ಯೂರಿಯಾ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ ಆರೋಪ: ಜೆಡಿಎಸ್ ಪ್ರತಿಭಟನೆ

| Published : Aug 05 2025, 01:30 AM IST

ಯೂರಿಯಾ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ ಆರೋಪ: ಜೆಡಿಎಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪೂರೈಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ । ರೈತರ ಹಿತ ಕಾಯುವ ಯಾವುದೇ ಯೋಜನೆ ಜಾರಿಗೊಳಿಸಿಲ್ಲಕನ್ನಡಪ್ರಭ ವಾರ್ತೆ ಬಳ್ಳಾರಿ

ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪೂರೈಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತ ಕಾಯುವ ಯಾವುದೇ ಕಾಳಜಿಯಿಲ್ಲ. ಮುಂಗಾರು ಹಂಗಾಮು ಶುರುಗೊಳ್ಳುವುದು ಗೊತ್ತಿದ್ದರೂ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿಕೊಂಡಿಲ್ಲ. ಯೂರಿಯಾ ಸಮಸ್ಯೆಯನ್ನೇ ನೆಪವಾಗಿಸಿಕೊಂಡ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದರೂ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ರೈತರು ದುಬಾರಿ ಬೆಲೆಗೆ ಯೂರಿಯಾ ಖರೀದಿಸುವಂತಾಯಿತಲ್ಲದೆ, ಹೆಚ್ಚಿನ ಹಣ ನೀಡಲು ಆರ್ಥಿಕ ಶಕ್ತಿಯಿಲ್ಲದ ರೈತರು ರಸಗೊಬ್ಬರದಿಂದ ವಂಚಿತರಾಗುವಂತಾಯಿತು. ಈ ಎಲ್ಲ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ನೆರವು ನೀಡದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಬೆಂಬಲ ಬೆಲೆ ನಿಗದಿಗೆ ಕಾಳಜಿ ತೋರಿಸಲಿಲ್ಲ. ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ, ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರತಿವರ್ಷ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ರಾಜ್ಯದ ರೈತರ ಸಮಸ್ಯೆಗಳ ಕುರಿತು ವಿಶೇಷ ಸಭೆ ಕರೆದು ಚರ್ಚಿಸಬೇಕು. ಅನ್ನದಾತರ ಅಳಲು ಕೇಳುವ ಕಾಳಜಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ನ ರೈತ ಘಟಕದ ಜಿಲ್ಲಾಧ್ಯಕ್ಷ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿದರು.

ಇಲ್ಲಿನ ಕೃಷ್ಣಮಾಚಾರ್ ರಸ್ತೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಅಶೋಕ್, ಶಿವನಾರಾಯಣ, ನಾಗರಾಜ್, ಬಸಪ್ಪ, ಪುಷ್ಪಾ, ರಾಮಾಂಜನಿ, ಕಿರಣ್ ಕುಮಾರ್, ಭವಾನಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.