ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸುವುದರ ಜೊತೆಗೆ ಬಡಜನರ ಸಮಸ್ಯೆ ಬಗೆಹರಿಸಲು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡುವ ಸಂದರ್ಭದಲ್ಲಿ ಉದಾಸೀನ ಮಾಡದೇ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಿದರು. ಭೂ ಸ್ವಾಧೀನದಲ್ಲಿ ಕೈ ಬಿಟ್ಟು ಹೋಗಿರುವ ಪ್ರಕರಣಗಳನ್ನು ಪಟ್ಟಿ ಮಾಡಿ ಪರಿಶೀಲನೆ ಮಾಡಲು ಪ್ರತ್ಯೇಕ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರು.ಇತ್ತೀಚೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಜಮೀನುಗಳ ಖಾತೆಗೆ ಸಂಬಂಧಿಸಿದಂತೆ ಅಹವಾಲು ಬರುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸುವಂತೆ ತಿಳಿಸಿದರು. ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನ ನಿಲುಗಡೆಗೆ ಸ್ಥಳಾವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ ನಂತರ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಹಿಂಬರಹ ನೀಡಿ:ಜಾತಿ ಪ್ರಮಾಣ ಪತ್ರ ಕುರಿತು ಬಂದಂತಹ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ೨೦೦೭ ರಲ್ಲಿ ಶಿಳ್ಳೆಕ್ಯಾತ ಎಂದು ಜಾತಿಪ್ರಮಾಣ ಪತ್ರ ಇದೆ. ಈಗ ಬುಡಬುಡಿಕೆ ಎಂದು ಬರುತ್ತೀದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನ್ಯಾಯ ಆಗಬಾರದು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ತಾಲೂಕಿನಲ್ಲಿ ತಿಂಗಳ ಮೊದಲ ಶನಿವಾರ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಮಾಡುವುದರ ಜೊತೆಗೆ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವಂತೆ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು. ಸಮಸ್ಯೆ ಪರಿಹಾರ ಮಾಡಲು ಪರಿಶೀಲನೆ ಮಾಡಿ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ನಿರ್ದಿಷ್ಟ ಕಾರಣ ನೀಡಿ, ಸ್ಪಷ್ಟವಾಗಿ ಹಿಂಬರಹ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ದರ ಪಟ್ಟಿ ಅಳವಡಿಸಿ:
ಕ್ಯಾನ್ಸರ್ ಪೀಡಿತರಿಗೆ ರೇಡಿಯೋ ತೆರಪಿಗಾಗಿ ಹಿಮ್ಸ್‌ನಲ್ಲಿ ಸ್ಥಾಪಿಸಿರುವ ಯಂತ್ರೋಪಕರಣ ಬಳಕೆ ಕುರಿತು ಮನವಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ೨೦೨೪ ಮಾರ್ಚ್‌ನಲ್ಲಿ ಸ್ಥಾಪಿಸಲಾಗಿದೆ. ಜುಲೈನಲ್ಲಿ ನಿಂತು ಹೋಗಿದೆ ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ ಇದರ ಬಗ್ಗೆ ಗಮನಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರ ಮಾಹಿತಿಗಾಗಿ ಹಿಮ್ಸ್‌ನಲ್ಲಿ ದರ ಪಟ್ಟಿಯನ್ನು ಫಲಕದಲ್ಲಿ ಅಳವಡಿಸುವಂತೆ ಸೂಚನೆ ನೀಡಿದರಲ್ಲದೆ, ಹಿಮ್ಸ್ ಮುಂಭಾಗದಲ್ಲಿ ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ ಸ್ವಚ್ಛತೆಯಿಲ್ಲ ಗುಣಮಟ್ಟದ ಆಹಾರ ನೀಡುತ್ತಿಲ್ಲ ಜೊತೆಗೆ ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅಡೆತಡೆ ಆಗುತ್ತಿದೆ ಇದರ ಬಗ್ಗೆ ಪರಿಶೀಲನೆ ಮಾಡಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸರ್ಕಾರದ ಮಾರ್ಗಸೂಚಿ ಅನ್ವಯ ಯಾವುದೇ ಇಲಾಖೆ ಗುತ್ತಿಗೆ ಆಧಾರದಲ್ಲಿ, ಹೊರಗುತ್ತಿಗೆಯಲ್ಲಿ ಹುದ್ದೆಗಳ ಭರ್ತಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಶೇ. ೨ರಷ್ಟು ವಿಶೇಷ ಚೇತನರನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಸರ್ಕಾರದ ಮಾರ್ಗಸೂಚಿ ಅನುಸರಿಸಿ ನೇಮಕಾತಿ ಮಾಡಿರುವ ಬಗ್ಗೆ ಪ್ರತಿ ಇಲಾಖೆಯಿಂದ ಮಾಹಿತಿ ಪಡೆದು ವರದಿ ನೀಡುವಂತೆ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆ ಅಧಿಕಾರಿಗೆ ಸೂಚಿಸಿದರು. ಅರಣ್ಯ ಇಲಾಖೆಯಿಂದ ರೈಲ್ವೆ ಬ್ಯಾರಿಕೇಡ್ ಸರಿಯಾಗಿ ಅಳವಡಿಸಿಲ್ಲ ಎಂಬ ದೂರಿನ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಉಪ ವಿಭಾಗಾಧಿಕಾರಿಗೆ ಸೂಚಿಸಿದರು. ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ ಎಲ್ಲಾ ತಹಸೀಲ್ದಾರ್‌ಗಳು ರಸ್ತೆ ಸುರಕ್ಷತಾ ದೃಷ್ಟಿಯಿಂದ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಫುಟ್‌ಪಾತ್ ಕ್ಲಿಯರೆನ್ಸ್ ಡ್ರೈವ್ ಮಾಡಲು ಸೂಚಿಸಿದರು.ಘಟನೆ ಸಂಭವಿಸಿದ ನಂತರ ಕ್ರಮ ವಹಿಸುವುದಲ್ಲ, ಮುನ್ನೆಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಕೂಡಲೇ ಸಭೆ ನಡೆಸಿ ಸಂಚಾರಿ ನಿಯಮಗಳ ಪಾಲನೆ ಮತ್ತು ರಸ್ತೆ ಅಪಘಾತಗಳ ತಡೆಗಟ್ಟುವ ನಿಟ್ಟಿನಲ್ಲಿ ತಹಸೀಲ್ದಾರ್‌ಗಳು ಕ್ರಮಕೈಗೊಳ್ಳಲು ಸೂಚಿಸಿದರು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸ್ಥಳೀಯವಾಗಿ ಪರಿಶೀಲಿಸಿ, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪರಿಶೀಲಿಸಿ ಪರವಾನಗಿ ಕೊಡಿ:ನಿರ್ಲಕ್ಷ್ಯತೆಯಿಂದ ವಾಹನ ಚಲಾಯಿಸಿ ಅಮಾಯಕ ಮತ್ತು ಮುಗ್ಧ ಅಮೂಲ್ಯವಾದ ಜೀವಗಳನ್ನು ಬಲಿಪಡೆಯುವುದನ್ನು ತಪ್ಪಿಸಲು ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ವಾಹನ ಚಾಲನ ಪರವಾನಗಿ ನೀಡುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅರ್ಹರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೊಸಳೆ ಹೊಸಳ್ಳಿಯಲ್ಲಿ ಸಂಭವಿಸಿದ ಹೃದಯವಿದ್ರಾವಕ ದುರ್ಘಟನೆಯನ್ನು ಬಹಳ ಲಘುವಾಗಿ ಪರಿಗಣಿಸದೆ. ಇದನ್ನು ಗಂಭೀರವಾಗಿ ಚಿಂತನೆ ಮಾಡಿ ಗ್ರಾಮೀಣ ಹಾಗೂ ತಾಲ್ಲ್ಲೂಕು ಮಟ್ಟದಲ್ಲಿಯೂ ದುರ್ಘಟನೆಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸುರಕ್ಷತೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರಲ್ಲದೆ, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಎಂದರು. ರಸ್ತೆ ಸುರಕ್ಷತೆ ಬಗೆಗೆ ಜಾಗೃತಿ ಮೂಡಿಸಲು ಸ್ಥಳೀಯ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚಿಸಿದರಲ್ಲದೆ, ಬೀದಿ ನಾಯಿಗಳ ಹಾವಳಿಯಿಂದ ಅಪಘಾತಗಳು ಸಂಭವಿಸುವುದರಿಂದ ನಾಯಿಗಳ ಸಂಖ್ಯೆ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆಗೆ ಕ್ರಮವಹಿಸುವಂತೆ ಸೂಚಿಸಿದರು.ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿ ಜಾಗವನ್ನು ಗುರುತಿಸುವಂತೆ ಸೂಚಿಸಿದರಲ್ಲದೆ, ಶಾಲಾ ವಾಹನ ಚಾಲಕರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ವಾಹನ ಪರವಾನಗಿ ಹೊಂದಿರಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮವಹಿಸಲು ಸೂಚಿಸಿದರು. ವಾಹನಗಳನ್ನು ಶಿಸ್ತುಬದ್ಧವಾಗಿ ನಿಲುಗಡೆ ಮಾಡಲು ತಿಳಿಸಿದರು. ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಿದ್ದಾರೆ ಇದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ, ದುರಸ್ತಿ, ಭೂ ಪರಿಹಾರ, ವಿದ್ಯುತ್ ಸಂಪರ್ಕ, ಖಾತೆ, ಆಶ್ರಯ ಮನೆ, ಹಕ್ಕು ಪತ್ರ, ಪಹಣಿ ತಿದ್ದುಪಡಿ, ಸ್ಮಶಾನ ಹಾಗೂ ಮತ್ತಿತರ ವಿಷಯಗಳ ಕುರಿತು ಒಟ್ಟು ೧೩೪ ಅರ್ಜಿಗಳು ಸ್ವೀಕರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಸಕಲೇಶಪುರ ಉಪ ವಿಭಾಗಾಧಿಕಾರಿ ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.