ಪುತ್ತೂರು: ನವತೇಜ ಟ್ರಸ್ಟ್ ನ ಆಶ್ರಯದಲ್ಲಿ ಅಕ್ಷ ಕಾಟೇಜ್ ಇಂಡಸ್ಟ್ರೀಸ್, ನವನೀತ್ ಫಾರ್ಮ್ ನರ್ಸರಿ, ಮರಿಕೆ ಸಾವಯವ ಮಳಿಗೆ, ಅಡಿಕೆ ಪತ್ರಿಕೆ ಪುತ್ತೂರು, ನಿರ್ಮಾಣ್ ಅಸೋಸಿಯೇಟ್ಸ್, ಗಿಡಗೆಳೆತನ ಸಂಘ, ಸಮೃದ್ಧಿ ಇನ್ನಿತರ ಸಂಸ್ಥೆಗಳ ಸಹಕಾರದಲ್ಲಿ ಜೂ.೫ರಿಂದ ೭ರ ತನಕ ಪುತ್ತೂರಿನ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ೩ ದಿನಗಳ ಹಲಸು ಮತ್ತು ಹಣ್ಣುಗಳ ಮೇಳ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಎಂಟನೇ ಆವೃತ್ತಿಯ ಹಲಸು-ಹಣ್ಣು ಮೇಳ ನಡೆಯುತ್ತಿದ್ದು, ಮೇಳದಲ್ಲಿ ಈಗಾಗಲೇ ಮರೆತ ಹಾಗೂ ಮರೆವಿನಂಚಿಲ್ಲಿರುವ ಪಾರಂಪರಿಕ ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸುವ ಯೋಜನೆ ರೂಪಿಸಲಾಗಿದೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ. ಕೃತಕ ಬಣ್ಣ, ರಾಸಾಯನಿಕಗಳ ಬಳಕೆಯಿಲ್ಲದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ.

ಹಲಸಿನ ಊಟ: ಮೇಳದ ಕೊನೆಯ ದಿನದಂದು ಹಲಸು ಮತ್ತು ಮಾವಿನ ಊಟವಿದೆ. ಸುಮಾರು 25 ಬಗೆಯ ವೈವಿಧ್ಯ ಖಾದ್ಯಗಳು. ಮೊದಲೇ ಟಿಕೇಟ್ ಕಾದಿರಿಸಿದ ೨೫೦ ಮಂದಿಗೆ ಭೋಜನ ಸವಿಯುವ ಅವಕಾಶವಿದೆ. ಹಲಸು ರಸಪ್ರಶ್ನೆ: ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಲಸು- ಹಣ್ಣುಗಳ ‘ರಸಪ್ರಶ್ನೆ’ ಕಾರ್ಯಕ್ರಮ ಮೇಳದ ಹೈಲೈಟ್ ಆಗಿದೆ. ಗೇರು ಹಣ್ಣಿನ ಮೌಲ್ಯವರ್ಧನೆ: ಗೇರು ಹಣ್ಣಿನ ಜ್ಯೂಸ್, ಹಲ್ವ, ಉಪ್ಪಿನಕಾಯಿ, ಐಸ್‌ಕ್ರೀಮ್, ಸುಕಾಜು.. ಮೊದಲಾದ ಉತ್ಪನ್ನಗಳು ಲಭ್ಯವಿದೆ.ವೈವಿಧ್ಯ ಹಣ್ಣುಗಳು: ಹುಣಸೂರು, ಸಖರಾಯಪಟ್ಣ, ದೊಡ್ಡಬಳ್ಳಾಪುರದ ರುಚಿರುಚಿಯಾದ ಹಲಸಿನ ಹಣ್ಣುಗಳು. ಬ್ರಹ್ಮಾವರ, ಚನ್ನಪಟ್ಟಣದಿಂದ ಉತ್ಕೃಷ್ಟ ಮಾವಿನ ಹಣ್ಣುಗಳು ಮೇಳಕ್ಕೆ ಬರಲಿದೆ. ಹಲಸು ಹಾಗೂ ಮಾವಿನ ಹಣ್ಣುಗಳನ್ನು ಕೃಷಿಕರೇ ಸ್ವತಃ ಬೆಳೆದು, ಮಾರುವ ವ್ಯವಸ್ಥೆಯಿದೆ.ಮೌಲ್ಯವರ್ಧಿತ ಉತ್ಪನ್ನಗಳು: ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ,ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ, ಹಲಸಿನ ಹಣ್ಣಿನ ಮಳಿಗೆ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಮೇಳದಲ್ಲಿ ಲಭ್ಯವಿದೆ.

ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರ್ಯಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಅಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ.. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.