ಗದಗ: ಸಹಕಾರಿ ರಂಗದ ಭೀಷ್ಮ, ನೇರ ಮತ್ತು ನಿಷ್ಠುರ ನುಡಿಯ, ಹಿರಿಯ ರಾಜಕಾರಣಿ ದಿ. ಕೆ.ಎಚ್. ಪಾಟೀಲ ಅವರು ಬದುಕಿದ್ದರೆ ನಾನು ರಾಜಕೀಯದಲ್ಲಿ ಇನ್ನೂ ಉತ್ತುಂಗದಲ್ಲಿ ಇರುತ್ತಿದ್ದೆ ಎಂದು ಪದ್ಮಶ್ರೀ ಪುರಷ್ಕತ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.
ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ದಿ. ಕೆ.ಎಚ್. ಪಾಟೀಲ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕೆ.ಎಚ್. ಪಾಟೀಲ್ ಅವರು ರಾಜಕೀಯದಲ್ಲಿ ಮಾತ್ರವಲ್ಲದೇ ಸಮಾಜ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೆ.ಎಚ್. ಪಾಟೀಲ್ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದಲೇ ತಾವು ರಾಜಕೀಯದಲ್ಲಿ ಮುನ್ನಡೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.ನಾನು ರಾಜಕೀಯದಲ್ಲಿ ಆರಂಭಿಕ ಹಂತದಲ್ಲಿದ್ದಾಗ ದಿ. ಕೆ.ಎಚ್. ಪಾಟೀಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೋತ್ಸಾಹಿಸಿದ ಘಟನೆಗಳನ್ನು ಅವರು ನೆನಪಿಸಿಕೊಂಡರು. ಅವರಂಥ ಹಿರಿಯ ನಾಯಕರು ಯುವಕರಿಗೆ ಅವಕಾಶ ನೀಡಿ ಪ್ರೋತ್ಸಾಹ ನೀಡಿದ ಹಿನ್ನೆಲೆ ರಾಜಕೀಯದಲ್ಲಿ ಹೊಸ ನಾಯಕತ್ವ ಬೆಳೆದಿದೆ ಎಂದರು.
ಸಹಕಾರಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಹಾಗೂ ರೈತರಿಗೆ ಉತ್ತಮ ಕಬ್ಬಿನ ಬೆಲೆ ದೊರಕುವಂತೆ ಮಾಡುವಲ್ಲಿ ಕೆ.ಎಚ್. ಪಾಟೀಲ ಅವರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಕೆ.ಎಚ್. ಪಾಟೀಲ ಅವರು ವಿಶೇಷ ಆಸಕ್ತಿ ತೋರಿದ ನಾಯಕರಲ್ಲಿ ಪ್ರಮುಖರಾಗಿದ್ದಾರೆ ಎಂದರು.ಪ್ರಶಸ್ತಿ ಹಣ ಬುತ್ತಿ ಯೋಜನೆಗೆ ದೇಣಿಗೆಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ನೀಡಲಾದ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಭಾಕರ ಕೋರೆ, ಪ್ರಶಸ್ತಿಯೊಂದಿಗೆ ನೀಡಲಾದ ಮೊತ್ತ ₹5 ಲಕ್ಷವನ್ನು ಗದಗ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸುತ್ತಿರುವ ಬಡವರಿಗೆ ಊಟ ನೀಡುವ ಬುತ್ತಿ ಯೋಜನೆಗೆ ದೇಣಿಗೆಯಾಗಿ ನೀಡಿದರು. ಇದೇ ಮಾದರಿಯ ಕೆಲಸವನ್ನು ಹುಬ್ಬಳ್ಳಿಯಲ್ಲೂ ಪ್ರಾರಂಭಿಸುವಂತೆ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಿ.ಆರ್. ಪಾಟೀಲರಿಗೆ ಮೊತ್ತವನ್ನು ಮರಳಿಸಿದರು.