ಜನತೆ ನಾಟಕದ ಕಡೆ ಆಸಕ್ತಿ ಹೊಂದುತ್ತಿರುವುದು ಆಶಾದಾಯಕ

| Published : Nov 11 2025, 02:00 AM IST

ಸಾರಾಂಶ

ಭವಿಷ್ಯದ ದೃಷ್ಟಿಯಿಂದ ಶಿಕ್ಷಣ, ರಂಗಭೂಮಿ, ಸಾಹಿತ್ಯ ಹಾಗೂ ಚಲನಚಿತ್ರಗಳಿಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಕೆ.ಎಸ್.ಸಚ್ಚಿದಾನಂದ ಅವರ ನೆನಪಿನಲ್ಲಿ ನಾಟಕೋತ್ಸವ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜನತೆ ನಾಟಕದ ಕಡೆ ಆಸಕ್ತಿ ಹೊಂದುತ್ತಿರುವುದು ತುಂಬಾ ಆಶಾದಾಯಕವಾಗಿದೆ ಎಂದು ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರ್‌ ನಾರಾಯಣ್ ತಿಳಿಸಿದರು.

ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಸಾಂಸ್ಕೃತಿಕ ರಾಜಕಾರಣಿ ಕೆ.ಎಸ್.ಸಚ್ಚಿದಾನಂದ ಅವರ ರಂಗನಮನದ ನಿಮಿತ್ತ ನಡೆದ ನೀನಾಸಂ ತಿರುಗಾಟ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ಜೀವಂತ ಶಕ್ತಿಯಾಗಿವೆ. ಆರೋಗ್ಯಕ್ಕಾಗಿ ಸಾಂಸ್ಕೃತಿಕ ಮನೋಭಾವವನ್ನು ಪ್ರತಿಯೊಬ್ಬ ನಾಗರಿಕರೂ ಬೆಳೆಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಟಕಗಳು ನಾಗರಿಕನ ಪ್ರತಿಬಿಂಬವಾಗಿರುತ್ತವೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಜನತೆ ಚಿತ್ರಮಂದಿರಗಳಿಗೆ ಹೋಗದೆ ನಾಟಕಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಸಂತಸ ತಂದಿದೆ. ಕೆ.ವಿ.ಶಂಕರಗೌಡರವರು ರಂಗಮಂದಿರ ನಿರ್ಮಾಣ ಮಾಡಿದ್ದು ಸೋಜಿಗ ಎನಿಸುತ್ತದೆ ಎಂದರು.

ಭವಿಷ್ಯದ ದೃಷ್ಟಿಯಿಂದ ಶಿಕ್ಷಣ, ರಂಗಭೂಮಿ, ಸಾಹಿತ್ಯ ಹಾಗೂ ಚಲನಚಿತ್ರಗಳಿಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದ ಕೆ.ಎಸ್.ಸಚ್ಚಿದಾನಂದ ಅವರ ನೆನಪಿನಲ್ಲಿ ನಾಟಕೋತ್ಸವ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ತಿಳಿಸಿದರು.

ಕೆ.ಎಸ್.ಸಚ್ಚಿದಾನಂದ ಅವರು ಸಂಭಾವಿತ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ಸಾಂಸ್ಕೃತಿಕವಾಗಿ ಸಾಕಷ್ಟು ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದ್ದರು. ಅದರಲ್ಲೂ ಹೊಸನೀರು ಸಹಿತ ಸದಭಿರುಚಿ ಚಲನಚಿತ್ರಗಳ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.ಸಚ್ಚಿದಾನಂದರವರ ವಯಸ್ಸು 75 ವರ್ಷ ಸಂದಿದೆ. ಈ ನಡುವಿನ ಅಂತರದಲ್ಲಿ ವಿಶ್ವಕ್ಕೆ ಹೆಗ್ಗೋಡು ಎನ್ನುವ ಪುಟ್ಟ ಗ್ರಾಮ ಸಾಂಸ್ಕೃತಿಕ ವಿನಿಮಯವನ್ನು ಉಂಟುಮಾಡಿದೆ. ಸೃಜನಶೀಲತೆಯನ್ನು ಒಳಗೊಳ್ಳುವ ಮೂಲಕ ವಿಶ್ವದ ಗಮನ ಸೆಳೆದ ಸಾಂಸ್ಕೃತಿಕ ಕೇಂದ್ರ ಹೆಗ್ಗೋಡು ಆಗಿದೆ ಎಂದು ಅಭಿಪ್ರಾಯಿಪಟ್ಟರು.

ಚಿಂತಕ ಡಾ.ಸುಜಯ್‌ ಕುಮಾರ್ ಮಾತನಾಡಿ, ಕೆ.ಎಸ್.ಸಚ್ಚಿದಾನಂದ ಅವರು ರಂಗಕಲೆ, ಚಿತ್ರಕಲೆ ಮತ್ತು ಚಲನಚಿತ್ರಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. 54 ವರ್ಷದ ಜೀವಿತಾವಧಿಯೊಳಗೆ ಹೊಸ ಹೊಸ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಒಬ್ಬ ರಾಜಕಾರಣಿ ಇತರರಿಗೆ ಹೇಗೆ ಮಾದರಿಯಾಗಬಹುದು ಎಂದು ತೋರಿಸಿಕೊಟ್ಟರು ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್.ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಆಶಯ ಮಾತುಗಳನ್ನಾಡಿದರು. ರಂಗಕರ್ಮಿ ಮಹದೇವಯ್ಯ ಅವರಿಗೆ ರಂಗಗೌರವವನ್ನು ಸಲ್ಲಿಸಲಾಯಿತು. ರವಿವರ್ಮ ಕಾಲೇಜಿನ ಚಿತ್ರಕಲಾವಿದ ಧನುಷ್‌ರವರು ಸಚ್ಚಿದಾನಂದರವರಿಗೆ ಚಿತ್ರನಮನ ಸಲ್ಲಿಸಿದರು.

ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಸಂಚಾಲಕಿ ಕೆ.ಪಿ. ಅರುಣಕುಮಾರಿ, ಪದಾಧಿಕಾರಿಗಳಾದ ನಿಂಗಪ್ಪ, ನಂಜುಂಡಸ್ವಾಮಿ, ಬಿ.ಎಸ್. ಹರೀಶ್, ನಂದಿನಿ ಇತರರು ಉಪಸ್ಥಿತರಿದ್ದರು.

ಬಳಿಕ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನುಮುಸ್ತಾಕ್ ಅವರ ಜೀವನ ಆಧಾರಿತ ಹೃದಯ ತೀರ್ಪು ನಾಟಕವನ್ನು ಹೆಗ್ಗೋಡಿನ ನೀನಾಸಂ ತಂಡದ ಗಣೇಶ್ ಮತ್ತು ಸಂಗಡಿಗರು ಸಾದರಪಡಿಸಿದರು.