ಪೈಪ್‌ಲೈನ್‌ ಒಡೆದು ಜಮೀನಿಗೆ ನುಗ್ಗಿದ ನೀರು

| Published : Jul 29 2025, 01:38 AM IST

ಸಾರಾಂಶ

ಕೆಂಪವಾಡ ಗ್ರಾಮದ ಹತ್ತಿರ ಸೋಮವಾರ ಮೇನ್ ಪೈಪಲೈನ್ ಒಡೆದು ಭೂಮಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಎರಡು ತಿಂಗಳ ಹಿಂದೆಯಷ್ಟೇ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪೈಪಲೈನ್ ಒಡೆದು 25 ಎಕರೆಗೂ ಅಧಿಕ ಜಮೀನಿನಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಕೆಂಪವಾಡ ಗ್ರಾಮದ ಹತ್ತಿರ ಸೋಮವಾರ ಮೇನ್ ಪೈಪಲೈನ್ ಒಡೆದು ಭೂಮಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪೈಪ್‌ಲೈನ್‌ ರಿಪೇರಿಗೊಳಿಸಿ, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಬೆಳೆಹಾನಿಯಾದ ವಿಠ್ಠಲ ಬಂಡಗರ, ಮಾಯಪ್ಪ ಬಂಡಗರ, ಅಮಸಿದ್ದ ಬಂಡಗರ, ನೀಲಕಂಠ ಬಂಡಗರ, ನಿಂಗಪ್ಪ ಬಂಡಗರ, ಬಾಳು ಬಂಡಗರ, ಮಹದೇವ ಬಂಡಗರ, ಕಲ್ಲಪ್ಪ ಬಂಡಗರ, ಅಮರಸಿದ್ದ ಬಂಡಗರ, ಲಕ್ಷ್ಮಣ ಲಂಗೋಟಿ, ಮಯೂರೇಶ ಬಂಡಗರ ಸೇರಿ ಅನೇಕ ರೈತರ ಭೂಮಿಯಲ್ಲಿ ನೀರು ನುಗ್ಗಿದೆ.

ಈ ಬಗ್ಗೆ ಹಿಪ್ಪರಗಿ ನೀರಾವರಿ ಯೋಜನೆ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಪ್ರತಿಕ್ರಿಯಿಸಿದ್ದು, ಕಳೆದ ಒಂದು ತಿಂಗಳಿಂದ ನೀರು ಬಿಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಆದರೆ ಇವತ್ತು ಇದ್ದಕ್ಕಿದ್ದಂತೆ ನೀರು ಹೊರಬರುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಅದನ್ನು ಶೀಘ್ರವಾಗಿ ರಿಪೇರಿಗೊಳಿಸಿ ಸಮಸ್ಯೆ ಪರಿಹರಿಸಲಾಗುವುದೆಂದು ತಿಳಿಸಿದ್ದಾರೆ.