ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಜನಸಾಮಾನ್ಯರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಜನಸ್ಪಂದನಾ ಸಭೆಯಲ್ಲಿ ಅನಾವರಣಗೊಳ್ಳುವ ಶೇ. ೯೦ರಷ್ಟು ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲಾಗುವುದರಿಂದ ಸಭೆ ಸಾರ್ವಜನಿಕರಿಗೆ ಸಹಾಯಕವಾಗಿದೆ ಎಂದರು. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಹೊಗಳುವುದು ತಪ್ಪಲ್ಲ, ಹಾಗೆಯೇ ಮೈಗಳ್ಳ ಅಧಿಕಾರಿಗಳ ಬಗ್ಗೆ ನಾನು ಕಠಿಣ ನಿರ್ಧಾರ ಕೈಗೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಜನಸ್ಪಂದನಾ ಸಭೆ ಅಧಿಕಾರಿಗಳ ನಡವಳಿಕೆಯನ್ನು ಅನಾವರಣ ಮಾಡುವ ಉತ್ತಮ ವೇದಿಕೆಯಾಗಿದೆ ಎಂದರು.
ಸಭೆಯಲ್ಲಿ ಕೇಳಿಬಂದಿದ್ದು: ಚಂಪಕನಗರ ಬಡಾವಣೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಅಧಿಕಾರಿಗಳನ್ನು ಕೇಳಿದರೆ ಅನುದಾನದ ಕೊರತೆ ಎಂದು ಹೇಳುತ್ತಾರೆ. ಅತ್ಯಂತ ಹಳೆಯ ಬಡಾವಣೆಯ ಅಭಿವೃದ್ಧಿಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶೀಘ್ರವೆ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದೇನೆ ಎಂದರು.೧೦ ತಿಂಗಳಿನಿಂದ ಇ ಖಾತೆ ಮಾಡಿಕೊಟ್ಟಿಲ್ಲ ಎಂಬ ಜಂಭರಡಿ ಗ್ರಾಮದ ವ್ಯಕ್ತಿಯೊಬ್ಬರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಏನ್ರೀ ೧೦ ತಿಂಗಳ ಬೇಕೆನ್ರಿ. ಪ್ರಜ್ಞೆ ಬೇಡ್ವ ನಿಮಗೆ ಎಂದು ಕ್ಯಾಮನಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕಸಾಪಕ್ಕೆ ನಿವೇಶನ ನೀಡಿ: ಅರ್ಧ ಶತಮಾನಗಳಿಂದ ತಾಲೂಕು ಕಸಾಪ ಕರ್ತವ್ಯ ನಿರ್ವಹಿಸುತ್ತಿದೆ. ಕಸಾಪಕ್ಕಾಗಿ ಸ್ವಂತ ನಿವೇಶನ ಪಡೆಯಲು ಸಾಕಷ್ಟು ಹೋರಾಟ ನಡೆಸಲಾಗಿದೆ ಆದರೂ ಪ್ರಯೋಜವಿಲ್ಲ ದಯವಿಟ್ಟು ಕಸಾಪಕ್ಕೊಂದು ನಿವೇಶನ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದ ಗುರುಮೂರ್ತಿ ವಿನಂತಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಾಗುವುದು ಎಂದರು.ಸಮಸ್ಯೆ ಬಗೆಹರಿಸಿ: ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪಟ್ಟಣದಲ್ಲಿ ಎಲ್ಲೆ ಹೋದರೂ ರೈಲ್ವೆ ಇಲಾಖೆ ಈ ಜಮೀನು ನಮ್ಮದು ಎನ್ನುತ್ತಾರೆ. ಪಟ್ಟಣದಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಸ್ಥಳವಿಲ್ಲ. ಆದ್ದರಿಂದ, ಜಿಲ್ಲಾಧಿಕಾರಿ ರೈಲ್ವೆ ಹಾಗೂ ಪುರಸಭೆ ನಡುವಿನ ಜಮೀನಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ವೇ ನಡೆಸಬೇಕು ಎಂದರು. ಜಿಲ್ಲಾಧಿಕಾರಿ ಮಾತನಾಡಿ, ತಕ್ಷಣವೆ ಸರ್ವೇ ನಡೆಸಲಾಗುವುದು ಎಂದರು.
ಇಬ್ಬಗೆ ನೀತಿ:ಅರಣ್ಯ ಇಲಾಖೆ ಎಂಬುದು ಸಾರ್ವಜನಿಕರ ಜೀವ ತಿನ್ನುವ ಇಲಾಖೆಯಾಗಿದೆ. ಯಾವುದೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ತಲತಲಾಂತರದಿಂದ ವಾಸಿಸುತ್ತಿರುವ ಗ್ರಾಮಗಳೆ ಸೇಕ್ಷನ್ ೪ ಅಡಿ ಬರುತ್ತಿದೆ ಎಂಬ ಕಾರಣ ನೀಡಿ ಕಿರುಕುಳ ನೀಡಲಾಗುತ್ತಿದೆ. ಒಂದು ಎರಡು ಎಕರೆ ಭೂಮಿ ಒತ್ತುವರಿ ಮಾಡಿದ್ದರೆ ತೆರವುಗೊಳಿಸಲು ಇಲಾಖೆ ಮುಂದಾಗುತ್ತದೆ. ಆದರೆ, ನೂರಾರು ಎಕರೆ ಭೂಮಿ ಒತ್ತುವರಿದಾರ ತಂಟೆಗೆ ಇಲಾಖೆ ಹೋಗುವುದಿಲ್ಲ.ಜಿಲ್ಲೆಯ ನಿವೃತ್ತ ಸೈನಿಕರಿಗೆ ತಾಲೂಕಿನಲ್ಲಿ ಜಮೀನು ನೀಡಿ. ಆದರೆ, ಇಲ್ಲಿ ಉತ್ತರ ಕರ್ನಾಟಕದ ನಿವೃತ್ತರಿಗೂ ನೀಡಲಾಗುತ್ತಿದೆ ಇದಕ್ಕೆ ಅವಕಾಶ ನೀಡ ಬೇಡಿ. ಸದ್ಯ ತಾಲೂಕಿನ ಜನರಿಗೆ ಸಮಸ್ಯೆಯಾಗಿರುವ ಅಕ್ರಮ ಸಕ್ರಮ, ಬಗರ್‌ಹುಕುಂ, ಪೋಡಿ ಸಮಸ್ಯೆ ಬಗೆಹರಿಸಿ ಎಂದು ಕ್ಯಾಮನಹಳ್ಳಿ ರಾಜ್ ಕುಮಾರ್ ಹೇಳಿದರು. ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಶ್ವಾಸನೆ ನೀಡಿದರು.ಟ್ರಾಫಿಕ್ ಸಮಸ್ಯೆ ಬಗೆಹರಿಸಿ: ಪಟ್ಟಣದ ಕೆಲವು ರಸ್ತೆಗಳನ್ನು ಏಕಮುಖಗೊಳಿಸುವ ಮೂಲಕ ಟ್ರಾಫಿಕ್ ಸಮಸ್ಯೆ ನಿವಾರಿಸಿ ಎಂದು ನೇತ್ರಾವತಿ ಮಂಜುನಾಥ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೇಕಾಬಿಟ್ಟಿ ನಿಲುಗಡೆಗೆ ಕಡಿವಾಣ ಹಾಕಿ ಕಾಲಹರಣ ಮಾಡಬೇಡಿ ಎಂದು ಡಿವೈಎಸ್‌ಪಿ ಅವರಿಗೆ ಸೂಚನೆ ನೀಡಿದರು. ಮುಖ್ಯರಸ್ತೆ ಅಗಲೀಕರಣಗೊಳಿಸಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಳಿಸಿ ಎಂಬ ಸಾರ್ವಜನಿಕರ ಕೂಗಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿ, ಸದ್ಯ ಜಿಲ್ಲಾಧಿಕಾರಿಗಳ ನ್ಯಾಯಲಯದಲ್ಲಿ ಪ್ರಕರಣ ಇದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಜರುಗಿಸಲಾಗುವುದು ಎಂದರು.ಸೆಕ್ಷನ್ ೪ ಹೆದರಬೇಡಿ: ಸೇಕ್ಷನ್ ೪ರ ಹೆಸರಿನಲ್ಲಿ ಅರಣ್ಯ ಇಲಾಖೆ ದೌರ್ಜನ್ಯದ ಬಗ್ಗೆ ಗಮನ ಸೆಳದ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಸೆಕ್ಷನ್ ೪ ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಆದ್ದರಿಂದ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಜನವಸತಿ ಪ್ರದೇಶಗಳನ್ನು ಸೆಕ್ಷನ್ ೪ ರಿಂದ ಕೈಬಿಡಿಸಲಾಗುವುದು ಎಂದರು.ಮಾಜಿ ಸೈನಿಕರಿಗೆ ಭೂಮಿ: ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಮಾಜಿ ಸೈನಿಕರಿಗೆ ಒಂದು ಎಕರೆ ಭೂಮಿ ನೀಡಲಾಗುವುದು. ಹೆಚ್ಚಿನ ಭೂಮಿ ನೀಡಲು ತಾಲೂಕಿನಲ್ಲಿ ಸರ್ಕಾರಿ ಜಮೀನಿನ ಕೊರತೆ ಇದೆ. ಮುಂದೆ ಸರ್ಕಾರದ ಉದ್ದೇಶಕ್ಕೆ ಜಮೀನು ಇಲ್ಲದಾಗಿದ್ದು ನಾವೇ ಜಮೀನು ಖರೀಧಿಸ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಂಬಳಕ್ಕಾಗಿ ಕೆಲಸ ಮಾಡಬೇಡಿ: ಸರ್ಕಾರಿ ಇಲಾಖೆಗಳಲ್ಲಿ ಕೆಲಸವಾಗುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳಿಗೆ ರಸ್ತೆಗೆ ಇಳಿದು ಕೆಲಸ ಮಾಡುವುದು ಕಷ್ಟ ಕೆಳಹಂತದ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆ ಬಗೆಹರಿಸಿ ಕೇವಲ ಸಂಬಳಕ್ಕಾಗಿ ಕೆಲಸ ಮಾಡಬೇಡಿ ಎಂದರು.ಒಟ್ಟಾರೆ ಸಮಸ್ಯೆ ನಿವೇದಿಸಿ ೨೨೦ ಅರ್ಜಿಗಳು ಸಲ್ಲಿಕೆಯಾಗಿದ್ದು ಸಲ್ಲಿಕೆಯಾದ ಅರ್ಜಿಗಳಲ್ಲಿ ೩೦ ಅರ್ಜಿಗಳಿಗೆ ಪರಿಹಾರ ಒದಗಿಸುವುದರೊಳಗೆ ಗಂಟೆ ೩ ಆದ್ದರಿಂದ ಸಭೆಯನ್ನು ಮೊಟಕುಗೊಳಿಸಿದ ಶಾಸಕರು ಅರ್ಜಿ ಸಲ್ಲಿಸಿರುವ ಎಲ್ಲ ವ್ಯಕ್ತಿಗಳಿಗೂ ಇನ್ನೂ ೧೫ ದಿನಗಳಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯದರ್ಶಿ ಪೂರ್ಣಿಮ, ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಜಿಪಂ ಉಪ ಕಾರ್ಯದರ್ಶಿ ಎಂ.ಡಿ ಚಂದ್ರಶೇಖರ್, ಯೋಜನಾ ನಿರ್ದೇಶಕ ಜಗದೀಶ್ ಮುಂತಾದವರಿದ್ದರು.*ಬಾಕ್ಸ್‌ನ್ಯೂಸ್: ಉಗ್ರರೂಪ ಪ್ರದರ್ಶಿಸಿದ ಜಿಲ್ಲಾಧಿಕಾರಿಹಾನುಬಾಳ್ ಗ್ರಾ.ಪಂ ವ್ಯಾಪ್ತಿಯ ಸರ್ವೇ ನಂಬರ್ ೯೫ರ ಜಮೀನಿಗೆ ಇ ಖಾತೆ ಮಾಡಿಕೊಡುತ್ತಿಲ್ಲ ಎಂಬ ದೂರಿಗೆ ಹಾನುಬಾಳ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಅವರ ವಿರುದ್ಧ ಉಗ್ರರೂಪ ಪ್ರದರ್ಶಿಸಿದ ಜಿಲ್ಲಾಧಿಕಾರಿ, ಏನು ಮಹಾನುಭಾವ ಒಂದು ವರ್ಷ ಬೇಕಾ ಈ ಖಾತೆ ಮಾಡಲು ಎಂದರು. ಈ ವೇಳೆ ಮಾತನಾಡಲು ಮುಂದಾದ ಅಭಿವೃದ್ಧಿ ಅಧಿಕಾರಿಯನ್ನು ತಡೆದು, ಮತ್ತೆ ಮಾತನಾಡ ಬೇಡ, ಏಕೆ ಸಾರ್ವಜನಿಕರ ಕೆಲಸವೆಂದರೆ ಅಸಡ್ಡೆಯ ರಾಜಕುಮಾರ. ಈ ದೊಡ್ಡ ಮನುಷ್ಯ ಕೆಲಸ ಮಾಡುವುದು ಬೇಡ. ಎಡಿಎಲ್‌ಆರ್ ಅವರೆ ನೀವೇ ಹೋಗಿ ಸರ್ವೇ ನಡೆಸಿ ಕೆಲಸ ಮಾಡಿಕೊಡಪ್ಪ. ಈತನನ್ನು ಸಸ್ಪೆಂಡ್ ಮಾಡ್ರಿ ಎಂದು ಕಿಡಿಕಾರಿದ ಜಿಲ್ಲಾಧಿಕಾರಿ, ಇದೇ ರೀತಿ ಕುರುಭತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯ ಮೇಲೆಯೂ ಹರಿಹಾಯ್ದರು. . ಜೀನ್ಸ್ ಪ್ಯಾಂಟ್ ಹಾಕಲಿಕ್ಕೆ ಬರುತ್ತೆ ಜನರ ಕೆಲಸ ಮಾಡಲಿಕ್ಕಿ ಬರುವುದಿಲ್ವ ಎಂದು ಗುಡುಗಿದರು.