ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಯಕ ಸಮುದಾಯದ ಮುಖಂಡರಾಗಿರುವ ಶ್ರೀರಾಮು ಅವರನ್ನು ಬಿಜೆಪಿ ಮತ್ತು ಜನಾರ್ಧನ ರೆಡ್ಡಿ ಅವರು ತೇಜೋವಧೆ ಮಾಡುತ್ತಿದ್ದಾರೆ. ಇದು ಮುಂದುವರಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮುಲು ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಂಜಿತ್ ಎಚ್ಚರಿಕೆ ನೀಡಿದರು.ಕೋವಿಡ್ ಸಂದರ್ಭದಲ್ಲಿ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾದವರ ಮನೆಗಳಿಗೆ ತೆರಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಂತರ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಲಾಗಿದ್ದು, ಬಳಿಕ ಸಾರಿಗೆ ಇಲಾಖೆ ಜವಾಬ್ದಾರಿ ನೀಡಲಾಯಿತು. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಕ್ಕೆ ಮತ್ತು ನಾಯಕ ಸಮುದಾಯಕ್ಕೆ ಒಳ್ಳೆಯ ಕೆಲಸ ಮಾಡಿರುವ ಶ್ರೀರಾಮುಲು ಅವರನ್ನು ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಡೂರು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಬಿಜೆಪಿಯೇ ಕಾರಣವೇ ಹೊರತು ಶ್ರೀರಾಮುಲು ಅಲ್ಲ. ಜನಾರ್ಧನ ರೆಡ್ಡಿ ಅವರ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸಿದ್ದರು. ಆದರೂ ಶ್ರೀರಾಮುಲು ಅವರು ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದರು. ಆದರೆ, ಅಲ್ಲಿ ಅಭ್ಯರ್ಥಿ ಸೋಲಬೇಕಾಯಿತು. ಇದಕ್ಕೆ ಶ್ರೀರಾಮುಲು ಅವರನ್ನು ಹೊಣೆಯನ್ನಾಗಿಸುವುದು ಸರಿಯಲ್ಲ. ಚುನಾವಣೆಯಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಇದನ್ನೇ ದೊಡ್ಡದು ಮಾಡಿ ಅವರನ್ನು ನಿರ್ಲಕ್ಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಈವರೆವಿಗೂ ಯಾವುದೇ ಉನ್ನತ ಸ್ಥಾನಮಾನ ನೀಡಿಲ್ಲ. ಈಗಲಾದರೂ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.ಅಭಿಮಾನಿ ಸಂಘದ ಶ್ರೀರಂಗಪಟ್ಟಣ ಮಂಜು, ಮಳವಳ್ಳಿ ಮಲ್ಲೇಶ್, ಬಾಲು ಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))