ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಚಿತ್ರಕಲೆಯ ಎಲ್ಲ ಪ್ರಕಾರಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಹಾಗೂ ಖರೀದಿಸುವ ಅವಕಾಶ ಜ.11,12ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ಲಭ್ಯವಾಗಲಿದೆ. ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಶರಧಿ ಪ್ರತಿಷ್ಠಾನ ವತಿಯಿಂದ ಎರಡು ದಿನಗಳ ‘ಕಲಾ ಪರ್ಬ’ (ಚಿತ್ರ ಶಿಲ್ಪ ನೃತ್ಯ ಮೇಳ) ಆಯೋಜಿಸಲಾಗಿದ್ದು, 110ಕ್ಕೂ ಅಧಿಕ ಮಳಿಗೆಗಳಲ್ಲಿ ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ತಿಳಿಸಿದರು.ಕದ್ರಿ ಪಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 500 ರು.ನಿಂದ ಹಿಡಿದು 5 ಸಾವಿರ ರು. ಮೌಲ್ಯದವರೆಗಿನ ಕಲಾಕೃತಿಗಳನ್ನು ಕಲಾಪ್ರಿಯರು ಖರೀದಿ ಮಾಡುವ ಅವಕಾಶ ಒಂದೆಡೆಯಲ್ಲೇ ಸಿಗಲಿದೆ. ಜತೆಗೆ ಶಿಲ್ಪಕಲೆ, ವಸ್ತುಗಳಿಗೆ ಕಲಾ ಸ್ಪರ್ಶವನ್ನು ನೀಡುವ ಪ್ರತಿಷ್ಠಾಪನಾ ಕಲೆಯನ್ನು ಕೂಡ ಇದರಲ್ಲಿ ಒಳಗೊಳಿಸಲಾಗಿದೆ. ಎರಡು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಲಾಪರ್ಬ ನಡೆಯಲಿದೆ ಎಂದರು.
ಜ.11ರಂದು ಬೆಳಗ್ಗೆ 10.30ಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಕಲಾ ಪರ್ಬವನ್ನು ಉದ್ಘಾಟಿಸಲಿದ್ದಾರೆ. ಮಳಿಗೆಗಳನ್ನು ಶಾಸಕ ವೇದವ್ಯಾಸ ಕಾಮತ್, ಶಿಲ್ಪಕಲಾ ಪ್ರದರ್ಶನವನ್ನು ಶಾಸಕ ಭರತ್ ಶೆಟ್ಟಿ ಉದ್ಘಾಟಿಸಲಿದ್ದು, ಗೌರವ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಹಿಸಲಿದ್ದಾರೆ. ಅತಿಥಿಯಾಗಿ ಮನಪಾ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಅಸ್ತ್ರ ಗೂಪ್‌ನ ಲಂಚುಲಾಲ್ ಕೆ.ಎಸ್. ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 8.30ರಿಂದ 9.30ರವರೆಗೆ ಯೋಗ ಪ್ರದರ್ಶನ, ಅಂಕುಶ್ ನಾಯಕ್ ತಂಡದಿಂದ ಸಂಗೀತ ಪ್ರದರ್ಶನ, ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಗಳು ಇರಲಿವೆ. ಬಳಿಕ ಒಳಾಂಗಣ ವೇದಿಕೆಯಲ್ಲಿ ಸಂಜೆ 4ಕ್ಕೆ ಯಲ್ಲಾಪುರದ ಮಂಚಿಕೆರೆ ಬಹುಮುಖಿ ಪ್ರತಿಭೆ ಪನ್ನಿಕಾ ಸಿದ್ದಿ ಮತ್ತು ತಂಡದಿಂದ ‘ಸಿದ್ದಿ ಢಮಾಮಿ’ ನೃತ್ಯ ಪ್ರದರ್ಶನ, ನೃತ್ಯಾಂಗಣ ತಂಡದಿಂದ ನೃತ್ಯ ಪ್ರದರ್ಶನ, ಭರತಾಂಜಲಿ ತಂಡದಿಂದ ನೃತ್ಯ ಪ್ರದರ್ಶನ, ಸನಾತನ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.ಹಿರಿಯ ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಜ.12ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಕುದ್ರೋಳಿ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಭಾಗವಹಿಸುತ್ತಾರೆ. ಅಂದು ಬೆಳಗ್ಗೆ ಶಿಲ್ಪಕಲಾ ಪ್ರದರ್ಶನ ಹಾಗೂ ಪ್ಯಾತ್ಯಕ್ಷಿಕೆ, ಮಕ್ಕಳಿಗೆ ಚಿತ್ರಕಲಾ ಕಾರ್ಯಾಗಾರ, ಒಳಾಂಗಣ ವೇದಿಕೆಯಲ್ಲಿ ಮೇಕಪ್ ಮತ್ತು ಮೆಹಂದಿ ಸ್ಪರ್ಧೆ, ಗಾನನೃತ್ಯ ಅಕಾಡೆಮಿಯಿಂದ ನೃತ್ಯ ಪ್ರದರ್ಶನ, ಅರೆಹೊಳೆ ನಂದಗೋಕುಲ ಕಲಾತಂಡದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.
ಶರಧಿ ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ, ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ, ಕಲಾವಿದೆ ಸ್ವಪ್ನಾ ನೊರೊನ್ಹಾ, ಉದ್ಯಮಿ ಡಿ.ರಮೇಶ್ ನಾಯಕ್, ಯೋಗ ಗುರು ಜಗದೀಶ್ ಶೆಟ್ಟಿ ಇದ್ದರು.