ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಲಂಗುಲಗಾಮಿಲ್ಲದೇ ತುಘಲಕ ಆಡಳಿತವನ್ನೇ ನೆನಪಿಸುವ ಕಾಂಗ್ರೆಸ್ ಸರ್ಕಾರ, ರೈತರಿಗೆ ನೀಡಿರುವ ವಕ್ಫ್ ನೋಟಿಸ್ ಮರಳಿ ಪಡೆದರೆ ಸಾಲದು. ಬದಲಾಗಿ ಮಾಲ್ಕಿ ಕಾಲಂಗಳಲ್ಲಿ ನಮೂದಾಗಿರುವ ವಕ್ಫ್ ಹೆಸರು ಕಡಿತಗೊಳಿಸದಿದ್ದರೆ, ರೈತರ, ನೊಂದವರ ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದಲ್ಲದೇ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆಂದು ರಾಜ್ಯ ಸರ್ಕಾರಕ್ಕೆ ಹಿಂದೂ ಸಂಘಟನೆಗಳ ಮುಖಂಡ ಶಿವಾನಂದ ಗಾಯಕವಾಡ ಎಚ್ಚರಿಕೆ ನೀಡಿದರು.ಮಂಗಳವಾರ ಬನಹಟ್ಟಿ ಶ್ರೀಈಶ್ವರಲಿಂಗ ಮೈದಾನದಿಂದ ಮುಖ್ಯ ಮಾರುಕಟ್ಟೆ, ಗಾಂಧಿ ಸರ್ಕಲ್, ಬಸ್‌ನಿಲ್ದಾಣ ಮಾರ್ಗವಾಗಿ ವಕ್ಫ ಪೀಡಿತ ರೈತರ, ಬಿಜೆಪಿ ಕಾರ್ಯಕರ್ತರ ಬೃಹತ್ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಚರಿಸಿ ಪ್ರತಿಭಟನೆ ನಡೆಸಿ ಎಂ.ಎಂ.ಬಂಗ್ಲೆ ಎದುರು ರಾಜ್ಯ ಹೆದ್ದಾರಿ ತಡೆದು, ನಡೆಸಿದ ಸಭೆಯಲ್ಲಿ ಮಾತನಾಡಿದ ಗಾಯಕವಾಡ, ವಕ್ಫ್ ಬೋರ್ಡ್ ಅವಾಂತರಗಳು ದಿನೇದಿನೇ ಹೆಚ್ಚುತ್ತಿವೆ. ಹಿಂದಿನ ಮತ್ತು ಈಗಿನ ನೋಟಿಸ್‌ಗಳನ್ನು ಹಿಂಪಡೆದು ಆಗಿರುವ ಗುರುತರ ಪ್ರಮಾದ ಸರಿಪಡಿಸದಿದ್ದರೆ ಸರ್ಕಾರ ಜನಾಕ್ರೋಶ ಎದುರಿಸಬೇಕಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ರೈತರ, ಸರ್ಕಾರಿ ಜಮೀನುಗಳನ್ನು ಬೇಕಾಬಿಟ್ಟಿಯಾಗಿ ವಕ್ಫ ಆಸ್ತಿ ಎಂದು ನೋಟಿಸ್ ನೀಡುವ ಮತ್ತು ಪಹಣಿಗಳ ಮಾಲ್ಕಿ ಕಾಲಂನಲ್ಲಿ ವಕ್ಫ ಬೋರ್ಡ್ ಹೆಸರು ನಮೂದಿಸುವ ಕಾರ್ಯಕ್ಕೆ ರಾಜ್ಯದ ಸಿಎಂ ಸೂಚನೆ ನೀಡಿದ್ದರಿಂದ ಸಚಿವ ಜಮೀರ್ ಹುಚ್ಚಾಟ ಮಿತಿ ಮೀರಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮ ಜೈಲ್‌ಭರೋದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರನ್ನು, ರೈತರನ್ನು ಬಂಧಿಸಲೆಂದು ಸರ್ಕಾರಕ್ಕೆ ಸವಾಲು ಹಾಕಿದರು.
ಧುರೀಣರಾದ ವಿದ್ಯಾಧರ ಸವದಿ, ಶಂಕರ ಹುನ್ನೂರ, ಮಹಾಂತೇಶ ಹಿಟ್ಟಿನಮಠ, ಸುರೇಶ ಅಕ್ಕಿವಾಟ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೋಟಿಸ್ ಹಿಂಪಡೆವ ಮಾತುಗಳಾಡುತ್ತಿರುವುದು ಕೇವಲ ಮುಲಾಮು ಲೇಪನ ಕಾರ್ಯವಾಗಿದೆ. ಇಡೀ ವಕ್ಫ್ ಅವಾಂತರ ಸರಿಪಡಿಸಲು ೧೯೭೪ರ ಅಧಿಸೂಚನೆ ರದ್ದುಗೊಳಿಸಬೇಕು. ಇಷ್ಟೆಲ್ಲ ಅವಾಂತರಗಳಿಗೆ ಕಾರಣರಾದ ಸಚಿವ ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು. ಮಾಲ್ಕಿ ಕಾಲಂಗಳಲ್ಲಿ ಮೊದಲಿನಂತೆ ಸರಿಪಡಿಸಬೇಕು. ಇಲ್ಲವಾದಲ್ಲಿ ಕಂಡದ್ದೆಲ್ಲ ತನ್ನದೇ ಎಂಬ ನರಿ ಬುದ್ಧಿ ವಕ್ಫ್ ಬೋರ್ಡ್ ಕರಾಳತೆ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯದ ಎಲ್ಲ ಜನತೆ ತಮ್ಮ ಆಸ್ತಿಗಳ ಪಹಣಿ ಪಡೆದುಕೊಂಡು ತಮ್ಮ ಮಾಲೀಕತ್ವದ ಬಗ್ಗೆ ದೃಢಪಡಿಸಿಕೊಳ್ಳಬೇಕೆಂದರು. ಸರ್ಕಾರಿ ಜಾಗೆಗಳ ಬಗ್ಗೆಯೂ ಸಾರ್ವಜನಿಕರು ಜಾಗೃತರಾಗಿ ಪರಿವೀಕ್ಷಣೆ ಮಾಡಿಕೊಳ್ಳಬೇಕು. ಹಿಂದೂ ಮಠಗಳು, ರುದ್ರಭೂಮಿಗಳು ಮತ್ತು ಕೃಷಿಕರ ಜಮೀನುಗಳಲ್ಲಿ ವಕ್ಫ್‌ನ ಕರಾಳ ಛಾಯೆ ಹೆಚ್ಚಾಗುತ್ತಿರುವುದರಿಂದ ಜನತೆಯೇ ಸರ್ಕಾರದ ವಿರುದ್ಧ ದಂಗೆ ಏಳುವಂತಾಗುತ್ತದೆಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಜಯಪ್ರಕಾಶ ಸೊಲ್ಲಾಪೂರ, ಜಿ.ಎಸ್.ಗೊಂಬಿ, ಧರೆಪ್ಪ ಉಳ್ಳಾಗಡ್ಡಿ, ಬಸನಗೌಡ ಪಾಟೀಲ, ವಿರುಪಾಕ್ಷಯ್ಯಾ ಮಠದ, ಭುಜಬಲಿ ವೆಂಕಟಾಪುರ, ಪರಪ್ಪ ಹಿಪ್ಪರಗಿ, ಮಾಧುಗೌಡ ಪಾಟೀಲ, ಆನಂದ ಕಂಪು, ಲಕ್ಕಪ್ಪಾ ಪಾಟೀಲ, ಸುಭಾಸ್ ಚೋಳಿ, ಮಹಾದೇವ ಕೋಟ್ಯಾಳ, ಸುಭಾಸ್ ಉಳ್ಳಾಗಡ್ಡಿ, ಹನುಮಂತ ತೇಲಿ, ನಗರಾಧ್ಯಕ್ಷೆ ವಿದ್ಯಾ ದಬಾಡಿ, ಅನುರಾಧ ಹೊರಟ್ಟಿ, ವೈಷ್ಣವಿ ಬಾಗೇವಾಡಿ, ಸವಿತಾ ಹೊಸೂರ, ಗೌರಿ ಮಿಳ್ಳಿ ಸೇರಿದಂತೆ ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪೂರ, ಚಿಮ್ಮಡ, ಹನಗಂಡಿ, ಜಗದಾಳ, ನಾವಲಗಿ, ಹಳಿಂಗಳಿ, ಮದನಮಟ್ಟಿ, ಆಸಂಗಿ, ಯಲ್ಲಟ್ಟಿ ಸೇರಿದಂತೆ ಸುತ್ತಲಿನ ರೈತರು, ಕಾರ್ಯಕರ್ತರು ಪಾಲ್ಗೊಂಡಿದ್ದರು.