ಕಡಹಿನಬೈಲು ಏತ ನೀರಾವರಿ: ಕೆರೆಗಳ ಕಾಲುವೆ ದುರಸ್ಥಿಗೆ 15 ಕೋಟಿ ಮಂಜೂರು

| Published : Sep 19 2025, 01:00 AM IST

ಕಡಹಿನಬೈಲು ಏತ ನೀರಾವರಿ: ಕೆರೆಗಳ ಕಾಲುವೆ ದುರಸ್ಥಿಗೆ 15 ಕೋಟಿ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕಡಹಿನಬೈಲು ಏತ ನೀರಾವರಿ ಯೋಜನೆಯ ಕೆರೆಗಳ ಕಾಲುವೆ ದುರಸ್ಥಿಗಾಗಿ ₹15 ಕೋಟಿ ಮಂಜೂರಾಗಿದೆ ಎಂದು ಕಡಹಿನಬೈಲು ಬಕ್ರೀಹಳ್ಳ ಏತ ನೀರಾವರಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ತಿಳಿಸಿದರು.

- ಬಕ್ರಿಹಳ್ಳ ಏತ ನೀರಾವರಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಎಸ್.ಡಿ.ರಾಜೇಂದ್ರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಡಹಿನಬೈಲು ಏತ ನೀರಾವರಿ ಯೋಜನೆಯ ಕೆರೆಗಳ ಕಾಲುವೆ ದುರಸ್ಥಿಗಾಗಿ ₹15 ಕೋಟಿ ಮಂಜೂರಾಗಿದೆ ಎಂದು ಕಡಹಿನಬೈಲು ಬಕ್ರೀಹಳ್ಳ ಏತ ನೀರಾವರಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ತಿಳಿಸಿದರು.

ತಾಲೂಕಿನ ಕಡಹಿನಬೈಲು ಗ್ರಾಮದಲ್ಲಿ ನಡೆದ ಕಡಹಿನಬೈಲು ಬಕ್ರೀಹಳ್ಳ ಏತ ನೀರಾವರಿ ಸಹಕಾರಿ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏತ ನೀರಾವರಿ ಯೋಜನೆಯಂತೆ ಯಾವುದೇ ರೈತರ ಹೊಲ, ಗದ್ದೆಗಳಿಗೆ, ತೋಟ ಗಳಿಗೆ ನೇರವಾಗಿ ನೀರು ಹಾಯಿಸುವಂತಿಲ್ಲ. ಏತ ನೀರಾವರಿ ಮೂಲಕ ನೀರನ್ನು ಎತ್ತಿ, ಕಾಲುವೆಗಳ ಮೂಲಕ ರೈತರ ಕೆರೆಗಳಿಗೆ ನೀರು ತುಂಬಿಸುವುದೇ ಇದರ ಮುಖ್ಯ ಉದ್ದೇಶ. ಸರ್ಕಾರ ಏತ ನೀರಾವರಿ ವ್ಯಾಪ್ತಿಯ 58 ಕೆರೆಗಳಿಗೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು, 14 ಕೆರೆಗಳಿಗೆ ಪೈಪ್ ಲೈನ್ ಮಾಡಬೇಕಾಗಿದೆ. ಇನ್ನುಳಿದ 44 ಕೆರೆಗಳಿಗೆ ಕಾಲುವೆ ದುರಸ್ಥಿ, ತೂಬ್ ದುರಸ್ಥಿ ರಿವಿಟ್ ಮೆಂಟ್, ಗಿಡ ಗಂಟಿಗಳನ್ನು ತೆಗೆಯಲು ಹಾಗೂ ಹೂಳೆತ್ತಲು ಈಗಾಗಲೇ 15 ಕೋಟಿ ಯನ್ನು ಸರ್ಕಾರ ಮಂಜೂರು ಮಾಡಿದೆ. ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲಿಯವರೆಗೆ ಕಾಡಾನೆಗಳ ಹಾವಳಿಯಿಂದ ಹಾನಿಗೊಂಡಿರುವ ಹಾಲಿ ಪೈಪ್‌ಲೈನ್‌ಗಳನ್ನು ಸರಿಪಡಿಸಿ ಇನ್ನೂ ಕೆಲವು ಕಡೆ ಒಡೆದು ಹೋಗಿರುವ ಪೈಪ್‌ಲೈನ್‌ಗಳನ್ನು ದುರಸ್ಥಿ ಮಾಡಿಸಿ, ರೈತರ ಕೆರೆಗಳಿಗೆ ನೀರು ಹಾಯಿಸಲು ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆ ಸಂಪೂರ್ಣ ಯಶಸ್ವಿಗೆ ರೈತರು ಸಂಘದೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಸಂಘದ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್ ಮಾತನಾಡಿ, ಸಂಘದಲ್ಲಿ 400 ಕ್ಕೂ ಅಧಿಕ ಜನ ಸದಸ್ಯರಿದ್ದಾರೆ. ಅದರಲ್ಲಿ 110 ಜನ ರೈತರು ಮಾತ್ರ ಷೇರುದಾರ ಸದಸ್ಯರಾಗಿದ್ದಾರೆ. ಇನ್ನುಳಿದಂತೆ ಕೇವಲ ₹125 ಸದಸ್ಯತ್ವ ಪಾವತಿಸಿದ್ದಾರೆ. ಆದರೆ, ಬೈಲಾ ತಿದ್ದುಪಡಿಯಂತೆ ಎಲ್ಲಾ ಸದಸ್ಯರು ₹525 ಹಣ ಪೂರ್ಣ ಪಾವತಿಸಿ ಷೇರುದಾರ ಸದಸ್ಯರಾಗಬೇಕು. ಅಂತಹ ಸದಸ್ಯರಿಗೆ ಮಾತ್ರ ಏತ ನೀರಾವರಿ ಯೋಜನೆ ಸೌಲಭ್ಯ ದೊರಕಲಿದೆ. ಅಲ್ಲದೇ ಸಹಕಾರ ಸಂಘದ ಚುನಾವಣೆ ಯಲ್ಲಿ ಸ್ಪರ್ಧಿಸಲು ಹಾಗೂ ಮತ ಹಾಕಲು ಅವಕಾಶವಿರುತ್ತದೆ ಎಂದರು. ಸಂಘದ ಹಿರಿಯ ನಿರ್ದೇಶಕ ಜಿ.ಡಿ. ಸೋಮಣ್ಣಗೌಡ ಮಾತನಾಡಿ, ಈ ಭಾಗದ ಹಲವು ರೈತರ ಪರಿಶ್ರಮದಿಂದಾಗಿ ಈ ಯೋಜನೆ ಸಾಕಾರಗೊಂಡಿದೆ. ಎಲ್ಲಾ ರೈತರೂ ಈ ಯೋಜನೆ ಪಾಲುದಾರರಾಗಬೇಕು. ಯೋಜನೆಯ ಸೌಲಭ್ಯ ಪಡೆಯ ಬೇಕು. ಸಹಕಾರ ಸಂಘದ ನಿರ್ವಹಣೆಗೆ ಎಲ್ಲಾ ಅಚ್ಚುಕಟ್ಟುದಾರ ರೈತರು ಎಕರೆವಾರು ಶುಲ್ಕ ಪಾವತಿಸಬೇಕೆಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಭೀಮನರಿ ಪ್ರಶಾಂತ್, ನಿರ್ದೇಶಕರಾದ ಎಂ.ಟಿ.ಕುಮಾರ, ಬಿ.ಜೆ.ಲಕ್ಷ್ಮೀಶ, ಎಂ.ಮಹೇಶ್, ಎಂ.ಇಬ್ರಾಹಿ, ರಂಜು ಎಲಿಯಾಸ್, ಕೆ.ಕೆ.ಸುನಿ, ಪಿ.ವಿ.ಮಥಾಯಿ, ಸುರೇಂದ್ರ, ಉಮಾ ಸತ್ಯನಾರಾಯಣ, ಎಂಜಿನಿಯರ್ ಸತೀಶ್ ಇದ್ದರು.