುಮಾನ:
ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡರು ಕೂಡ ರೈತರು ಫಲವತ್ತಾದ ಕೃಷಿ ಭೂಮಿ ಹೊಂದಿದ್ದು, ಅವರು ಕೂಡ ಟೌನ್‌ಶಿಪ್ ನಿರ್ಮಾಣ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ರಾಜ್ಯಸರ್ಕಾರ ರಚಿಸಿರುವ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವಾಸ್ತವ ಸ್ಥಿತಿ ಕೊಡುವುದು ಅನುಮಾನ ಎಂದು ಹೇಳಿದರು.ಈಗ ಮುಖ್ಯಮಂತ್ರಿಗಳು ಎಕರೆಗೆ 3 ಕೋಟಿ ಪರಿಹಾರ ಕೊಡುವುದಾಗಿ ಹೇಳಿ ಆಮಿಷವೊಡ್ಡಿ 9600 ಎಕರೆ ಆಕ್ರಮಣ ಮಾಡಲು ಹೊರಟಿದ್ದಾರೆ. ಅವರು ಕನಕಪುರದಲ್ಲಿ ಏನೇನು ಮಾಡಿದ್ದಾರೆ ಅಂತ ಗೊತ್ತಿದೆ. ಬೇಕಾದರೆ ಅಲ್ಲಿ ಯೋಜನೆ ಮಾಡಿ, ಇಲ್ಲಿರುವ ರೈತರನ್ನು ಏಕೆ ಬೀದಿಗೆ ತಳ್ಳುತ್ತೀರಾ ಎಂದು ದೇವೇಗೌಡರು ಪ್ರಶ್ನಿಸಿದರು.18ಕ್ಕೆ ಬೆಂಗಳೂರಲ್ಲಿ ಬಿಡದಿ ಹೋರಾಟ:
ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಕೈಬಿಡುತ್ತಿದ್ದೇವೆ. ಆ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯಲಿದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆಗೆ ಕಣಿಮಿಣಿಕೆ ಟೋಲ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದ ವೇಳೆ ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರ ಧ್ವನಿಯಾಗಿ ನಡೆಯುತ್ತಿದ್ದ ಪಾದಯಾತ್ರೆಗೆ ಹೆದರಿರುವ ರಾಜ್ಯ ಸರ್ಕಾರ, ಪೊಲೀಸರ ಮೇಲೆ ಒತ್ತಡ ಹೇರಿ ಅಡ್ಡಿ ಪಡಿಸಿದೆ ಎಂದು ಆರೋಪಿಸಿದರು. ಕಳೆದ 515 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಭೂಮಿ ಕಸಿಯಲು ಹಾತೊರೆಯುತ್ತಿದೆ. ಸಿಎಂ ಡಿ.ಕೆ ಶಿವಕುಮಾರ್ ಹಿಂದೆ ಇದೇ ಜಿಲ್ಲೆಯ ಜನರ ಬಳಿ ಪೆನ್ನು ಪೇಪರ್ ಕೇಳಿದ್ದರು. ಈಗ ರೈತರ ಭೂಮಿ ಕಿತ್ತುಕೊಳ್ಳೊದಕ್ಕೆ ಪೆನ್ನು, ಪೇಪರ್ ಬಳಸುತ್ತಿದ್ದಾರೆ ಎಂದು ಹರಿಹಾಯ್ದರು.ಈ ಎಲ್ಲಾ ಘಟನೆಗೆ ಸಚಿವ ಎಚ್.ಸಿ.ಬಾಲಕೃಷ್ಣ ಕಾರಣ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿದ್ದಕ್ಕೆ ನಾವೇನು ಹೊಟ್ಟೆ ಕಿಚ್ಚು ಪಡುತ್ತಿಲ್ಲ. ಒಳ್ಳೆಯ ಕೆಲಸ ಮಾಡಿ ಎಂದು ಹಾರೈಸಿದ್ದೇವೆ. ಆದರೆ, ಸರ್ಕಾರ ಒಂದು ದಿನವೂ ಬಂದು ರೈತರ ಸಮಸ್ಯೆ ಆಲಿಸಿಲ್ಲ. ರೈತರ ಬಗ್ಗೆ ಸಚಿವ ಬಾಲಕೃಷ್ಣ ಸಂತೆ ಭಾಷಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಸಿಎಂ ರೈತರಿಗೆ ಈಗ ಮತ್ತೊಂದು ಆಫರ್ ಕೊಟ್ಟಿದ್ದಾರೆ. ₹2 ಕೋಟಿ ಹೋಗಿ ಈಗ ₹3 ಕೋಟಿ ಕೊಡುತ್ತೇವೆ ಎನ್ನುತ್ತಿದ್ದಾರೆ. ನಿಮ್ಮ ಹಣಕ್ಕೆ ರೈತರು ಬಲಿ ಆಗಲ್ಲ, ಒಂದಿಂಚೂ ಭೂಮಿಯನ್ನೂ ನಿಮಗೆ ಕೊಡಲ್ಲ. ಸ್ವಾಭಿಮಾನಿ ರೈತರನ್ನು ಹಣದಲ್ಲಿ ಅಳೆಯಬೇಡಿ ಮುಖ್ಯಮಂತ್ರಿಗಳೇ. ಇಡೀ ದೇಶದ ಶ್ರೀಮಂತ ಸಿಎಂ ನೀವು. ನಿಮ್ಮ ಹಣದ ಆಮಿಷಕ್ಕೆ ಇಲ್ಲಿ ಯಾರೂ ತಲೆಬಾಗುವುದಿಲ್ಲ ಎಂದರು.ಒಕ್ಕಲಿಗರು ಸಿಎಂ ಆಗಿರುವುದಕ್ಕೆ ನಮಗೆ ಹೊಟ್ಟೆಕಿಚ್ಚು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಒಕ್ಕಲತನ ಮಾಡುವ ಎಲ್ಲರೂ ಒಕ್ಕಲಿಗರೇ. ನಾವು ಸಾವಿರಾರು ಕೋಟಿ ಇರುವ ಸಿಎಂ ಪರ ನಿಲ್ಲಬೇಕಾ, ಬಡ ರೈತರ ಪರ ನಿಲ್ಲಬೇಕಾ ಎಂದು ಪ್ರಶ್ನಿಸಿದ ಅವರು, ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಡ. ಎಷ್ಟೇ ಅಡೆತಡೆ ಇದ್ದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟದಿಂದ ಒಂದು ಹೆಜ್ಜೆಯನ್ನೂ ನಾನು ಹಿಂದೆ ಇಡುವುದಿಲ್ಲ ಎಂದರು. ಕೂಡಾ ಆಕ್ಟ್‌ನಲ್ಲಿ ಯಾಕೆ ಭೂಸ್ವಾಧೀನ ಮಾಡುತ್ತಿದ್ದಿರಾ. ಎಲ್ಲಾ ನಿಯಮಗಳ ಗಾಳಿಗೆ ತೂರಿ ಯೋಜನೆ ಮಾಡುತ್ತಿದ್ದೀರಿ. ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರವಾಗಿ ನಿಲ್ಲುತ್ತದೆ. ಕಾನೂನು ಮೂಲಕವೂ ಟೌನ್‌ಶಿಪ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಾವೆಲ್ಲರೂ ರೈತರ ಮಕ್ಕಳು. ಅನ್ನದಾತರ ರಕ್ಷಣೆಗೆ ಜೆಡಿಎಸ್ ಯಾವಾಗಲೂ ಸಿದ್ಧವಿದೆ ಎಂದರು.