ಮಣಿಪಾಲ: ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ 8ನೇ ಕುಲಪತಿಯಾಗಿ ಡಾ. ಶರತ್ ಕೆ. ರಾವ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಪ್ರಖ್ಯಾತ ಮೂಳೆತಜ್ಞರು ಹಾಗೂ ಶೈಕ್ಷಣಿಕ ಆಡಳಿತಗಾರರಾಗಿರುವ ಡಾ. ಶರತ್ ರಾವ್ ವೈದ್ಯಕೀಯ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಸಂಸ್ಥೆಯು 2025ರಲ್ಲಿ ಪ್ರತಿಷ್ಠಿತ ‘ಗೌರವ ಫೆಲೋಶಿಪ್’ (ಎಫ್‌ಆರ್‌ಸಿಪಿ) ನೀಡಿ ಗೌರವಿಸಿದೆ. ಮೈಸೂರು ವಿವಿಯಿಂದ ಎಂಬಿಬಿಎಸ್, ಮಂಗಳೂರು ವಿವಿಯಿಂದ ಡಿ.ಆರ್ಥೋ ಮತ್ತು ಎಂ.ಎಸ್. ಪದವಿಗಳನ್ನು ಪಡೆದ ಇವರು, 1988ರಲ್ಲಿ ಕೆಎಂಸಿ ಮಣಿಪಾಲದಲ್ಲಿ ಸಹಾಯಕ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ಕೆಎಂಸಿ ಮಂಗಳೂರಿನ ಹಳೆಯ ವಿದ್ಯಾರ್ಥಿಯಾಗಿರುವ ಇವರು 4 ದಶಕಗಳ ಕಾಲ ಸಂಸ್ಥೆಯ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಎಂಸಿ ಮಣಿಪಾಲದ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥರಾಗಿ (2009-2014), ಅಸೋಸಿಯೇಟ್ ಡೀನ್ (2015-2019) ಹಾಗೂ ಡೀನ್ (2019-2023) ಆಗಿ ಕಾರ್ಯನಿರ್ವಹಿಸಿದ್ದಾರೆ. 2023ರಿಂದ 2026ರವರೆಗೆ ಮಾಹೆಯ ಸಹ-ಕುಲಪತಿ (ಆರೋಗ್ಯ ವಿಜ್ಞಾನ) ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವೈದ್ಯಕೀಯ ವಲಯದಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿರುವ ಡಾ. ರಾವ್. ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಹಾಗೂ ದಕ್ಷಿಣ ಭಾರತದ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಎಒ ಟ್ರೋಮಾ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ವೈದ್ಯಕೀಯ ಜರ್ನಲ್‌ಗಳಲ್ಲಿ ಇವರ 100ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ.ಡಾ. ಶರತ್ ರಾವ್ ಅವರ ನೇಮಕ ಕುರಿತು ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರು, ‘ಮಾಹೆಯ ಬಗ್ಗೆ ಡಾ. ಶರತ್ ಕೆ. ರಾವ್‌ಗಿರುವ ಆಳವಾದ ಅರಿವು, ನಾಯಕತ್ವ ಹಾಗೂ ಶ್ರೇಷ್ಠತೆ ಸಾಧಿಸುವಲ್ಲಿ ಬದ್ಧತೆಯು ಜಾಗತಿಕ ಮಟ್ಟದಲ್ಲಿ ಮಾಹೆಯ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಹೆಯ ಸಹಕುಲಾಧಿಪತಿ ಡಾ. ಹೆಚ್.ಎಸ್. ಬಲ್ಲಾಳ್, ‘ಡಾ.ರಾವ್ ಅವರ ನೇಮಕಾತಿಯು ಮಾಹೆಯ ಶೈಕ್ಷಣಿಕ ನಾಯಕತ್ವ ಮತ್ತು ಮೌಲ್ಯಗಳಿಗೆ ನೀಡುವ ಪ್ರಾಮುಖ್ಯವನ್ನು ಪ್ರತಿಬಿಂಬಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೂತನ ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಡಾ. ಕೆ. ಶರತ್ ರಾವ್, ಮಾಹೆಯನ್ನು ಮುನ್ನಡೆಸುವ ಜವಾಬ್ದಾರಿ ದೊರೆತಿರುವುದು ಹೆಮ್ಮೆಯ ವಿಷಯ. ಹಿಂದಿನವರು ಹಾಕಿರುವ ಬಲಿಷ್ಠ ಬುನಾದಿಯ ಮೇಲೆ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ, ಸಾಮಾಜಿಕ ಕಳಕಳಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದೇ ನನ್ನ ಮುಖ್ಯ ಉದ್ದೇಶ’ ಎಂದಿದ್ದಾರೆ. 2020ರಲ್ಲಿ ಮಾಹೆಯ 7ನೇ ಕುಲಪತಿಯಾಗಿ ಅಧಿಕಾರ ವಹಿಸಿ, ಈಗ ನಿವೃತ್ತರಾಗುತ್ತಿರುವ ಲೆಜ (ಡಾ.) ಎಂ. ಡಿ. ವೆಂಕಟೇಶ್, ‘ಮಾಹೆಯ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನು ವಿಸ್ತರಿಸಿದ ಸಾಧನೆ ಬಗ್ಗೆ ನನಗೆ ಹೆಮ್ಮೆಯಿದೆ. ಡಾ. ರಾವ್ ಅವರು ಈ ಸಂಸ್ಥೆಯ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ’ ಎಂದು ಹಾರೈಸಿದ್ದಾರೆ.