ಬೀಳಗಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ ಪರಿಶೀಲನೆ

| Published : Nov 06 2024, 12:36 AM IST

ಬೀಳಗಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳಾದ ಕೆ.ಎಂ.ಜಾನಕಿ ಅವರು ಪಟ್ಟಣದ ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಜಿಲ್ಲಾಧಿಕಾರಿಗಳಾದ ಕೆ.ಎಂ.ಜಾನಕಿ ಅವರು ಪಟ್ಟಣದ ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಚುರುಕಾಗಿ ಮಾಹಿತಿ ನೀಡುವುದಲ್ಲದೆ ಅಲ್ಲಿನ ಹಲವು ಸಮಸ್ಯೆಗಳ ಕುರಿತಾಗಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿ ನೇರವಾಗಿ ರೋಗಿಗಳ ಕೊಠಡಿ ಪ್ರವೇಶಿಸಿ ಅಲ್ಲಿನ ವ್ಯವಸ್ಥೆ ಗಮನಿಸಿ ಖುದ್ದಾಗಿ ಅವರೇ ಬೆಡ್ ಮೇಲೆ ಕುಳಿತುಕೊಂಡು ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆ ಹೊರಭಾಗ ಮತ್ತು ಸ್ವಚ್ಛತೆ ಹಾಗೂ ವಾಹನ ನಿಲುಗಡೆ ಸ್ಥಳ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ನಾಲ್ಕು ವೈದ್ಯರ ಕೊರತೆ ಜತೆಗೆ ವಾಹನ ನಿಲುಗಡೆ ವ್ಯವಸ್ಥೆಗಾಗಿ ಪತ್ರ ನೀಡಿ ಮುಂದಿನ ಕ್ರಮ ತಗೆದುಕೊಳ್ಳುತ್ತೇವೆ. ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರಿಗೂ ಚಿಕಿತ್ಸೆ ಸಿಗುವಂತೆ ವೈದ್ಯರು ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ತಹಸೀಲ್ದಾರ್‌ ಕಾರ್ಯಾಲಯಕ್ಕೆ ಭೇಟಿ:

ತಾಲೂಕು ಆಸ್ಪತ್ರೆ ಭೇಟಿ ನಂತರ ಇಲ್ಲಿನ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಭೇಟಿ ನೀಡಿ ತಹಸೀಲ್ದಾರ್‌ ವಿನೋದ ಹತ್ತಳ್ಳಿ ಹಾಗೂ ಗ್ರೇಡ್‌-2 ತಹಸೀಲ್ದಾರ್‌ ಆನಂದ ಕೋಲಾರರೊಂದಿಗೆ ಸಭೆ ನಡೆಸಿ ಕಾರ್ಯಾಲಯಕ್ಕೆ ಆಗಮಿಸಿದ್ದ ಜನರ ಸಮಸ್ಯೆ ಆಲಿಸಿದರು.

ಪಪಂ ಸದಸ್ಯರ ಜತೆ ಚರ್ಚೆ:

ಜಿಲ್ಲಾಧಿಕಾರಿ ಭೇಟಿಗಾಗಿ ಆಗಮಿಸಿದ್ದ ಪಪಂ ಸದಸ್ಯರಾದ ಮುತ್ತು ಬೋರ್ಜಿ, ಸಿದ್ದು ಮಾದರ, ಸಿದ್ದಲಿಂಗೇಶ ನಾಗರಾಳ ಅವರು ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಹಲವು ತಿಂಗಳಿಂದ ಯಾವುದೇ ಸಭೆಗೆ ಆಹ್ವಾನಿಸಿಲ್ಲ. ವಾರ್ಡ್‌ ಸಮಸ್ಯೆ ಕೇಳಿಲ್ಲ. ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ವಿಷಯಗಳನ್ನು ನಮ್ಮ ಗಮನಕ್ಕೆ ತರುತ್ತಿಲ್ಲ ಹೀಗಾದರೆ ನಾವು ನಮ್ಮ ವಾರ್ಡ್‌ ಜನರಿಗೆ ಏನು ಉತ್ತರ ನೀಡಬೇಕು. ಈಗಾಗಲೇ ಸುಮಾರು ₹3 ಕೋಟಿ ಕಾಮಗಾರಿ ಟೆಂಡರ್‌ ಕರೆಯಲಾಗಿದ್ದು ಯಾವ ಕಾಮಗಾರಿ ಕೈಗೊಂಡಿದ್ದಾರೆ ಮತ್ತು ನಮ್ಮ ವಾರ್ಡ್‌ಗೆ ಬೇಕಿರುವ ಕಾಮಗಾರಿಗಳ ಕುರಿತಾಗಿ ನಮ್ಮೊಂದಿಗೆ ಚರ್ಚಿಸದೆ ಟೆಂಡರ್ ಕರೆಯಲಾಗಿದೆ ಎಂದು ಆರೋಪಿಸಿ, ಟೆಂಡರ್ ರದ್ದು ಮಾಡಿ ಮತ್ತೊಮ್ಮೆ ಎಲ್ಲ ಸದಸ್ಯರ ಸಭೆ ಕರೆದು ಟೆಂಡರ್ ಮಾಡಬೇಕು ಎಂದು ತಿಳಿಸಿದರು. ತಹಸೀಲ್ದಾರ್‌ ವಿನೋದ ಹತ್ತಳಿ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್ ಇಬ್ಬರು ಸೇರಿ ಈ ಕುರಿತು ಎಲ್ಲ ಮಾಹಿತಿ ನೀಡಿ ಸಭೆ ನಡೆಸಿ ವರದಿ ನೀಡುವಂತೆ ಡಿಸಿ ಸೂಚಿಸಿದರು. ಅಲ್ಲದೆ ತಾಲೂಕಿನಲ್ಲಿ ಯಾವುದಾದರು ಗಂಭೀರ ಸಮಸ್ಯೆ ಇದ್ದರೆ ಕೂಡಲೇ ಕ್ರಮ ತಗೆದುಕೊಂಡು ಎಲ್ಲ ವರದಿ ಜಿಲ್ಲಾಧಿಕಾರಿಗಳು ಕಚೇರಿಗೆ ಕಳುಹಿಸುವಂತೆ ಸೂಚಿಸಿದರು.

ಗ್ಯಾರಂಟಿ ಅನುಷ್ಠಾನ ಕಚೇರಿಗೆ ಭೇಟಿ:

ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಈಚೆಗೆ ಉದ್ಘಾಟನೆಯಾಗಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಾಲಯಕ್ಕೆ ಕೆ.ಎಂ.ಜಾನಕಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ ಸಮಿತಿ ಕಾರ್ಯವೈಖರಿ ಬಗ್ಗೆ ತಿಳಿಸಿದರು. ಸಮಿತಿ ಸದಸ್ಯರು ನಿತ್ಯ ಮೂರು ನಾಲ್ಕು ಗ್ರಾಮಗಳಿಗೆ ಭೇಟಿ ನೀಡಿ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಶೇ.95ರಷ್ಟು ಗ್ಯಾರಂಟಿ ಯೋಜನೆಗಳ ಯಶಸ್ವಿಯಾಗಿವೆ. ಇನ್ನುಳಿದ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಡಿಸಿ ಹೇಳಿದರು. ನಂತರ ಅಬಕಾರಿ ಇಲಾಖೆ, ನೋಂದಣಾಕಾರಿ ಕಾರ್ಯಾಲಯ, ದಾಖಲೆಗಳ ಸಂಗ್ರಹ ಕೊಠಡಿಗಳಿಗೆ ಭೇಟಿ ನೀಡಿ ಸ್ವಚ್ಛತೆ ಕುರಿತಾಗಿ ನಿಗಾವಹಿಸಿ, ತಹಸೀಲ್ದಾರ್‌ ಕಾರ್ಯಾಲಯ ಆವರಣದಲ್ಲಿನ ಸಸಿಗಳಿಗೆ ನಿತ್ಯ ನೀರು ಹಾಕುವ ಕೆಲಸ ಮಾಡಬೇಕು ಎಂದರು.

ವೈದ್ಯಾಧಿಕಾರಿ ಡಾ.ಸಂಜಯ ಯಡಹಳ್ಳಿ, ತಜ್ಞ ವೈದ್ಯರಾದ ಡಾ.ಶಿವಪ್ಪ ತೇಲಿ, ಗ್ರೇಡ್‌-2 ತಹಸೀಲ್ದಾರ್‌ ಆನಂದ ಕೋಲಾರ, ಸೇರಿದಂತೆ ಹಿರಿಯರಾದ ಈರಣ್ಣಾ ಕೆರೂರ, ಮಲ್ಲು ಹೆಳವರ, ಮಹಾದೇವ ಹಾದಿಮನಿ, ಸಿದ್ದು ಸಾರಾವರಿ, ರಮೇಶ ಗಾಣಿಗೇರ, ಪಡಿಯಪ್ಪ ಕಳ್ಳಿಮನಿ, ಸೇರಿದಂತೆ ಇತರರು ಇದ್ದರು.