ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಣತೆ ಉರಿಸಿ, ಪುಪ್ಪಗಳನ್ನು ಅರ್ಪಿಸಿ, ದೇಶಭಕ್ತಿಯ ಹಾಡುಗಳೊಂದಿಗೆ ಯೋಧರು ಹಾಗೂ ಭಾರತ ಮಾತೆಗೆ ಜೈಘೋಷಗಳ ಮೂಲಕ ವಿನೂತನ ರೀತಿಯಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತಲಿನ 75 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಅಮರ್ ಜವಾನ್ ಸ್ಮಾರಕದ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿ, ಹಣತೆ ಬೆಳಗಿ ಯೋಧರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದರು.
ಯೋಧರೇ ನಾವೆಂದೂ ಮರೆಯೋದಿಲ್ಲ ನಿಮ್ಮನ್ನು ಎಂಬ ಸಂದೇಶ ಸಾರುವ ಕಾರ್ಯಕ್ರಮವನ್ನು ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಪೆಮ್ಮಂಡ ಶೋಭಾ ಕಾವೇರಪ್ಪ ದೀಪಬೆಳಗಿಸಿ ಉದ್ಘಾಟಿಸಿದರು.ರೋಟರಿ ಜಿಲ್ಲೆಯ ನಿಕಟಪೂರ್ವ ಗವರ್ನರ್, ಮಾಜಿ ನೌಕದಳದ ಅಧಿಕಾರಿ ವಿಕ್ರಂದತ್ತ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಮಾಜಿ ಸೈನಿಕರ ಸಂಘ ಅಧ್ಯಕ್ಷ ಪಾನಿಕುಟ್ಟೀರ ಕುಟ್ಟಪ್ಪ ವೇದಿಕೆಯಲ್ಲಿದ್ದರು.
ಈ ಸಂದರ್ಭ ಮಾತನಾಡಿದ ವಿಕ್ರಂದತ್ತ, ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕ್ಷಿಷ್ಟಕರ ಸನ್ನಿವೇಶದಲ್ಲಿ ಹೋರಾಟ ಮಾಡಿದ ಯುದ್ಧವಾಗಿ ಕಾರ್ಗಿಲ್ ಸಮರ ದಾಖಲಾಗಿದೆ. ಆ ಯುದ್ಧದಲ್ಲಿ ಭಾರತದ ಭೂಮಿಯ ಸಂರಕ್ಷಣೆಗಾಗಿ 527 ವೀರ ಯೋಧರು ಹುತಾತ್ಮರಾದರು. ಆ ಯೋಧರ ಬಲಿದಾನವನ್ನು ಈ ಕಾರ್ಯಕ್ರಮದ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸೈನಿಕರ ನಾಡು ಎಂಬ ಹಿರಿಮೆಯ ಕೊಡಗು ಜಿಲ್ಲೆಯಲ್ಲಿನ ವಿವಿಧ ಸಂಘಸಂಸ್ಥೆಗಳು ಈ ರೀತಿಯಲ್ಲಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಯೋಧರಿಗೆ ಅಥ೯ಪೂಣ೯ ರೀತಿಯಲ್ಲಿ ತನ್ನ ಗೌರವ ಸಲ್ಲಿಸಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ ವರ್ಷದಿಂದ ರೋಟರಿ ಮಿಸ್ಟಿ ಹಿಲ್ಸ್ ದೀಪನಮನ ಕಾರ್ಯಕ್ರಮದ ಮೂಲಕ ಯೋಧರಿಗೆ ಗೌರವ ಸಲ್ಲಿಸುವಲ್ಲಿ ನಿರತವಾಗಿದ್ದು, ಪ್ರತೀ ವರ್ಷವೂ ಕಾರ್ಯಕ್ರಮವನ್ನು ಯೋಧರಿಗಾಗಿ ಮೀಸಲಿಡುವುದಾಗಿ ಹೇಳಿದರು.ವೇದಿಕೆಯಲ್ಲಿದ್ದ ಅಮರ್ ಜವಾನ್ ಸ್ಮಾರಕದ ಪ್ರತಿಕೃತಿಗೆ 75 ಸಂಘಸಂಸ್ಥೆಗಳ ಪ್ರಮುಖರು ಸರದಿ ಸಾಲಿನಲ್ಲಿ ಬಂದು ಪುಷ್ಪಾರ್ಚನೆ ಮಾಡಿ ಗೌರವ ಸೆಲ್ಯೂಟ್ ಮಾಡುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ನೂರಾರು ಮಂದಿ ಹಣತೆಗಳನ್ನು ಬೆಳಗಿ ಅಮರ್ ಜವಾನ್ ಸ್ಮಾರಕದ ಮುಂದೆ ಇಟ್ಟು ಕಾರ್ಗಿಲ್ ಹುತಾತ್ಮರಿಗೆ ಬೆಳಕಿನಾರತಿ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರೀರಾಮಾಂಜನೇಯ ಭಜನಾ ಮಂಡಳಿಯ ಕೆ.ಕೆ.ಮಹೇಶ್ ಕುಮಾರ್, ಗಾಯಕ ರವಿ ಭೂತನಕಾಡು, ಯೋಧರು ಮತ್ತು ಭಾರತಕ್ಕೆ ಜೈಘೋಷಗಳನ್ನು ಮೊಳಗಿಸಿ, ದೇಶಭಕ್ತಿಗೀತೆ ಹಾಡಿದರು. ಮೈಸೂರಿನ ಪಾವನ ಇವೆಂಟ್ಸ್ ನ ಗಾಯಕ, ಗಾಯಕಿಯರಿಂದ ವಂದೇಮಾತರಂ, ಸಂದೇಶ್ ಆತೇಹೇ, ಮಿಲೆ ಸುರೇ ಮೇರ ತುಮಾರ... ಮೊದಲಾದ ಗೀತೆಗಳನ್ನು ಹಾಡಿದರು. ಪತ್ರಕರ್ತರಾದ ಜಿ.ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್ ರಾಷ್ಟ್ರದೇವಗೆ.. ಪ್ರಾಣ ದೀವಿಗೆ.. ಸೇವೆಯಾಗಲಿ ನಾಡಿಗೆ ಎಂಬ ಹಾಡಿನ ಮೂಲಕ ಗಮನ ಸೆಳೆದರೆ, ಟಿ..ಕೆ.ಸುಧೀರ್ ಯಂಹಾ ಡಾಲ್ ಡಾಲ್ ಪರ್ ಎಂಬ ಹಾಡಿನ ಮೂಲಕ ಮೆಚ್ಚುಗೆ ಗಳಿಸಿದರು.ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ವಿನೋದ್ ಮೂಡಗದ್ದೆ ಮತ್ತು ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಹಾಜರಿದ್ದರು. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಗೌಡ ಸಮಾಜ, ಶಕ್ತಿ ಪ್ರತಿಷ್ಠಾನ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ, ಕೊಡಗು ಪತ್ರಿಕಾಭವನ ಟ್ರಸ್ಟ್, ಮಡಿಕೇರಿ ರೋಟರಿ, ಮಡಿಕೇರಿ ಇನ್ನರ್ ವೀಲ್, ರೋಟರಿ ಮಡಿಕೇರಿ ವುಡ್ಸ್, ಕೇಶವಪ್ರಸಾದ್ ಮುಳಿಯ, ಕೆಡಿಸಿಸಿ ಬ್ಯಾಂಕು, ಮಡಿಕೇರಿಯ ಭಗವಾನ್ ಗ್ಲಾಸ್ ಆ್ಯಂಡ್ ಫ್ಲೈವುಡ್, ಅತ್ತೂರಿನ ಜ್ಞಾನಗಂಗ ರೆಸಿಡೆನ್ಶಿಯಲ್ ಸ್ಕೂಲ್, ಮಡಿಕೇರಿಯ ಅರುಣ್ ಸ್ಟೋರ್ಸ್, ಶಾಂತಿ ಸಾಗರ್ ರೆಸ್ಟೋರೆಂಟ್, ಸ್ವಾಗತ್ ಡೆಕೋರೇಟರ್ಸ್ ಸಂಸ್ಥೆಗಳು ಸಹಯೋಗ ನೀಡಿದ್ದವು.
ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ ಕೆಡೆಟ್‌ಗಳು, ಮಾಜಿ ಯೋಧರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.........................
ಪ್ರತೀಯೋರ್ವರಲ್ಲೂ ದೇಶಭಕ್ತಿ ಮೂಡಿದಾಗ ಭಾರತ ಸಮೃದ್ಧ: ಪೊನ್ನಣ್ಣಕಾರ್ಯಕ್ರಮದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ವೀರ ಯೋಧರಿಗೆ ಗೌರವಾರ್ಪಣೆ ಮಾಡಿದರು.
ದೇಶ ರಕ್ಷಣೆಯಲ್ಲಿ ವೀರ ಯೋಧರ ಕೊಡುಗೆಯನ್ನು ಸ್ಮರಿಸಿದ ಪೊನ್ನಣ್ಣ, ವೀರತ್ವಕ್ಕೆ ಕೊಡಗು ಹೆಸರುವಾಸಿಯಾಗಿದ್ದು, ಕೊಡಗಿನ ಸಾವಿರಾರು ಜನ ಸೈನಿಕರ ಕೊಡುಗೆ ಈ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದೇಶದ ಪ್ರತಿಯೊಬ್ಬರು ದೇಶಭಕ್ತಿಯನ್ನು ಬೆಳೆಸಿಕೊಂಡಲ್ಲಿ, ನಮ್ಮ ನಾಡು, ನಮ್ಮ ದೇಶ ಸಮೃದ್ಧವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕೊಡಗಿನ ರಸ್ತೆಗಳಿಗೆ ಗಣ್ಯಾತಿಗಣ್ಯರ ಹೆಸರನ್ನು ನಾಮಕರಣ ಮಾಡುವ ಸಂದರ್ಭದಲ್ಲಿ ಕೊಡಗಿನ ಹುತಾತ್ಮ ಯೋಧರ ಹೆಸರನ್ನೂ ರಸ್ತೆಗಳು, ಬೀದಿಗಳಿಗೆ ನಾಮಕರಣ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಸೂಚಿಸುವಂತೆ ಶಾಸಕರಿಗೆ ಕೋರಿದರು. ಈ ಬಗ್ಗೆ ಗಮನ ಹರಿಸುವುದಾಗಿ ಪೊನ್ನಣ್ಣ ಭರವಸೆ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.