ಸಾರಾಂಶ
ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಶಾಸಕ ಹೇಳಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಯೇಸು ಮಾನವ ಕುಲ ಉದ್ಧರಿಸಲು ಜನಿಸಿದ ಅವತಾರ ಪುರುಷ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ನಗರಸಭೆಯ ಹಿಂಭಾಗದಲ್ಲಿರುವ ಕ್ರಿಶ್ಚಿಯನ್ ಚರ್ಚ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕುರಿಕೊಟ್ಟಿಗೆಯಲ್ಲಿ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯವಾಗಿ ಬೆಳೆದು ಮಾನವ ಕೋಟಿಗೆ ಬೆಳಕು ತೋರುವ ಮಾರ್ಗದಲ್ಲಿ ತನ್ನನ್ನೇ ಉರಿಸಿಕೊಂಡು ಬಲಿಯಾಗಿ ದೇವಮಾನವನಾದವನು ಯೇಸುಕ್ರಿಸ್ತ. ಯೇಸುವಿನ ತತ್ವಾದರ್ಶಗಳ ಬೋಧನೆಯ ಬೈಬಲ್ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲದೇ ಒಳಿತನ್ನು ಪ್ರೀತಿಸುವವರಿಗೆಲ್ಲರಿಗೂ ಸದ್ಭಾವನ ಗ್ರಂಥ. ಮಾನವ ಕುಲಕ್ಕೆ ಮನುಷ್ಯತ್ವದ ಪಾಠ ಹೇಳಿ ಕತ್ತಲಿನಿಂದ ಬೆಳಕಿನತ್ತ ಅವರನ್ನು ಕರೆದೊಯ್ದು ಜಗತ್ತನ್ನೆೇ ಜ್ಯೋತಿ ಸ್ವರೂಪ ಮಾಡಿ ಆ ಬೆಳಕಿನಲ್ಲಿ ಇಡೀ ಮಾನವಕುಲವನ್ನು ಉದ್ದರಿಸಲು ಅವತರಿಸಿದ ಮಹಾಪುರುಷರು ಜಗತ್ತಿನಲ್ಲಿ ಅನೇಕರು ಇದ್ದಾರೆ. ಅವರಲ್ಲಿ ಯೇಸು ಕೂಡ ಪ್ರಮುಖ. ಯೇಸುವಿನ ಭೋದನೆ ನಮ್ಮೆಲ್ಲರಿಗೂ ಆದರ್ಶ ಎಂದರು.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿರುವ ಚರ್ಚ್‌ಗಳಿಗೆ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇವೆ. ಚರ್ಚ್‌ಗಳಿಗೆ ಅವಶ್ಯ ಇರುವ ಮೂಲಭೂತ ಸೌಕರ್ಯಗಳನ್ನು ನಾವು ಒದಗಿಸಲು ತಯಾರಿದ್ದೇವೆ ಎಂದರು.
ಪಾಧರ್ ಜೆ. ರವಿಕುಮಾರ್, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ವಿನಯ್ ಅಗಡಿ, ಶ್ಯಾಮ್ ಸುಂದರ್ ಸೇರಿದಂತೆ ಇತರರಿದ್ದರು.ಯೇಸು ಸಲಹೆ ಪಾಲಿಸಿದರೆ ಜಗತ್ತಿನಲ್ಲಿ ನೆಮ್ಮದಿ- ಸಂಸದ ಹಿಟ್ನಾಳ:ಯೇಸುಕ್ರಿಸ್ತರ ಸಲಹೆಯನ್ನು ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕ್ರಿಸ್ ಮಸ್ ಪ್ರಯುಕ್ತ ಮುನಿರಾಬಾದಿನ ಚರ್ಚ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ದೇಶಗಳ ನಡುವೆ ವ್ಯೆಷಮ್ಯ ಹೆಚ್ಚಾಗಿ ಯುದ್ಧಗಳು ಸಂಭವಿಸಿವೆ. ರಷ್ಯ-ಉಕ್ರೇನ್ ಹಾಗೂ ಇಸ್ರೇಲ್- ಪಾಲೆಸ್ತೇನ್ ನಡುವೆ ಯುದ್ಧ ಭೀಕರವಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಯೇಸುಕ್ರಿಸ್ತರ ನೀಡಿದ ಶಾಂತಿ ಮಂತ್ರಗಳು ಪ್ರಯೋಜನಕಾರಿಯಾಗಿವೆ ಎಂದರು.ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಚಂದ್ರನ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಆಯೂಬ್ ಖಾನ್, ಉಪಾಧ್ಯಕ್ಷೆ ಸೌಭಾಗ್ಯ ಹಾಗೂ ಇತರರಿದ್ದರು.