ಪ್ರಾಣಿ ಮತ್ತು ಸಸ್ಯ ಸಂಕುಲದಲ್ಲಿ ಇಲ್ಲದ ಅಸಮಾನತೆಗಳು ಮಾನವ ಸಂಕುಲದಲ್ಲಿ ಮಾತ್ರ ಇವೆ. ಮನುಷ್ಯನೇ ಸೃಷ್ಟಿಸಿಕೊಂಡಿರುವ ವೈರುಧ್ಯಗಳಿವು. ಇಂತಹ ಅಸಮಾನತೆಗಳನ್ನು ಮೆಟ್ಟಿ ನಿಲ್ಲಬೇಕೆಂದರೆ ಎಲ್ಲರ ಹೃದಯದಲ್ಲೂ ಪ್ರೀತಿ -ಸಹನೆ ಮತ್ತು ಸಹಾಯಹಸ್ತ ಮನೋಭಾವನೆಗಳು ನೆಲೆಗೊಳ್ಳಬೇಕು ಎಂದು ಡಾನ್ ಬಾಸ್ಕೋ ಸಂಸ್ಥೆಯ ಸಿಎಸ್‌ಎನ್ ಯೋಜನೆ ನಿರ್ದೇಶಕ ಫಾದರ್ ರೆಜಿ ಜೇಕಬ್ ಹೇಳಿದ್ದಾರೆ.

- ಡಾನ್ ಬಾಸ್ಕೋ ಸಂಸ್ಥೆಯಿಂದ ಫಾದರ್ ರೆಜಿ ಜೇಕಬ್ ನೇತೃತ್ವದಲ್ಲಿ ವಿತರಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಾಣಿ ಮತ್ತು ಸಸ್ಯ ಸಂಕುಲದಲ್ಲಿ ಇಲ್ಲದ ಅಸಮಾನತೆಗಳು ಮಾನವ ಸಂಕುಲದಲ್ಲಿ ಮಾತ್ರ ಇವೆ. ಮನುಷ್ಯನೇ ಸೃಷ್ಟಿಸಿಕೊಂಡಿರುವ ವೈರುಧ್ಯಗಳಿವು. ಇಂತಹ ಅಸಮಾನತೆಗಳನ್ನು ಮೆಟ್ಟಿ ನಿಲ್ಲಬೇಕೆಂದರೆ ಎಲ್ಲರ ಹೃದಯದಲ್ಲೂ ಪ್ರೀತಿ -ಸಹನೆ ಮತ್ತು ಸಹಾಯಹಸ್ತ ಮನೋಭಾವನೆಗಳು ನೆಲೆಗೊಳ್ಳಬೇಕು ಎಂದು ಡಾನ್ ಬಾಸ್ಕೋ ಸಂಸ್ಥೆಯ ಸಿಎಸ್‌ಎನ್ ಯೋಜನೆ ನಿರ್ದೇಶಕ ಫಾದರ್ ರೆಜಿ ಜೇಕಬ್ ಹೇಳಿದರು.

ಡಿ.22ರಂದು ರಾತ್ರಿ ನಗರದ ಅನೇಕ ಸ್ಥಳಗಳಲ್ಲಿ ಕಂಡುಬಂದ ನಿರ್ಗತಿಕರು, ಬಡವರಿಗೆ ಕ್ರಿಸ್ ಮಸ್ ಹಬ್ಬದ ನಿಮಿತ್ತ ಹೊದಿಕೆ, ಊಟವನ್ನು ನೀಡಿ, ಪ್ರೀತಿ ಹಾಗೂ ಕರಣೆಯ ಸಂದೇಶವನ್ನು ನೀಡಿದರು. ಮಕ್ಕಳ ಇರುವಿಕೆಯಲ್ಲಿ ಮಾತ್ರ ದೇವರ ಛಾಯೆಯನ್ನು ಗುರುತಿಸಲು ಸಾಧ್ಯ. ಅವರಲ್ಲಿ ಕಪಟ, ಮೋಸ, ವಂಚನೆ, ಸ್ವಾರ್ಥ ಮತ್ತು ತಾರತಮ್ಯಗಳು ಸುಳಿದಾಡುವುದಿಲ್ಲ. ಹುಟ್ಟುವಾಗ ಪ್ರತಿಯೊಬ್ಬರೂ ವಿಶ್ವಮಾನವರೇ ಆಗಿರುತ್ತಾರೆ. ಆದರೆ ಬೆಳೆಯುತ್ತಾ ಅನೇಕ ಕಾರಣಗಳಿಂದಾಗಿ ದ್ವೇಶ ಮತ್ತು ಕಟುಕತನಗಳನ್ನು ಕೆಲವರು ಅಳವಡಿಸಿಕೊಂಡು ಮಾನವೀಯ ಮೌಲ್ಯಗಳ ಹರಣ ಮಾಡುತ್ತಿದ್ದಾರೆ. ಇದು ವಿಷಾದದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ಸಂಯೋಜಕ ಬಿ.ಮಂಜಪ್ಪ ಮಾತನಾಡಿ, ಇಂದಿನ ಮಕ್ಕಳನ್ನು ವಿಶ್ವಮಾನವರನ್ನಾಗಿ ರೂಪಿಸಲು ಮತ್ತು ಸಕಲ ಜೀವರಾಶಿಗಳಿಗೆ ಪ್ರೀತಿ ಮತ್ತು ಕರುಣೆಯನ್ನು ನೀಡುವವರನ್ನಾಗಿಸಲು ಶ್ರಮಿಸಬೇಕು ಹಾಗೂ ವಿಶ್ವ ಶಾಂತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಮಾಡೋಣ ಎಂದರು.

ನಗರದ ವಿದ್ಯಾರ್ಥಿ ಭವನ, ಕೆ.ಇ.ಬಿ. ಬಸ್ ನಿಲ್ದಾಣ, ಶಾಮನೂರು ರಸ್ತೆ, ರೈಲ್ವೆ ನಿಲ್ದಾಣ, ಹಳೇ ಬಸ್ ನಿಲ್ದಾಣ, ಗಣೇಶಗುಡಿ ಬಸ್ ನಿಲ್ದಾಣ, ಭಾರತ್ ಕಾಲೋನಿ, ಕೆ.ಎಸ್.ಆರ್.ಟಿ. ಬಸ್ ನಿಲ್ದಾಣ, ಬಂಬೂ ಬಜಾರ್, ಅರಳೀ ಮರ ವೃತ್ತ, ಜಗಳೂರು ಬಸ್ ನಿಲ್ದಾಣ, ಗಡಿಯಾರ ಕಂಬ ಪ್ರದೇಶ ಮೊದಲಾದ ಸ್ಥಳಗಳಲ್ಲಿ ರಾತ್ರಿ ಅನೇಕ ಕಾರಣಗಳಿಂದ ಬೀದಿಯನ್ನು ಆಶ್ರಯಿಸಿ ಚಳಿಯಲ್ಲಿ ಮಲಗಿದ್ದ ಅನೇಕ ಬಡವರು ಮತ್ತು ನಿರ್ಗತಿಕರು ಹಾಗೂ ಮನೆಯಿಂದ ಕಡೆಗಣಿಸಿರುವ ಸುಮಾರು 35ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಮಕ್ಕಳನ್ನು ಈ ಸಂದರ್ಭದಲ್ಲಿ ಗುರುತಿಸಿ, ಅವರಿಗೆ ಕ್ರಿಸ್‌ಮಸ್ ಹಬ್ಬದ ನಿಮಿತ್ತ ಊಟ, ಕೇಕ್ ಮತ್ತು ಹೊದೆಯಲು ರಗ್ ನೀಡಲಾಯಿತು.

ತೆರೆದ ತಂಗುದಾಣ ಯೋಜನೆ ಸಂಯೋಜಕ ಎಚ್.ಸುನೀಲ್, ಶ್ರೀನಿವಾಸ್, ದಿನೇಶ್. ಕೆ.ಎನ್. ಹೊನ್ನಪ್ಪ. ನಾಗರಾಜ, ಬ್ರದರ್ಸ್‌ ಮತ್ತು ಮಕ್ಕಳು ಇತರರು ಇದ್ದರು.

- - -

-23ಕೆಡಿವಿಜಿ39:

ದಾವಣಗೆರೆಯಲ್ಲಿ ಕ್ರಿಸ್ ಮಸ್ ಅಂಗವಾಗಿ ಫಾ. ರೆಜಿ ಜೇಕಬ್ ವಿವಿಧೆಡೆ ತೆರಳಿ ಬಡವರು, ನಿರ್ಗತಿಕರು ಸೇರಿದಂತೆ ಇತರರಿಗೆ ರಗ್ಗು, ಊಟವನ್ನು ನೀಡಿ ಕರುಣೆಯ ಸಂದೇಶ ತಿಳಿಸಿದರು.