ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಡಾ. ಶ್ರೀವತ್ಸ ವಟಿ

| Published : Sep 14 2025, 01:04 AM IST

ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಡಾ. ಶ್ರೀವತ್ಸ ವಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಸೇವೆಗೆ ಸಿಕ್ಕಿರುವ ಈ ಗೌರವ ನನಗಲ್ಲ, ಇದು ಕನ್ನಡ ಭಾಷಾ ಪ್ರೇಮಿಗಳಿಗೆ ಸಲ್ಲುತ್ತದೆ. ನನಗೆ ನೀಡಿರುವ ಈ ಸನ್ಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಕೃತಿಗಳನ್ನು ಬರೆಯಲು ಪ್ರೇರಣೆ ನೀಡಲಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಹಿರಿಯ ಸಾಹಿತಿ ಡಾ. ಶ್ರೀವತ್ಸ ಎಸ್. ವಟಿ ಅವರು ಟಿ.ಶ್ರೀನಿವಾಸ ಸ್ಮರಣಾರ್ಥ ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಕೋಟೆ ದಮಯಂತಿ ಹೊಂಡದ ಬೀದಿಯಲ್ಲಿರುವ ಅವರ ನಿವಾಸದಲ್ಲಿ ಸನ್ಮಾನಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾ.ನ.ಮಂಜೇಗೌಡ, ಡಾ. ಶ್ರೀವತ್ಸ ವಟಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಪರಿಶ್ರಮ, ಸಂಶೋಧನಾ ಸೇವೆ ಹಾಗೂ ಸೃಜನಶೀಲ ಕೊಡುಗೆಗಳು ಇಡೀ ನಾಡಿಗೆ ಹೆಮ್ಮೆ ತಂದಿವೆ. ಸುಮಾರು ೨೦೦ಕ್ಕೂ ಹೆಚ್ಚು ದೇವಾಲಯಗಳ ಪುರಾತನ ಮಾಹಿತಿ ಹಾಗೂ ಹಳಗನ್ನಡ ಸೇರಿ ಹಲವು ವಿಷಯಗಳಲ್ಲಿ ಪ್ರಬುದ್ಧತೆ ಇರುವ ಮಹಾನ್ ಸಾಹಿತಿ ನಮ್ಮ ಬೇಲೂರಿನಲ್ಲಿ ಇರುವುದು ನಮಗೆ ಹೆಮ್ಮೆ ತರುವ ಸಂಗತಿ ಎಂದರು.

ಕಸಾಪ ಕಾರ್ಯದರ್ಶಿ ಬಿ.ಬಿ ಶಿವರಾಜ್ ಮಾತನಾಡಿ, ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ. ಶ್ರೀವತ್ಸ ಎಸ್. ವಟಿಯವರು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವ ಸಾಧಕರಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಎಸ್. ವಟಿ ಅವರು ಪ್ರಥಮ ಕನ್ನಡ ಶೀಲಾ ಶಾಸನ ದೊರೆತ ಹಲ್ಮಿಡಿ ಬಗ್ಗೆ ಅಧ್ಯಯನ‌ ಮಾಡಿ ಶಾಸನದ ಮಹತ್ವವನ್ನು ಬೆಳಕಿಗೆ ತಂದಿದ್ದಾರೆ , ಹಳಗನ್ನಡ ಕಾವ್ಯಬೋಧನೆ, ಪುರಾತನ ಶಾಸನ, ದೇವಾಲಯಗಳ ಅಧ್ಯಯನ ಅವರ ಆಸಕ್ತಿಯ ಪ್ರಮುಖ ಕ್ಷೇತ್ರಗಳಾಗಿವೆ. ‘ಭಾರತೀಯ ವಾಙ್ಮಯದಲ್ಲಿ ಕಾಲಗಣನೆ’ ಅವರ ಪಿಎಚ್.ಡಿ ಪ್ರಬಂಧ. ಪುರಾತತ್ವ ಅಧ್ಯಯನದಲ್ಲಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿರುವ ಅವರು ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಹೆಸರು ಮಾಡಿ ಹಲವು ಉತ್ತಮ ಶಿಷ್ಯರನ್ನು ಹುಟ್ಟುಹಾಕಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿದ ಹಿರಿಯ ಸಾಹಿತಿ ಡಾ.ಶ್ರೀ ವತ್ಸ ಎಸ್. ವಟಿ ಮಾತನಾಡಿ, ಸಾಹಿತ್ಯ ಸೇವೆಗೆ ಸಿಕ್ಕಿರುವ ಈ ಗೌರವ ನನಗಲ್ಲ, ಇದು ಕನ್ನಡ ಭಾಷಾ ಪ್ರೇಮಿಗಳಿಗೆ ಸಲ್ಲುತ್ತದೆ. ನನಗೆ ನೀಡಿರುವ ಈ ಸನ್ಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಕೃತಿಗಳನ್ನು ಬರೆಯಲು ಪ್ರೇರಣೆ ನೀಡಲಿದೆ ಎಂದು ಕೃತಜ್ಞತೆ ಸಲ್ಲಿಸಿದರು.ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಮ. ಶಿವಮೂರ್ತಿ, ಮಾಜಿ ಅದ್ಯಕ್ಷ ಬಿ. ಎಲ್. ರಾಜೇಗೌಡ , ದೇಶಭಕ್ತ ಬಳಗದ ಅಧ್ಯಕ್ಷ ಡಾ. ಸಂತೋಷ್, ೯ನೇ ಕಸಾಪ ಸಮ್ಮೇಳನ ಅಧ್ಯಕ್ಷರಾಗಿದ್ದ ಇಂದಿರಮ್ಮ, ಸಾಹಿತಿ ಮಧುಮಾಲತಿ ರುದ್ರೇಶ್, ಚನ್ನಕೇಶವ ದೇಗುಲ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್, ಪತ್ರಕರ್ತ ಗಣೇಶ್, ಪದಾಧಿಕಾರಿಗಳು, ಹಿರಿಯ ಕವಿ, ಲೇಖಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.