ಸಾರಾಂಶ
- ಕೇಂದ್ರ ಸರ್ಕಾರ ಆದೇಶವಿದ್ದರೂ ರಾಜ್ಯ ಸರ್ಕಾರ ವಿಳಂಬ: ಡಾ.ಓಬಳೇಶ ಆರೋಪ । - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯಲ್ಲಿ ಅಧಿಕೃತವಾಗಿ ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಸದಸ್ಯರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಡಾ. ಕೆ.ಬಿ.ಓಬಳೇಶ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಾಡಿದ ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತಿಲ್ಲ. 2018-19ನೇ ಸಾಲಿನಲ್ಲಿ ಒಟ್ಟು 405 ಕುಟುಂಬಗಳನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಎಂಬುದಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಜಂಟಿ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಅಂತಹವರಲ್ಲಿ 2023ರ ಮಲ ಹೊರುವ ವೃತ್ತಿ ನಿಷೇಧ ಹಾಗೂ ಪುನರ್ವಸತಿ ಕಾಯ್ದೆಯಡಿ ಒಮ್ಮೆ ನೀಡುವ ₹40 ಸಾವಿರ ತಾತ್ಕಾಲಿಕ ಪರಿಹಾರ ಮಾತ್ರ ನೀಡಲಾಗಿದೆ. ಆದರೆ, ಸೆಕ್ಷನ್ 13ರಡಿ ಪುನರ್ವಸತಿ ಕಲ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ತಕ್ಷಣವೇ ಅಧಿಕಾರಿಗಳ ಸಭೆ ಕರೆದು, ನಿಯಮಾನುಸಾರ ಸೌಲಭ್ಯ ಕಲ್ಪಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.19.3.2024ರಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪುನರ್ವಸತಿ ಯೋಜನೆ ವಿತರಣೆ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳು ಉದ್ಯೋಗ, ವಸತಿ, ಆರೋಗ್ಯ ಕಾರ್ಡ್‌ಗೆ ನೋಂದಾಯಿಸಿದ್ದರು. ಆದರೆ, 5 ನಿಮಿಷದಲ್ಲೇ ಕೊಡಬಹುಗಾದ ಆರೋಗ್ಯ ಕಾರ್ಡನ್ನೇ ಇನ್ನೂ ನೀಡಿಲ್ಲ ಎಂದು ಕಿಡಿಕಾರಿದರು.
ಪೌರ ಕಾರ್ಮಿಕರಾಗಿ ನೇಮಿಸಿ:ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದನೆಯಾದ 3500 ಮನೆಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಗುರುತಿಸಲಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳಿಗೆ ವಸತಿ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಗುರುತಿಸಲ್ಪಟ್ಟ 405 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳಲ್ಲಿ ಅರ್ಹರನ್ನು ದಾವಣಗೆರೆ ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಶಿಕ್ಷಣ ವೆಚ್ಚ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಎನ್.ಉಚ್ಚೆಂಗಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ಸ್ಕ್ಯಾವೆಂಜರ್ಸ್ ಕುಟುಂಬಗಳಿಗೆ ಎಬಿಎಆರ್‌ಕೆ ಆರೋಗ್ಯ ಕಾರ್ಡ್ ವಿತರಣೆ ಮಾಡಬೇಕು. ಉಚಿತ ಚಿಕಿತ್ಸೆ, ಆರೈಕೆ ವ್ಯವಸ್ಥೆ ಕಲ್ಪಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಮಾಣವಾದ ಶೌಚಾಲಯಗಳ ಗುತ್ತಿಗೆ ನೀಡುವಾಗ ಸ್ಕ್ಯಾವೆಂಜರ್ಸ್ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪುನರ್ವಸತಿ ಯೋಜನೆಗಳನ್ನು ಈವರೆಗೂ ಸಂಬಂಧಿಸಿದ ಇಲಾಖೆಗಳಿಂದ ನೀಡಿಲ್ಲ. ಈ ಹಿನ್ನೆಲೆ ಜಿಲ್ಲಾಧಿಕಾರಿ ಅವರು ಎಲ್ಲ ಮುಖ್ಯವಾದ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಬೇಕು. ವಿಶೇಷವಾಗಿ ವಸತಿ, ಉದ್ಯೋಗ ಮತ್ತು ತರಬೇತಿ, ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಬೇಕು. ಈ ತಕ್ಷಣ ಎಲ್ಲ ಸೌಲಭ್ಯ ನೀಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸಮಿತಿ ರಾಜ್ಯ ಸದಸ್ಯ ಡಾ.ಸಿದ್ಧಾರ್ಥ, ಜಿಲ್ಲಾಧ್ಯಕ್ಷ ಎನ್.ವಾಸುದೇವ, ರಾಜು, ಎನ್.ಮಂಜುನಾಥ, ಭಾಗ್ಯಲಕ್ಷ್ಮೀ, ಮಂಜುಳಾ, ಜ್ಯೋತಿ, ಬಿ.ನಿಂಗಪ್ಪ ಇತರರು ಇದ್ದರು.- - -
(ಕೋಟ್)4 ವರ್ಷಗಳಿಂದಲೂ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷ-ಸದಸ್ಯರ ನೇಮಕವಾಗಿಲ್ಲ. ಕೂಡಲೇ ಸರ್ಕಾರ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಗೊತ್ತಿರುವವರನ್ನೇ ಆಯೋಗಕ್ಕೆ ನೇಮಿಸಬೇಕು. ನಿಗಮ- ಮಂಡಳಿಗಳಂತೆ ಸಾಂವಿಧಾನಿಕವಾಗಿ ರಚನೆಗೊಂಡಿರುವ ಆಯೋಗದ ನೇಮಕಾತಿಯಲ್ಲಿ ವಿಳಂಬ ಮಾಡಬಾರದು.
- ಡಾ.ಸಿದ್ಧಾರ್ಥ, ರಾಜ್ಯ ಸಮಿತಿ ಸದಸ್ಯ,ಸಫಾಯಿ ಕರ್ಮಚಾರಿ ಕಾವಲು ಸಮಿತಿ
- - --6ಕೆಡಿವಿಜಿ1.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಡಾ. ಕೆ.ಬಿ. ಓಬಳೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.