ಪಾವಗಡ ಪುರಸಭೆಗೆ ಜೆಡಿಎಸ್ ಮುತ್ತಿಗೆ ಯತ್ನ, ಪ್ರತಿಭಟನೆ

| Published : Aug 07 2025, 12:45 AM IST

ಪಾವಗಡ ಪುರಸಭೆಗೆ ಜೆಡಿಎಸ್ ಮುತ್ತಿಗೆ ಯತ್ನ, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆಸರು ಬದಲಾವಣೆಯ ಹುನ್ನಾರ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಅಕ್ರಮ ಮತ್ತು ಅಸ್ತಿಯ ಇ ಖಾತೆಗೆ ಸಾವಿರಾರು ರು.ಗಳ ಲಂಚ ಹಾಗೂ ವಿಳಂಬದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಿದರು.

-ಎಚ್‌ಡಿ ಕುಮಾರಸ್ವಾಮಿ ಬಡಾವಣೆಯ ಹೆಸರು ಬದಲಾವಣೆ ಆರೋಪ

ಕನ್ನಡಪ್ರಭ ವಾರ್ತೆ ಪಾವಗಡಪಟ್ಟಣದ ಕುಮಾರಸ್ವಾಮಿ ಬಡಾವಣೆಯನ್ನು ಮಾಜಿ ಸಚಿವ ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣ ಮಾಡಲು ಪುರಸಭೆ ಮುಂದಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೂಲೆ ಎಂದು ಆರೋಪಿಸಿ ಬುಧವಾರ ತಾಲೂಕು ಜೆಡಿಎಸ್ ಘಟಕದ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.

ಹೆಸರು ಬದಲಾವಣೆಯ ಹುನ್ನಾರ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಅಕ್ರಮ ಮತ್ತು ಅಸ್ತಿಯ ಇ ಖಾತೆಗೆ ಸಾವಿರಾರು ರು.ಗಳ ಲಂಚ ಹಾಗೂ ವಿಳಂಬದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪುರಸಭೆಗೆ ಮುತ್ತಿಗೆ ಹಾಕುತ್ತಿದ್ದಂತೆ ಗೇಟ್‌ ಬಳಿ ತಡೆದ ಹಿನ್ನೆಲೆಯಲ್ಲಿ ಕೆಲ ಕಾಲ ಪೊಲೀಸರು ಮತ್ತು ಜೆಡಿಎಸ್‌ ಮುಖಂಡರ ನಡುವೆ ತೀವ್ರ ವಾಗ್ದಾದ ನಡೆಯಿತು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಸಿಎಂ ಅಗಿದ್ದ ವೇಳೆ ಪಟ್ಟಣದ ಶಿರಾ ರಸ್ತೆ ಪಕ್ಕದಲ್ಲಿ ಕಡುಬಡವರಿಗೆ 400 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿತ್ತು. ಆ ವೇಳೆ ತಾಲೂಕಿನಲ್ಲಿ ತಿಮ್ಮರಾಯಪ್ಪ ಶಾಸಕರಾಗಿದ್ದರು. ವಿದ್ಯುತ್‌, ಚರಂಡಿ ಹಾಗೂ ಸಿಸಿರಸ್ತೆ ನಿರ್ಮಿಸಿಕೊಟ್ಟಿದ್ದರು.

ಈ ವೇಳೆ ಎಚ್‌ಡಿಕೆ ನಾಗರಿಕರ ಸನ್ಮಾನ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಬಡಾವಣೆ ಎಂದು ನಾಮಕರಣ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಪುರಸಭೆ ಆಡಳಿತ ಮಂಡಳಿ, ಇದೇ ಬಡಾವಣೆಗೆ ಮಾಜಿ ಸಚಿವ ವೆಂಕಟರಮಣಪ್ಪ ಅವರ ಹೆಸರಿಡಲು ಮುಂದಾಗಿದ್ದು, ಕಾಂಗ್ರೆಸ್ಸಿನ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಸರು ಬದಲಾವಣೆಗೆ ಮುಂದಾದರೆ,ಮುಂದಿನ ದಿನಗಳಲ್ಲಿ ಜೆಡಿಎಸ್‌ನಿಂದ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ಅವರು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, 2007ರಲ್ಲಿ ಎಚ್‌ಡಿಕೆ ಸಿಎಂ ಅಗಿದ್ದ ವೇಳೆ ಬಡ ಕುಟುಂಬಗಳಿಗಾಗಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ. ಆ ನೆನಪಿಗಾಗಿ ಬಡಾವಣೆಗೆ ಕುಮಾರಸ್ವಾಮಿ ಬಡಾವಣೆ ಎಂದು ಹೆಸರಿಡಲಾಗಿದೆ.ಈಗ ಕಾಂಗ್ರೆಸ್ ಸೇಡಿನ ರಾಜಕಾರಣ ನಡೆಸಿ ಹೆಸರು ಬದಲಿಸಲು ಯತ್ನಿಸುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ತರುವ ಈ ಕ್ರಮವನ್ನು ಜೆಡಿಎಸ್ ತೀವ್ರವಾಗಿ ವಿರೋಧಿಸುತ್ತಿರುವುದಾಗಿ ಆರೋಪಿಸಿದರು.

ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಎ.ಈರಣ್ಣ, ಮಹಾಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಪುರಸಭೆ ಮಾಜಿ ಸದಸ್ಯ ಗುಟ್ಟಹಳ್ಳಿ ಮಣಿ ಮಾತನಾಡಿದರು.

ಈ ವೇಳೆ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸುದೇಶ್‌ ಕುಮಾರ್‌ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಕಾನೂನತ್ಮಕ ಕ್ರಮ ಕೈಗೊಳ್ಳಲಾಗುವುದು. ಇ ಖಾತೆ ಸಂಬಂಧ ಹಣಪಡೆದಿದ್ದರೆ ಸೂಕ್ತ ಕ್ರಮವಹಿಸುವುದಾಗಿ ಹೇಳಿದರು.

ಬಳಿಕ ವಾಪಸ್ಸಾಗಿ ಬಳ್ಳಾರಿ ರಸ್ತೆಯಲ್ಲಿ ಕೆಲ ಕಾಲ ರಸ್ತೆ ನಡೆಸಿದ ಪ್ರತಿಭಟನಾಕಾರರರು, ರಾಜ್ಯ ಸರ್ಕಾರದ ಜನಪರ ಯೋಜನೆಯ ವೈಫಲ್ಯದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಿ.ಎನ್. ವರದರಾಜು ಬೇಡಿಕೆ ಕುರಿತು ಈ ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು.

ಹಿರಿಯ ಮುಖಂಡ ಎಸ್‌.ತಿಮ್ಮಾರೆಡ್ಡಿ, ರಾಜಶೇಖರಪ್ಪ, ಗೋವಿಂದಬಾಬು, ಅಕ್ಕಲಪ್ಪ ನಾಯ್ಡ್‌, ಮಾಜಿ ಜಿಪಂ ಉಪಾಧ್ಯಕ್ಷ ನರಸಿಂಹಪ್ಪ ಹಾಗೂ ರೈತ ಘಟಕದ ಅಧ್ಯಕ್ಷ ಗಂಗಾಧರ್ ನಾಯ್ಡ್, ಪುರಸಭೆ ಮಾಜಿ ಸದಸ್ಯ ಮನುಮಹೇಶ್, ವಸಂತ್‌ಕುಮಾರ್‌, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗಡಂ ತಿಮ್ಮರಾಜು, ತಾಪಂ ಮಾಜಿ ಅಧ್ಯಕ್ಷ ರಾಜ್‌ಗೋಪಾಲ್‌, ರಾಮಾಂಜಿನರೆಡ್ಡಿ, ತಾಲೂಕು ಜಾತ್ಯಾತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನೆರಳೇಕುಂಟೆ ಭರತ್ ಕುಮಾರ್, ಹೊಸಕೋಟೆ ನಾಗರಾಜು, ಸತ್ಯನಾರಾಯಣ್‌, ಹೋರಾಟಗಾರ ಶಾಂತಿ ಮೆಡಿಕಲ್‌ ದೇವರಾಜ್‌, ಮುಖಂಡರಾದ ನಾಗೇಂದ್ರ, ಹೊಸಹಳ್ಳಿ ಮಲ್ಲಿಕಾರ್ಜುನ, ಎಸ್‌ಸಿ ಘಟಕ ನಗರದ ಘಟಕದ ಅಧ್ಯಕ್ಷ ಅಪ್ಬಂಡೆ ಗೋಪಾಲ್, ನಾಗೇಂದ್ರ, ಗೋಪಾಲ್, ಪರಮೇಶ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫೋಟೋ 6ಪಿವಿಡಿ3.6ಪಿವಿಜಿ3

ಪಟ್ಟಣದ ಕುಮಾರಸ್ವಾಮಿ ಬಡಾವಣೆ ಹೆಸರು ಬದಲಾವಣೆ ವಿರೋಧಿಸಿ ತಾಲೂಕು ಜೆಡಿಎಸ್‌ ನಿಂದ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಫೋಟೋ 6ಪಿವಿಡಿ4,6ಪಿವಿಜಿ4

ಪಾವಗಡ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ವಿಳಂಬ ವಿರೋಧಿಸಿ ತಾ,ಜೆಡಿಎಸ್‌ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ವರದರಾಜುಗೆ ಮನವಿ ಪತ್ರ ಸಲ್ಲಿಸಿದರು.