ರಾಮನಗರ: ಜನಪ್ರತಿನಿಧಿಗಳಿಗೆ ಅಧಿಕಾರ ಕೊಟ್ಟಿದ್ದು ನೀವೆ. ನಿಮ್ಮದೇ ಭೂಮಿಯನ್ನು ಕಸಿದುಕೊಳ್ಳಲು ನಿಮಗೆ ಗೊತ್ತಿಲ್ಲದಂತೆಯೇ ಕಾನೂನಿಗೆ ತಿದ್ದುಪಡಿ ತಂದರು. ಈಗ ಒಬ್ಬರು ಭೂ ಸ್ವಾಧೀನಕ್ಕೆ ಮುಂದಾಗಿದ್ದರೆ, ಮತ್ತೊಬ್ಬರು ಕೊಡಲ್ಲ ಅಂತ ಫೋಸು ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ರೈತ ನಾಯಕ ಮಂಜು ಕಿರಣ್ ವಾಗ್ದಾಳಿ ನಡೆಸಿದರು.
ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕಳೆದ 488 ದಿನಗಳಿಂದ ರೈತರು ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2013ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಭೂ ಸ್ವಾಧೀನ ಕಾಯ್ದೆಗೆ 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ತಿದ್ದುಪಡಿ ತಂದು ರೈತರ ಬಾಯಿಗೆ ಮಣ್ಣು ಹಾಕಿವೆ ಎಂದು ಟೀಕಿಸಿದರು.2013ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯಲ್ಲಿ ಫಲವತ್ತಾದ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಶೇ.70ರಷ್ಟು ರೈತರು ಒಪ್ಪಿಗೆ ಇರಬೇಕು. ಅಲ್ಲದೆ, ಭೂಸ್ವಾಧಿನದ ಪಾತ್ರದಲ್ಲಿ ಯಾವ ರೀತಿ ಸಾಮಾಜಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ ಪರಿಹಾರ ಕೊಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿತ್ತು. ಆದರೆ, 2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಇದು ಅಭಿವೃದ್ದಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿ ತಿದ್ದುಪಡಿ ತಂದು ಆ ಅಂಶವನ್ನೇ ಕೈಬಿಟ್ಟಿತು ಎಂದು ಆರೋಪಿಸಿದರು.
ಕೇಂದ್ರದಿಂದ ರೈತ ವಿರೋಧಿ ಕಾನೂನು ಬಂದಾಗ, ದೆಹಲಿಯಲ್ಲಿ ವರ್ಷಾನುಗಟ್ಟಲೆ ಹೋರಾಟ ನಡೆಯಿತು. ಆ ಹೋರಾಟದ ಸ್ಥಳದಲ್ಲಿ ಪ್ಯಾರಲಲ್ ಆಗಿ ಕಿಸಾನ್ ಸಂಸತ್ ಅನ್ನು ರೈತರು ನಡೆಸಿದರು. ಈ ಸ್ಥಳಕ್ಕೆ ಕೇರಳ ಮತ್ತು ತಮಿಳುನಾಡಿನಿಂದ ಕೆಲ ಸಂಸದರು ಭಾಗವಹಿಸಲು ಬಂದಿದ್ದರು. ಆಗ ರೈತರು ನಿಮ್ಮನ್ನು ಸಂಸತ್ತಿಗೆ ಕಳುಹಿಸಿದ್ದೇವೆ. ನೀವು ಅಲ್ಲಿ ಪ್ರತಿಭಟನೆ ಮಾಡಿ, ನಮ್ಮ ವೇದಿಕೆ ಕೊಡುವುದಿಲ್ಲ ಅಂತ ಹೇಳಿಕಳುಹಿಸಿದ್ದರು. ಈಗ ನೀವು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ರಾಜಕಾರಣಿಗಳು ಬಂದರೆ, ವಿಧಾನಸಭೆಯ ಬಾವಿಗೆ ಇಳಿದು ಹೋರಾಟ ಮಾಡಿ ಎಂದು ವಾಪಸ್ಸು ಕಳುಹಿಸಿ. ನಿಮ್ಮ ಪ್ರತಿಭಟನೆಯ ವೇದಿಕೆಯಲ್ಲಿ ಒಂದು ಪಕ್ಷಕ್ಕೆ ಅವಕಾಶ ಕೊಟ್ಟರೆ, ಮತ್ತೊಂದು ಪಕ್ಷ ರಾಜಕಾರಣ ಮಾಡಲು ಅವಕಾಶ ಸಿಗುತ್ತದೆ ಎಂದು ಮಂಜು ಕಿರಣ್ ರೈತರಿಗೆ ಕಿವಿಮಾತು ಹೇಳಿದರು.ಭಿಕ್ಷುಕರನ್ನು ನೋಡಲು ಬ್ಯಾರಿಕೇಡು!
ಚುನಾವಣೆ ವೇಳೆ ರಾಜಕಾರಣಿಗಳು ನಿಮ್ಮ ಬಳಿ ಬಂದು ಮತಭಿಕ್ಷೆ ಕೇಳುತ್ತಾರೆ. ಅಂದರೆ ಅವರು ಭಿಕ್ಷುಕರು. ಈಗ ಭೂಸ್ವಾಧೀನಕ್ಕೆ ನೋಟಿಸ್ ಇದೆ. ಸ್ವಾಧೀನಕ್ಕಾಗಿ ನಿಮ್ಮ ಬಳಿ ಬಂದು ಅವರು ಮಾತನಾಡಬೇಕು. ಆದರೆ ನೀವೇ ಅವರ ಬಳಿ ಹೋಗುತ್ತೀರಾ. ಬ್ಯಾರಿಕೇಡ್‌ಗಳು ಅಡ್ಡವಿದ್ದರು ಭಿಕ್ಷಕರನ್ನು ನೋಡಲು ಹೋಗುತ್ತೀರಾ ಎಂದು ವಾಗ್ದಾಳಿ ನಡೆಸಿದರು.
ಭೂಸ್ವಾಧೀನ ಪಡಿಸಿಕೊಳ್ಳಲು ಬಂದಾಗ ಎತ್ತಿನಗಾಡಿಗಳನ್ನು ಬ್ಯಾರಿಕೇಡ್‌ಗಳಂತೆ ಅಡ್ಡ ಕಟ್ಟಿ. ಆ ಬ್ಯಾರಿಕೇಡ್ ದಾಟಿ ಬರಲಿ ನೋಡೋಣ. ಅವರ ಬಳಿ ಲಾಠಿ ಇದ್ದರೆ, ನಮ್ಮ ಬಳಿ ಪೊರಕೆ, ಬಾರುಕೋಲು ಇದೆ. ದನಕರುಗಳ ಸೈನ್ಯವೂ ಇದೆ ಎಂದರು.
ಚುನಾವಣಾ ಸಭೆಗಳಿಗೆ ಕರೆ ತರಲು ಒಬ್ಬರಿಗೆ 500, 1000 ಕೊಡುತ್ತಾರೆ. ಆದರೆ, ಇಲ್ಲಿ ಪ್ರತಿಭಟನಾ ಸ್ಥಳಕ್ಕೆ 15 ಜಿಲ್ಲೆಗಳಿಂದ ಬಸ್ಸು, ರೈಲುಗಳಲ್ಲಿ ರೈತರು ಬಂದಿದ್ದಾರೆ. ಯಾರು ಯಾವ ಹಣವನ್ನು ಕೊಟ್ಟಿಲ್ಲ. ನೀವು ನಮಗೆಲ್ಲ ರಾಖಿ ಕಟ್ಟಿಲ್ಲ, ಆದರೆ ಹಸಿರು ಶಾಲು ಹೊಕಿಕೊಂಡಿದ್ದೀರಿ. ಆ ಸಂಬಂಧವೇ ಇಲ್ಲಿಗೆ ಕರೆ ತಂದಿದೆ ಎಂದು ಮಂಜು ಕಿರಣ್ ಹೇಳಿದರು.ಚಿಕ್ಕಮಗಳೂರಿನ ರೈತ ಮುಖಂಡ ಸುನೀಲ್ ಮಾತನಾಡಿ, ನಮ್ಮ ಪೂರ್ವಜರು ವಾಸ ಮಾಡುತ್ತಿದ್ದ ನೆನಪುಗಳಿವೆ. ಅವರೊಂದಿಗೆ ನಮ್ಮ ಭಾವನೆಗಳು ಬೆಸೆದುಕೊಂಡಿವೆ. ನೀವು ಭೂಮಿಗೆ ಬೆಲೆ ಕಟ್ಟಬಹುದು. ಇತಿಹಾಸ ಮತ್ತು ಭಾವನೆಗಳಿಗೆ ಬೆಲೆ ಕಟ್ಟಲಾಗದು. ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿ ಕೇವಲ ಟ್ರೈಲರ್, ಇದೇ ರೈತರು ಬೆಂಗಳೂರಿಗೆ ಬಂದರೆ ಪಿಕ್ಚರ್ ಆರಂಭವಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಆಡಳಿತ ಕುಸಿದಿದ್ದು, ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ನೀರಾವರಿ ಅಭಿವೃದ್ಧಿ ಶೂನ್ಯ, ಜನರ ಮೇಲೆ ಸಾಲದ ಹೊರೆ ಹೆಚ್ಚಾಗಿದೆ. ಸಾಲ ಮಾಡದೆ ಸರ್ಕಾರ ನಡೆಸಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರತಿ ಬೀದಿಗಳಲ್ಲಿ ಬಾರ್ ತೆರೆಯಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ಬದುಕು ಕಸಿದುಕೊಂಡಿದೆ. ಈಗ ರೈತ ಕುಲಕ್ಕೆ ಕೈ ಹಾಕುತ್ತಿದೆ ಎಂದು ಕಿಡಿಕಾರಿದರು.11ಕೆಆರ್ ಎಂಎನ್ 4.ಜೆಪಿಜಿ
ರೈತ ನಾಯಕ ಮಂಜು ಕಿರಣ್ ಮಾತನಾಡಿದರು.