ನೇಕಾರ ನಗರದಲ್ಲಿ ಮನೆ ನಿರ್ಮಾಣಕ್ಕಾಗಿ ಪಡೆದಿರುವ ಜಾಗದಲ್ಲಿ ಅನಧಿಕೃತವಾಗಿ ಮಸೀದಿ, ಮದರಸಾ ನಿರ್ಮಿಸಿ ನಿತ್ಯ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಈ ಮಸೀದಿ ತೆರವಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಈ ವರೆಗೂ ಕ್ರಮಕೈಗೊಂಡಿಲ್ಲ.

ಹುಬ್ಬಳ್ಳಿ:

ಇಲ್ಲಿನ ನೇಕಾರ ನಗರದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ನೇಕಾರ ಹಿತರಕ್ಷಣಾ ವೇದಿಕೆ ಮತ್ತು ಹಿಂದೂ ಸಂಘಟನೆಗಳ ಒಕ್ಕೂಟ, ಮಸೀದಿ ತೆರವಿಗೆ ಜ.1ರ ಗಡುವು ನೀಡಿದೆ.

ನೇಕಾರ ನಗರದಲ್ಲಿ ಮನೆ ನಿರ್ಮಾಣಕ್ಕಾಗಿ ಪಡೆದಿರುವ ಜಾಗದಲ್ಲಿ ಅನಧಿಕೃತವಾಗಿ ಮಸೀದಿ, ಮದರಸಾ ನಿರ್ಮಿಸಿ ನಿತ್ಯ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಈ ಮಸೀದಿ ತೆರವಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಈ ವರೆಗೂ ಕ್ರಮಕೈಗೊಂಡಿಲ್ಲ. ಇದನ್ನು ತಡೆಯಬೇಕಾಗಿರುವ ಪಾಲಿಕೆ ಅಧಿಕಾರಿಗಳು ನೋಡಿಯೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಹಲವೆಡೆ ಅನಧಿಕೃತವಾಗಿ ಮಸೀದಿ, ಚರ್ಚ್‌ಗಳು ತಲೆ ಎತ್ತುತ್ತಿವೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಮಸೀದಿಯಲ್ಲಿ ಸ್ಥಳೀಯ ಮುಸಲ್ಮಾನ್‌ ಬಾಂಧವರು ಪ್ರಾರ್ಥನೆ ಸಲ್ಲಿಸುವುದಿಲ್ಲ. ಬದಲಾಗಿ ಅನ್ಯ ಕಡೆಗಳಿಂದ ಪ್ರಾರ್ಥನೆಗಾಗಿ ಆಗಮಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲಿ ಪ್ರಾರ್ಥನೆ ನಡೆಯುತ್ತಿದೆಯೋ ಅಥವಾ ಬೇರೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದೆಯೋ ಎಂಬ ಆತಂಕ ನಿರ್ಮಾಣವಾಗಿದೆ ಎಂದ ಪ್ರತಿಭಟನಾಕಾರರು, ಜ. 1ರೊಳಗೆ ಈ ಮಸೀದಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಜ. 2ರಂದು ಹೋರಾಟ ನಡೆಸುತ್ತೇವೆಂದು ಎಚ್ಚರಿಸಿದರು.

ಈ ವೇಳೆ ಪ್ರತಿಭಟನಾಕಾರರು ತಹಸೀಲ್ದಾರ್‌ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ಪ್ರಮುಖರಾದ ಶ್ರೀಧರ ಕಲಬುರ್ಗಿ, ಮಂಜು ಕಾಟ್ಕರ್, ಬಸವರಾಜ ಗೌಡರ, ವೆಂಕಟೇಶ ಕಾಟವೆ, ಮಂಜುನಾಥ ತೇರದಾಳ, ಮಹಾಂತೇಶ ಉಮ್ಮಣ್ಣವರ, ಶಿವಾನಂದ ಸತ್ತಿಗೇರಿ, ರಮೇಶ ಕದಂ ಸೇರಿದಂತೆ ಹಲವರಿದ್ದರು.