ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸಹಕಾರಿಯಾಗಿದೆ ಎಂದರು. ಜನಸಾಮಾನ್ಯರ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶದಿಂದ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದು ನೆರವಾಗಲಿದೆ. ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಕಕ್ಷಿದಾರರ ಮನವೊಲಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಕಕ್ಷಿದಾರರಿಗೆ ಸಲಹೆ ನೀಡಬೇಕು ಎಂದು ತಿಳಿಸಿದರು

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಇಲ್ಲಿಯ ನ್ಯಾಯಾಲಯಗಳಲ್ಲಿ ಜುಲೈ ೧೧ ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ೪ನೇ ಅಧಿಕ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಎಸ್. ಕಲ್ಪನಾ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ಸಹಕಾರಿಯಾಗಿದೆ ಎಂದರು. ಜನಸಾಮಾನ್ಯರ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶದಿಂದ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದು ನೆರವಾಗಲಿದೆ. ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಕಕ್ಷಿದಾರರ ಮನವೊಲಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಕಕ್ಷಿದಾರರಿಗೆ ಸಲಹೆ ನೀಡಬೇಕು ಎಂದು ತಿಳಿಸಿದರು.ಜುಲೈ ೧೧ರಂದು ನಡೆಯುವ ಅದಾಲತ್ಗೆ ಅವರನ್ನು ಕರೆತಂದು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ತಿಳಿಸಬೇಕು. ಲೋಕ್ ಆದಾಲತ್ ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ, ಕೈಗಾರಿಕಾ ಮತ್ತು ಕಾರ್ಮಿಕ ವೇತನ ವಿವಾದಗಳು. ಗ್ರಾಹಕ ವೇದಿಕೆ ಪ್ರಕರಣಗಳು, ರಿಯಲ್ ಎಸ್ಟೇಟ್, ಚೆಕ್ ಅಮಾನ್ಯ, ಮೋಟಾರು ವಾಹನ ಅಪಘಾತ ಪರಿಹಾರ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂಸ್ವಾಧೀನ, ಪಿಂಚಣಿ, ವೇತನ ಭತ್ಯೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಮಾಹಿತಿ ನೀಡಿದರು.ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ವಿ.ಕುಸುಮ ಮಾತನಾಡಿ, ತಾಲೂಕಿನ ೭ ನ್ಯಾಯಾಲಯಗಳಲ್ಲಿ ಸುಮಾರು ೧೭೦೦೦ ಪ್ರಕರಣಗಳು ಬಾಕಿ ಇವೆ. ಅವುಗಳ ಪೈಕಿ ರಾಜಿಯಾಗಬಹುದಾದ ಎಲ್ಲಾ ಪ್ರಕರಣಗಳನ್ನು ಆದಾಲತ್‌ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಕೈಗೆತ್ತಿಕೊಳ್ಳಲಾಗುತ್ತದೆ. ಕಕ್ಷಿದಾರರು ಮತ್ತು ವಕೀಲರು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಲೋಕ ಅದಾಲತ್‌ಗೆ ಚಾಲನೆ ನೀಡಲಾಗಿದೆ ಎಂದರು. ಕರ್ನಾಟಕ ಸರ್ಕಾರವು ಬಾಕಿ ಇರುವ ಸಂಚಾರ ದಂಡದ ಮೊತ್ತದ ಮೇಲೆ ಶೇಕಡಾ ೫೦ರಷ್ಟು ವಿನಾಯಿತಿ ಘೋಷಿಸಿದೆ. ಮೇ ೨೦೨೬ರೊಳಗೆ ದಾಖಲಾದ ಪೊಲೀಸ್ ಇ-ಚಲನ್ ಹಾಗೂ ೧೯೯೧ರಿಂದ ೨೦೨೨ರ ಅವಧಿಯ ಸಾರಿಗೆ ಇಲಾಖೆಯ ದಂಡಗಳನ್ನು ಹೊಂದಿರುವ ವಾಹನ ಸವಾರರು, ಜೂನ್ ೨೧ರಿಂದ ಜುಲೈ ೧೦, ೨೦೨೬ರ ಒಳಗಾಗಿ ಅರ್ಧ ಮೊತ್ತವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ವಿವರಗಳನ್ನು ಪರಿಶೀಲಿಸಲು ಮತ್ತು ಹಣ ಪಾವತಿ ಮಾಡಲು ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್, ಬಿಟಿಪಿ-ಅಸ್ಲಂ ಆಯಪ್, ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ ಮತ್ತು ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿ, ಪಾವತಿಸಬಹುದಾಗಿದೆ. ಸಾರ್ವಜನಿಕರು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಾಲಯಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ಪ್ರಸಾರ ಮಾಡುವಾಗ ಪತ್ರಕರ್ತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ ಮಾತನಾಡಿ, ಜನಸಾಮಾನ್ಯರಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಅಗತ್ಯವಿದೆ. ಕಾನೂನಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳುವುದು ಸೂಕ್ತ. ಎದುರಾಳಿಗಳ ಜೊತೆ ಹೋರಾಡಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು ಎಂದರು.ಪ್ರಧಾನ ಕಾರ್ಯದರ್ಶಿ ಆರ್. ಶ್ರೀನಿವಾಸ್ ಉಳ್ಳಾವಳ್ಳಿ, ಉಪಾಧ್ಯಕ್ಷರಾದ ನಂದನ್‌ಪುಟ್ಟಣ, ಕೆ.ಪಿ.ಪುಟ್ಟರಾಜು ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.