ಸಾರಾಂಶ
- ಹರಿಹರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಭೆಯಲ್ಲಿ ಆವರಗೆರೆ ರುದ್ರಮುನಿ ಸಲಹೆ
- - -ಕನ್ನಡಪ್ರಭ ವಾರ್ತೆ ಹರಿಹರ
ವೈದಿಕ ಪರಂಪರೆಯ ಕೆಲವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ಮೂಢನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಾ ಅನವಶ್ಯಕ ಆರ್ಥಿಕ ಭಾರ ಹೇರುತ್ತಿದ್ದಾರೆ. ಈ ಬಗ್ಗೆ ಸಮುದಾಯ ಎಚ್ಚರಗೊಳ್ಳಬೇಕು ಎಂದು ಬಸವ ಸಂಸ್ಕೃತಿ ಅಭಿಯಾನದ ದಾವಣಗೆರೆ ಜಿಲ್ಲಾ ಸಂಚಾಲಕ ಆವರಗೆರೆ ರುದ್ರಮುನಿ ಹೇಳಿದರು.ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಇತ್ತೀಚೆಗೆ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
ಧರ್ಮ, ಅಧ್ಯಾತ್ಮ ಮತ್ತು ಮೂಢನಂಬಿಕೆಗಳ ನಡುವಿನ ಅಂತರ ದೊಡ್ಡದಿದೆ. ಆದರೆ ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರವನ್ನು ತೊಡಿಸಲಾಗಿದೆ. ಧರ್ಮವನ್ನು ಪಾಲನೆ ಮಾಡಲು ಯಾವುದೇ ಹಣ ಖರ್ಚು ಮಾಡಬೇಕಿಲ್ಲ. ಆದರೆ ಹಣವನ್ನು ಗಳಿಸುವ ಧಾವಂತದಲ್ಲಿ ಕೆಲವು ವೈದಿಕ ಪರಂಪರೆಯ ವ್ಯಕ್ತಿಗಳು ಜನಸಾಮಾನ್ಯರಿಗೆ ಆರ್ಥಿಕ ಭಾರ ಹೇರುತ್ತಿರುವುದು ಖಂಡನೀಯ ಎಂದರು.ವಿಶ್ವಗುರು, ಜಗಜ್ಯೊತಿ ಜ್ಯೋತಿ ಬಸವಣ್ಣ ಅವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ಜನಸಾಮಾನ್ಯರ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ದ ದೊಡ್ಡ ಧ್ವನಿ ಎತ್ತಿದ್ದರು. ಅದು ಆಗಿನ ವೈದಿಕ ಪರಂಪರೆಯಿಂದ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದವರಿಗೆ ಹೊಟ್ಟೆನೋವು ಆರಂಭ ಆಗುವಂತೆ ಮಾಡಿತ್ತು. ಇಂದು ಆಧುನಿಕ ಯುಗವಾದರೂ ಈಗಲೂ ತಮ್ಮ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಸಂವರ್ಧನೆಗೆ ಗಮನ ನೀಡಲಾಗದ ಆರ್ಥಿಕ ದುಸ್ಥಿತಿಯಲ್ಲಿರುವ ಬಡಜನರು, ಸಾಲ ಮಾಡಿ ಧರ್ಮದ ಹೆಸರಲ್ಲಿ ಆಚರಣೆಗಳನ್ನು ಪಾಲನೆ ಮಾಡುತ್ತಿರುವುದು ವಿಪರ್ಯಾಸ. ಎಲ್ಲ ಜಾತಿ, ಧರ್ಮಗಳಲ್ಲಿರುವ ಯುವಜನರು, ಪ್ರಜ್ಞಾವಂತರು, ವಿದ್ಯಾವಂತರು ತಮ್ಮ ಕುಟುಂಬ, ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಮೂಢನಂಬಿಕೆ ಮತ್ತು ಧರ್ಮದ ನಡುವಿನ ಅಂತರ ತಿಳಿಯಪಡಿಸಬೇಕೆಂದರು.
ಮಲೇಬೆನ್ನೂರು ಬಸವ ಮಂಟಪದ ಅಧ್ಯಕ್ಷ ನಾರೇಶಪ್ಪ ಮಾತನಾಡಿ, ಅರಿವನ್ನೆ ಗುರುವನ್ನಾಗಿ. ಆಚಾರವನ್ನೆ ಲಿಂಗವನ್ನಾಗಿ. ಪ್ರಾಮಾಣಿಕತೆ, ದಯೆ, ಕಾಯಕ ಶ್ರದ್ಧೆ, ಏಕದೇವ ನಿಷ್ಠೆ, ದಾಸೋಹಪ್ರಜ್ಞೆ, ಸತ್ಯ, ನೀತಿಯೇ ಬಸವ ಪಥವಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.೧ರಿಂದ ಬಸವನ ಬಾಗೇವಾಡಿಯಿಂದ ಈ ಅಭಿಯಾನ ಆರಂಭಿಸಿದ್ದು, ಅ.೫ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಮಾತನಾಡಿ, ಕುಲ ಕಸಬನ್ನು ಆಧರಿಸಿ ಜಾತೀಯತೆಯನ್ನು ಆಚರಿಸುತ್ತಿದ್ದವರನ್ನು ವಿರೋಧಿಸಿದ ಬಸವಣ್ಣನವರ ತತ್ವಗಳು ಎಲ್ಲ ಧರ್ಮಿಯರಿಗೆ ಮಾದರಿಯಾಗಿವೆ ಎಂದರು. ಈ ಸಂದರ್ಭ ಹಲವು ಮುಖಂಡರು, ಸಮಾಜ ಬಾಂಧವರು ಇದ್ದರು.
- - --08HRR.01:
ಹರಿಹರದ ಮಹಾತ್ಮಗಾಂಧಿ ವೃತ್ತದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನ ಸಭೆಯಲ್ಲಿ ಅವರಗೆರೆ ರುದ್ರಮುನಿ ಮಾತನಾಡಿದರು.