ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಸ್ಪಿ ಕಾರ್ಯಕರ್ತರಿಂದ ಪ್ರತಿಭಟನೆ

| Published : Nov 11 2025, 01:45 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಸ್ಪಿ ಕಾರ್ಯಕರ್ತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭೂಗಳ್ಳರಿಗೆ ಸುಲಭವಾಗಿ ಖಾತೆ ಮಾಡಿಕೊಡುವ ಅಧಿಕಾರಿಗಳು ಲಂಚ ಕೊಡದ ರೈತರಿಗೆ ಸಮರ್ಪಕ ಕೆಲಸ ನಿರ್ವಹಿಸುತ್ತಿಲ್ಲ. ಧನಗೂರು ಬಳಿ ನಿಜವಾಗಲೂ ಉಳಿಮೆ ಮಾಡುತ್ತಿದ್ದ ರೈತರ ಜಮೀನನ್ನು ತೆರವು ಮಾಡಿ ಅನ್ಯಾಯ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್ಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕಂದು ಒತ್ತಾಯಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಭೂಗಳ್ಳರಿಗೆ ಸುಲಭವಾಗಿ ಖಾತೆ ಮಾಡಿಕೊಡುವ ಅಧಿಕಾರಿಗಳು ಲಂಚ ಕೊಡದ ರೈತರಿಗೆ ಸಮರ್ಪಕ ಕೆಲಸ ನಿರ್ವಹಿಸುತ್ತಿಲ್ಲ. ಧನಗೂರು ಬಳಿ ನಿಜವಾಗಲೂ ಉಳಿಮೆ ಮಾಡುತ್ತಿದ್ದ ರೈತರ ಜಮೀನನ್ನು ತೆರವು ಮಾಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಶಾಸಕರೇ ಬಗರ್ ಹುಕ್ಕುಂ ಸಮಿತಿಯ ಅಧ್ಯಕ್ಷರಾಗಿರುವುದರಿಂದ ನೈಜ ರೈತರಿಗೆ ಭೂಮಿ ಮಂಜೂರು ಮಾಡಬೇಕು. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡಿಸಬೇಕೆಂದು ಆಗ್ರಹಿಸಿದರು.

ಕೃಷ್ಣೇಗೌಡನದೊಡ್ಡಿ ಗ್ರಾಮದ 50ಕ್ಕೂ ಹೆಚ್ಚು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ನಿವೇಶನವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಹಲವು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶ ನೀಡುತ್ತಿದ್ದು, ಅಷ್ಟರಲ್ಲಿ ಇಂಥ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಭೂ ರಹಿತರೊಂದಿಗೆ ಸಭೆ ನಡೆಸಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಶಿರಸ್ತೇದಾರ ಗುರುಪ್ರಸಾದ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಕ್ಷದ ಜಿಲ್ಲಾ ಉಸ್ತುವಾರಿ ಎಚ್.ಎನ್.ವೀರಭದ್ರಯ್ಯ, ತಾಲೂಕು ಘಟಕದ ಅಧ್ಯಕ್ಷ ವಿ.ನಂಜುಂಡಸ್ವಾಮಿ, ಮುಖಂಡರಾದ ಎಸ್.ಉಮೇಶ್, ಎನ್.ದೇವರಾಜು, ಗೋವಿಂದರಾಜು, ಎಚ್.ಎನ್.ಸುಧಾಕರ್ ಹಾಗೂ ಹಲವು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಮಳವಳ್ಳಿ:

ಸಮರ್ಪಕ ಬಸ್ ಪೂರೈಸುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕಮೂಲಗೂಡು ಗ್ರಾಮದ ರೈತರು ಹಾಗೂ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.

ಚಿಕ್ಕಮೂಲಗೂಡು ಗ್ರಾಮದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳವಳ್ಳಿ ಮಂಡ್ಯಕ್ಕೆ ಹೋಗಲು ಸಕಾಲಕ್ಕೆ ಬಸ್ ಬಾರದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ಭಾರೀ ದೂರು ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಮಂಡ್ಯ-ಮಳವಳ್ಳಿ ಮಾರ್ಗದಲ್ಲಿ ಬರುತ್ತಿದ್ದ ಬಸ್‌ಗಳನ್ನು ತಡೆದು ಅಧಿಕಾರಿಗಳು, ಚಾಲಕರು ಹಾಗೂ ನಿರ್ವಹಕರ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು. ಮಳವಳ್ಳಿ ಕೆಎಸ್‌ಆರ್‌ಟಿಸಿ ಡಿಫೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ಸಮಸ್ಯೆ ಬಾರದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದುಕೊಂಡರು.