ನಿಷ್ಠೆ, ಛಲ, ಹಠ, ಕಲೆ ಮತ್ತು ಸಾಧನೆ ಮಾಡುವ ಗುರಿ ಹೊಂದಿದ ವ್ಯಕ್ತಿಯಿಂದ ಮಾತ್ರ ಕಲ್ಲಿನಲ್ಲಿ ಕಾವ್ಯ ಕೆತ್ತಲು ಸಾಧ್ಯ. ಅದಕ್ಕೆ ಉದಾಹರಣೆ ಜಕಣಾಚಾರಿ. ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತಿದ್ದರು. ಇಂದಿನ ಯುವ ಪೀಳಿಗೆಗೆ ಜಕಣಾಚಾರಿ ಸ್ಪೂರ್ತಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಲೇಖನಿಯಲ್ಲೇ ಕಾವ್ಯ ಬರೆಯುವುದೇ ಕಷ್ಟಕರ. ಅಂತಹದರಲ್ಲಿ ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರಶಿಲ್ಪಿ ಜಕಣಾಚಾರಿ. ಕಲಾ ಮತ್ತು ಶಕ್ತಿಗೆ ಕೊನೆ ಇಲ್ಲ ಎಂಬುದನ್ನು ನಿರೂಪಿಸಿದರು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಕಲಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಿಷ್ಠೆ, ಛಲ, ಹಠ, ಕಲೆ ಮತ್ತು ಸಾಧನೆ ಮಾಡುವ ಗುರಿ ಹೊಂದಿದ ವ್ಯಕ್ತಿಯಿಂದ ಮಾತ್ರ ಕಲ್ಲಿನಲ್ಲಿ ಕಾವ್ಯ ಕೆತ್ತಲು ಸಾಧ್ಯ. ಅದಕ್ಕೆ ಉದಾಹರಣೆ ಜಕಣಾಚಾರಿ. ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತಿದ್ದರು. ಇಂದಿನ ಯುವ ಪೀಳಿಗೆಗೆ ಜಕಣಾಚಾರಿ ಸ್ಪೂರ್ತಿ ಎಂದರು.ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ಕಾರ್ಯಗಳು ತತ್ವರಿತವಾಗಿ ಪೂರ್ಣಗೊಳ್ಳಬೇಕು ಎಂಬ ಮನೋಭಾವನೆ ಇದೆ. ಆದರೆ ಜಕಣಾಚಾರಿ ಅವರ ಯಶಸ್ಸು ಮಂದಗತಿಯಲ್ಲಿ ಬಂದರೂ ಸಹ ಕಾರ್ಯ ಪರಿಪಕ್ವವಾಗಿ ಇರಬೇಕು ಎಂದು ನಂಬಿದ್ದರು. ಯಶಸ್ಸು ಗಳಿಸಲು ತಾಳ್ಮೆ, ಸಂಯಮ ಅಗತ್ಯ ಎಂದು ತೋರಿಸಿಕೊಟ್ಟವರು ಜಕಣಾಚಾರಿ ಎಂದು ಬಣ್ಣಿಸಿದರು.
ಸಾಮಾನ್ಯರಿಗೆ ಕಲ್ಲು ಕಲ್ಲಾಗಿ ಕಂಡರೆ ಅಮರಶಿಲ್ಪ ಜಕಣಚಾರ್ಯ ಅವರಿಗೆ ಕಲ್ಲು ಭಕ್ತಿಯ ಸ್ವರೂಪದಲ್ಲಿ ಗೋಚರಿಸುತ್ತಿತ್ತು ಅಂತಹ ಭಕ್ತಿಯ ಆಂತರ್ಯದ ದೃಷ್ಟಿಯನ್ನು ಚೇತನರು ಹೊಂದಿದ್ದರು. ವಿಶ್ವದಾದ್ಯಂತ ಕಲೆಗಳಿಗೆ ಜಕಣಾಚಾರ್ಯ ಅವರು ಸಾಕಾರ ಮೂರ್ತಿಯಾಗಿ ಕಾಣುತ್ತಾರೆ. ಕಲೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿಯಾಗಿ ಜಕಣಚಾರಿ ನಿಲ್ಲುತ್ತಾರೆ ಎಂದರು.ಜಕಣಚಾರ್ಯ ಅವರು ಕೇವಲ ವ್ಯಕ್ತಿಯಾಗಿ ಅಲ್ಲದೆ ಶ್ರಮದ ಸಂಕೇತವಾಗಿ ನಾವು ನೋಡಬಹುದು. ಯುವ ಪೀಳಿಗೆ ಅವರು ಜಗತ್ತಿಗೆ ನೀಡಿದ ಮೌಲ್ಯ ಮತ್ತು ಆದರ್ಶಗಳನ್ನು ತಿಳಿದುಕೊಳ್ಳಬೇಕು.ವ್ಯಕ್ತಿಗಳಿಗೆ ಆಪತ್ತು ಸಂಭವಿಸಬಹುದು ಆದರೆ ವ್ಯಕ್ತಿಯ ಕಲೆಗಳಿಗೆ ವಿಪತ್ತು ಸಂಭವಿಸುವುದಿಲ್ಲ ಎಂದರು.
ವಿಶ್ವಕರ್ಮ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಮುಡಾ ಜಿಲ್ಲಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಸುದರ್ಶನ್, ರಮೇಶ್, ಸೋಮಶೇಖರ್, ಶ್ರೀನಿವಾಸ್ ಇತರರಿದ್ದರು.
ಮೆರವಣಿಗೆಗೆ ಚಾಲನೆ:ವರ್ಣರಂಜಿತ ಬೆಳ್ಳಿ ರಥದ ಮೇಲೆ ಇರಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಪುಷ್ಪಾರ್ಚನೆ ಮಾಡಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಂಚರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ತಲುಪಿತು.