ಸಾರಾಂಶ
- ಕುವೆಂಪು ಕನ್ನಡ ಭವನದಲ್ಲಿ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರಸ್ತುತ ತಂತ್ರಜ್ಞಾನ ಎಂಬ ಸವಾಲು ಪತ್ರಕರ್ತರ ಮುಂದಿದ್ದು, ಹಾರ್ಡ್‌ವೇರ್‌ನಂತಿದ್ದ ಪತ್ರಕರ್ತರು ಈಗ ಸಾಫ್ಟ್‌ವೇರ್ ಆಗುವತ್ತಾ ಹೆಜ್ಜೆ ಹಾಕಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಗ್ರಾಮೀಣ ಮತ್ತು ಜಿಲ್ಲಾ ಮಟ್ಟದ ಪತ್ರಕರ್ತರ ಸ್ಥಿತಿ ಹೀನಾಯವಾಗಿದೆ. ಹೀಗಾಗಿ ನಿವೃತ್ತಿ ಹೊಂದಿದ ಪತ್ರಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಂಚಣಿ ಕೊಡುತ್ತಿದ್ದಾರೆ. ಹಿಂದೆ ₹3 ಸಾವಿರ ಇತ್ತು, ಈಗ ₹12 ಸಾವಿರ ಕೊಡಲಾಗುತ್ತಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ₹15 ಸಾವಿರ ಪಿಂಚಣಿ ಕೊಡಲು ನಿರ್ಧರಿಸಿದ್ದು, ಶೀಘ್ರದಲ್ಲಿ ನಿವೃತ್ತಿ ಹೊಂದಿದ ಪತ್ರಕರ್ತರಿಗೆ ₹15 ಸಾವಿರ ಕೊಡಲಾಗುತ್ತದೆ. ಶೀಘ್ರದಲ್ಲೇ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲಾಗುತ್ತದೆ ಎಂದು ವಿವರಿಸಿದರು.
ಶಿವಮೊಗ್ಗದ ರಾಜಯೋಗಿನಿ ಬ್ರಹ್ಮಕುಮಾರಿ ಅನುಸೂಯಾಜಿ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವವರು ಮಾಧ್ಯಮದವರು. ನಿಮ್ಮ ಮೊನಚಾದ ಬರವಣಿಗೆಯಿಂದ ಪ್ರತಿಯೊಬ್ಬರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು.ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ.ರವಿ ಮಾತನಾಡಿ, ಒಂದು ಕಾಲದಲ್ಲಿ ಕರ್ನಾಟಕದ ಕೇಂದ್ರ ಬಿಂದು ಆಗಿದ್ದ ದಾವಣಗೆರೆ, ಪತ್ರಿಕೋದ್ಯಮದ ಬೇರು ಆಗಿದೆ. ಇಲ್ಲಿನ ಕನ್ನಡ ಚಳವಳಿ, ಸಿನಿಮಾ ರಂಗದ ಚಳವಳಿ,ಕನ್ನಡಪರ ಚಳವಳಿಗಳು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದವು. ವಾಣಿಜ್ಯೀಕರಣ, ಖಾಸಗೀಕರಣ ಮತ್ತು ತಂತ್ರಜ್ಞಾನದ ಭರಾಟೆಯಲ್ಲಿ ಕನ್ನಡ ಪತ್ರಿಕೋದ್ಯಮ ನಲುಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಿ.ಎನ್ ಮಲ್ಲೇಶ್, ಡಾ.ಎಚ್.ಬಿ ಮಂಜುನಾಥ್, ವರದಿಗಾರರ ಕೂಟದ ನೂತನ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮತ್ತು ಚನ್ನಗಿರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಲಿಂಗರಾಜು ಅವರಿಗೆ ಅಭಿನಂದಿಸಲಾಯಿತು.ಮಾಧ್ಯಮ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಹಿರಿಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಪಿ. ಕಾಡಜ್ಜಿ (ಸಂಯುಕ್ತ ಕರ್ನಾಟಕ), ವಿದ್ಯುನ್ಮಾನ ಮಾಧ್ಯಮದ ಬಸವರಾಜ್ ದೊಡ್ಮನಿ (ಟಿವಿ 9), ಛಾಯಾಗ್ರಹಣ ವಿಭಾಗದಲ್ಲಿ ವಿಜಯಕುಮಾರ್ ಜಾಧವ್, ಡಿಟಿಪಿ ವಿಭಾಗದಲ್ಲಿ ಕೆ.ಜೆ ದಾನೇಶ್, ಕಚೇರಿ ಸಿಬ್ಬಂದಿ ವಿಭಾಗದಲ್ಲಿ ಜಾಹೀರಾತು ವಿಭಾಗದಲ್ಲಿ ಎಚ್.ರುದ್ರೇಶ್, ಮುದ್ರಣ ವಿಭಾಗದಲ್ಲಿ ಎಸ್.ಎನ್.ಮಹೇಶ್ ಕಾಶಿಪುರ ಮತ್ತು ಪತ್ರಿಕಾ ವಿತರಣಾ ವಿಭಾಗದಲ್ಲಿ ಟಿ.ಕೆ ದಿನೇಶ್ ಬಾಬು ಅವರಿಗೆ ಹಾಗೂ ತಾಲೂಕು ಘಟಕಗಳಿಂದ ಆಯ್ಕೆಯಾದ ಪತ್ರಕರ್ತರಾದ ಇನಾಯತ್ ವುಲ್ಲಾ, ಎಚ್.ಸಿ. ಮೃತ್ಯುಂಜಯ ಪಾಟೀಲ್, ಅಣಬೂರು ಮಠದ ಕೊಟ್ರೇಶ್, ಟಿ.ಎನ್. ಜಗದೀಶ್, ಎಂ.ಎಸ್.ಶಾಸ್ತ್ರಿ ಹೊಳೆಮಠ ಇವರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಪ್ರಾಸ್ತಾವಿಕ ನುಡಿದರು, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾನಿಪ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಹಾಗೂ ಕಾನಿಪ ಖಜಾಂಚಿ ಎನ್.ವಿ. ಬದ್ರಿನಾಥ್, ಕಾನಿಪ ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಭಾರತೀಯ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ.ಒಡೆಯರ್ ಉಪಸ್ಥಿತರಿದ್ದರು. ಗಗನ್ ಪ್ರಾರ್ಥಿಸಿದರೆ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್ ಸ್ವಾಗತಿಸಿದರು, ಮಲ್ಲಿಕಾರ್ಜುನ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.- - - ಕೋಟ್ ಈಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಪ್ರತಿಯೊಬ್ಬರ ಸಂಘಟಿತ ಪ್ರಯತ್ನದಿಂದ ಅಭೂತಪೂರ್ವ ಯಶಸ್ವಿಯಾಗಲು ಕಾರಣವಾಗಿದೆ. ಕೆಲವು ಪತ್ರಕರ್ತರಿಗೆ ನಿವೇಶನ, ಪತ್ರಿಕಾ ಭವನ ನಿರ್ಮಾಣದ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಈಡೇರಿಸಲು ಪ್ರಯತ್ನಿಸುವೆ
- ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ- - - -13ಕೆಡಿವಿಜಿ41ಃ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸಿದರು. -13ಕೆಡಿವಿಜಿ42, 43ಃ: ದಾವಣಗೆರೆಯಲ್ಲಿ ನಡೆದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.