ಸಂವಿಧಾನವನ್ನು ಓದುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ : ನಾಗಮೋಹನ್ ದಾಸ್

| Published : Oct 09 2024, 01:36 AM IST / Updated: Oct 09 2024, 01:37 AM IST

ಸಂವಿಧಾನವನ್ನು ಓದುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ : ನಾಗಮೋಹನ್ ದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಓದಿ ಅರ್ಥೈಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಹೇಳಿದರು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಸಂವಿಧಾನವನ್ನು ಓದಿ ಅರ್ಥೈಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ ನಿವೃತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಭಿಪ್ರಾಯಪಟ್ಟರು.

ಅವರು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಮಾನವ ಹಕ್ಕುಗಳ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ಭಾರತದ ಸಂವಿಧಾನದ ಮೂಲಂಶಗಳು ಎಂಬ ವಿಷಯದ ಕುರಿತು ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.

ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವಕ್ಕೆ ದೇಶದ ಸಂವಿಧಾನವು ತಳಹದಿಯಾಗಿದೆ ಎಂದ ಅವರು ಸಂವಿಧಾನವನ್ನು ಓದದಿದ್ದರೆ ಕಾನೂನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕನ್ನು ನೀಡಿದ್ದು ಸಾಮಾಜಿಕ ನ್ಯಾಯ ದ ಅಂಶಗಳನ್ನು ಎತ್ತಿ ಹಿಡಿದಿದೆ. ಪ್ರತಿಯೊಬ್ಬರು ದೇಶದ ಇತಿಹಾಸ, ಆರ್ಥಿಕ ಪರಿಸ್ಥಿತಿ, ಕಾನೂನು, ಹಕ್ಕುಗಳು, ರಾಜಕೀಯ ಅಂಶಗಳನ್ನು ಓದಿ ತಿಳಿಯಬೇಕು ಎಂದು ಹೇಳಿದರು.

ಸಂವಿಧಾನಕ್ಕೆ ಗೌರವವನ್ನು ಕೊಡುವುದರ ಮೂಲಕ ಈ ನೆಲದ ಕಾನೂನನ್ನು ಗೌರವಿಸಿ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವನ್ನು ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಜೇಮ್ಸ್ ಡೊಮಿನಿಕ್ ರವರು ಮಾತನಾಡಿ ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ದೇಶದ ಮೂಲಭೂತ ಕಾನೂನಾಗಿದ್ದು ಅದನ್ನು ಅನುಸರಿಸಿ ಅದಕ್ಕೆ ಬದ್ಧರಾಗಿ ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ರವರು ಮಾತನಾಡಿ ಸಂವಿಧಾನದ ಆಶಯಗಳು ಸ್ವತಂತ್ರ, ನ್ಯಾಯ, ಸಮಾನತೆ, ಹಕ್ಕು, ಭ್ರಾತೃತ್ವವಾಗಿದ್ದು ವ್ಯಕ್ತಿ ಸ್ವಾತಂತ್ರ್ಯ ವೆಂಬುವುದು ಎಲ್ಲರಿಗಿದೆ. ಸಂವಿಧಾನದ ಮೂಲಂಶಗಳನ್ನು ಎಲ್ಲರೂ ಓದಬೇಕು ಅವಾಗ ಮಾತ್ರ ನಮ್ಮ ದೇಶದ ಕಾನೂನು ಹಾಗೂ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಪದ್ಧತಿ ಅರಿಯಲು ಸಾಧ್ಯ ಎಂದರು.

ವೇದಿಕೆಯಲ್ಲಿ ಕಾಲೇಜಿನ ಮಾನವ ಹಕ್ಕುಗಳ ಘಟಕದ ಸಂಚಾಲಕಿ ಶಶಿಕಲಾ ಹಾಗೂ ಐಕ್ಯೂಎಸಿ ಸಂಚಾಲಕಿ ಹೇಮ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕರಾದ ಅರ್ಜುನ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಾಜಿಯಾ ನಿರೂಪಿಸಿದರು. ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಶಾಂತಿಭೂಷಣ್ ಅವರು ವಂದಿಸಿದರು. ಈ ಸಂದರ್ಭ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.