ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜೆಡಿಎಸ್ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ಮಲ್ಲೇನಹಳ್ಳಿ ಗ್ರಾಮದ ಎಂ.ಸಿ.ಚನ್ನಪ್ಪ ಅವರನ್ನು ಮಾಜಿ ಶಾಸಕರಾದ ಸುರೇಶ್‌ಗೌಡ ಹಾಗೂ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ನೇಮಕಗೊಳಿಸಿದರು.ಪಟ್ಟಣದ ಟಿ.ಬಿ.ಬಡಾವಣೆಯ ಮಾಜಿ ಶಾಸಕ ಸುರೇಶ್‌ಗೌಡರ ಗೃಹಕಚೇರಿಯಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿ ತಾಲೂಕು ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಂತೆ ಪುರಸಭೆ ಸದಸ್ಯರಾಗಿರುವ ಎಂ.ಸಿ.ಚನ್ನಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಘೋಷಿಸಿದರು. ಇದೇ ವೇಳೆ ನಿಕಟಪೂರ್ವ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ ನೂತನ ಅಧ್ಯಕ್ಷ ಎಂ.ಸಿ.ಚನ್ನಪ್ಪ ಅವರಿಗೆ ಪಕ್ಷದ ಬಾವುಟ ಕೊಟ್ಟು ಅಧಿಕಾರ ಹಸ್ತಾಂತರಿಸಿದರು.
ಈ ವೇಳೆ ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ತಾಲೂಕು ಘಟಕದ ನೂತನ ಅಧ್ಯಕ್ಷರನ್ನು ಪಕ್ಷದ ನಾಯಕರ ಆದೇಶದಂತೆ ಹಾಗೂ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯದಂತೆ ಆಯ್ಕೆಮಾಡಲಾಗಿದೆ. ತಾಲೂಕು ಮಟ್ಟದ ಉಳಿದ ಘಟಕಗಳಿಗೆ ಪದಾಧಿಕಾರಿಗಳನ್ನು ನೂತನ ಅಧ್ಯಕ್ಷರು ನೇಮಕ ಮಾಡಲಿದ್ದಾರೆ ಎಂದರು.ಜೆಡಿಎಸ್ ಬಲವರ್ಧನೆಗಾಗಿ ನೂತನ ಅಧ್ಯಕ್ಷರನ್ನು ಹಾಗೂ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಂಬರುವ ಎಲ್ಲಾ ಚುನಾವಣೆಗಳಿಗೆ ತಳಮಟ್ಟದಿಂದ ಪಕ್ಷ ಬಲಪಡಿಸುವ ಕೆಲಸವನ್ನು ನೂತನ ಅಧ್ಯಕ್ಷರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಮುಗಿದ ಅಧ್ಯಾಯ ಎನ್ನುವವರು ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂಬುದನ್ನು ನೋಡಿಕೊಳ್ಳಲಿ. ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಚುನಾವಣೆಗೆ ಹೋದರೆ ಎಷ್ಟು ಸ್ಥಾನಗಳು ಬರುತ್ತವೆ ಎಂದು ಸರ್ಕಾರದ ಹಣದಲ್ಲಿ ಸಮೀಕ್ಷೆ ಮಾಡಿಸಿದ್ದಾರಲ್ಲ. ಆ ವರದಿಯನ್ನು ಬಹಿರಂಗಗೊಳಿಸಲಿ ಆಗ ಅವರಿಗೆ ಗೊತ್ತಾಗಲಿದೆ ಎಂದರು.ನೂತನ ಅಧ್ಯಕ್ಷ ಎಂ.ಸಿ.ಚನ್ನಪ್ಪ ಮಾತನಾಡಿ, ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಜೊತೆಗೆ, ಪಕ್ಷದ ಹಿರಿಯ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ನಿಕಟಪೂರ್ವ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಮುಖಂಡರಾದ ಪುಟ್ಟರಾಜು, ಕೆಂಪೇಗೌಡ, ಅಂಬರೀಶ್ ಸೇರಿದಂತೆ ಹಲವರು ಇದ್ದರು.