10, 11ರಂದು ಕಬಡ್ಡಿ ಪಂದ್ಯಾವಳಿ: ಶಾಸಕ ಎಂ.ಆರ್. ಪಾಟೀಲ

| Published : Feb 08 2024, 01:34 AM IST

ಸಾರಾಂಶ

ಕುಂದಗೋಳ ಪಟ್ಟಣದ ಹರಭಟ್ ಕಾಲೇಜು ಮೈದಾನದಲ್ಲಿ ಫೆ. 10 ಹಾಗೂ 11ರಂದು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.

ಕುಂದಗೋಳ: ವಿದೇಶಿ ಆಟಗಳ ಜತೆಗೆ ದೇಶೀಯ ಕ್ರೀಡೆಗಳನ್ನು ಉಳಿಸಿಕೊಂಡು ಹೋಗುವ ಉದ್ದೇಶದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿಯನ್ನು ಫೆ. 10 ಹಾಗೂ 11ರಂದು ಪಟ್ಟಣದ ಹರಭಟ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಫೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿ, ಈ ಕ್ರೀಡಾ ಮಹೋತ್ಸವ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಫೆ. 10ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಅವರೊಂದಿಗೆ ಚಾಲನೆ ನೀಡಲಾಗುವುದು. ಗೆದ್ದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ₹40 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಬಹುಮಾನ ₹10 ಸಾವಿರ, ಚತುರ್ಥ ಬಹುಮಾನ ₹10 ಸಾವಿರ ಹಾಗೂ ಭಾಗವಹಿಸುವ ತಂಡಗಳಲ್ಲಿ ಉತ್ತಮ ರೈಡರ್, ಉತ್ತಮ ಕ್ಯಾಚರ್ ಮತ್ತು ಉತ್ತಮ ಅಲ್ ರೌಂಡರ್ ಆಟಗಾರರಿಗೆ ತಲಾ ₹5 ಸಾವಿರ ಕೊಡಲಾಗುವುದು. ಜತೆಗೆ ಈ ಕ್ರೀಡಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿ ತಂಡಕ್ಕೂ ತಮ್ಮಿಂದ ₹2,500 ಪ್ರೋತ್ಸಾಹ ಬಹುಮಾನ ನೀಡಲಾಗುವುದು ಎಂದರು.

ಈ ಕ್ರೀಡಾ ಮಹೋತ್ಸವದಲ್ಲಿ ಭಾಗವಹಿಸುವ ತಂಡಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕೆಲವು ಸೂಚನೆಗಳ ಮೇರೆಗೆ ತಂಡಗಳಿಗೆ ಅವಕಾಶ ಕಲ್ಪಿಸಲಾಗುವುದು. ಬೇಕಾಗುವ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪಂದ್ಯಾವಳಿಗಳಲ್ಲಿ ಭಾಗವಹಿಸುವ ತಂಡಗಳು ಮೊ: 8050145222 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ಡಿ.ವೈ. ಲಕ್ಕನಗೌಡ್ರು, ಪ್ರಕಾಶ ಕೂಬಿಹಾಳ, ಉಮೇಶ ಹೆಬಸೂರ, ಮಲ್ಲಿಕಾರ್ಜುನಗೌಡ ಪಾಟೀಲ, ಜೆಡಿಎಸ್ ಮುಖಂಡ ಹಜರತ್ ಅಲಿ ಜೋಡಮನಿ ಸೇರಿದಂತೆ ಹಲವರಿದ್ದರು.