ಕನ್ನಡಪ್ರಭ ವಾರ್ತೆ ಅರಸೀಕೆರೆ

ಗಂಡಸಿ ಹೋಬಳಿಯ ಚಿಂದೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ. ಈ ಫಲಿತಾಂಶವು ಹೋಬಳಿಯ ರಾಜಕೀಯ ವಲಯದಲ್ಲಿ ಜೆಡಿಎಸ್ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಕಾಂಗ್ರೆಸ್ ಬೆಂಬಲಿತರಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಸಂಘದ 11 ಸಾಲಗಾರರ ಕ್ಷೇತ್ರಗಳು ಹಾಗೂ ಒಂದು ಸಾಲಗಾರರಲ್ಲದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಏಕಪಕ್ಷೀಯ ಮೇಲುಗೈ ಸಾಧಿಸಿದರು. ಮತ ಎಣಿಕೆ ಪೂರ್ಣಗೊಂಡ ಬಳಿಕ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಸಾಲಗಾರರ ಕ್ಷೇತ್ರದಿಂದ ಉಮೇಶ್‌, ವಸಂತ್, ವಿಜಯಕುಮಾರ್‌, ಮಹೇಂದ್ರ, ಶಂಭುಲಿಂಗಮೂರ್ತಿ, ಶಿವಣ್ಣ, ಮಾದನಾಯಕ, ಉದಯಕುಮಾರ್‌ ಕೆ, ಶ್ರೀಧರ್‌ ಎಂ, ಮಮತಾ ಲೋಕೇಶ್ ಹಾಗೂ ಸುಮಿತ್ರಾ ಆಯ್ಕೆಯಾಗಿದ್ದು, ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಕಾಶ್ ಜಿ. ಎಚ್. ಜಯಶಾಲಿಯಾಗಿದ್ದಾರೆ.

ವಿಜಯೋತ್ಸವದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಗಂಗಾಧರ್‌, ಸಹಕಾರ ಸಂಘಗಳು ರೈತರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖವಾಗಿದ್ದು, ನೂತನ ನಿರ್ದೇಶಕರು ರೈತಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಂಸ್ಥೆಯ ಪ್ರಗತಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ನೂತನ ನಿರ್ದೇಶಕ ಉಮೇಶ್ ಕೆ.ಬಿ. ಮಾತನಾಡಿ, ಜೆಡಿಎಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಗಂಗಾಧರ್‌ ಮತ್ತು ಕೆಂಕೆರೆ ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಎದುರಿಸಿದ್ದೇವೆ. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಎಲ್ಲಾ 12 ಸ್ಥಾನಗಳಲ್ಲಿ ಗೆಲುವು ನೀಡಿರುವುದು ಸಂತಸದ ಸಂಗತಿ ಎಂದರು.


ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.