ಸಾರಾಂಶ
- ಶಹಾಪುರದಲ್ಲಿ ಆಶ್ರಯ ಸಮಿತಿ ಸಭೆ ಫಲಾನುಭವಿಗಳ ಆಯ್ಕೆ ಸಭೆ
-----ಕನ್ನಡಪ್ರಭ ವಾರ್ತೆ ಶಹಾಪುರ
ಸೂರು ವಂಚಿತ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವುದೇ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರಸಭೆಯ ಸಭಾಂಗಣದಲ್ಲಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅಧ್ಯಕ್ಷತೆಯಲ್ಲಿ ನಗರ ಆಶ್ರಯ ಸಮಿತಿ ಸಭೆ ಫಲಾನುಭವಿ¬ಗಳನ್ನು ಆಯ್ಕೆ ಮಾಡುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫಲಾನುಭವಿಗಳ ಆಯ್ಕೆಯಿಂದ ಮನೆ ನಿರ್ಮಾಣದವರೆಗೆ ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನದ ನೆರವನ್ನು ಸಮರ್ಪಕವಾಗಿ ಪಡೆದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದಿ ಎಂದರು.
ನಿವೇಶನ ಮಂಜೂರು: ಘೀಸಾಡಿ ಸಮುದಾಯ ನಗರದ ಚರಬಸವೇಶ್ವರ ಪ್ರೌಢಶಾಲೆ ಎದುರಿಗೆ ಹಳ್ಳದ ದಂಡಿಯಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿರುವ ಈ ಸಮುದಾಯಕ್ಕೆ ಸರ್ವೆ ನಂಬರ್ 299 ರಲ್ಲಿ ವಾಜಪೇಯಿ ಆಸರೆ ಯೋಜನೆಯಡಿ 21 ಫಲಾನುಭವಿಗಳಿಗೆ ನಿವೇಶನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದರು.ಐದು ಕೋಟಿ ವೆಚ್ಚದಲ್ಲಿ ಕುಂಬಾರಿಕೆಯ ಘಟಕ. ನಗರದ ಸರ್ವೆ ನಂಬರ್ 299 ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ಯೋಜನೆ ಅಡಿಯಲ್ಲಿ ಐದು ಕೋಟಿ ವೆಚ್ಚದಲ್ಲಿ ಕುಂಬಾರಿಕೆ ಘಟಕಕ್ಕೆ ಮಂಜುರಾತಿ ದೊರೆಕಿದ್ದು, ಅತಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಮಡಿಕೆ ಸುಡಲು ವಿದ್ಯುತ್ ಚಾಲಿತ ಆವಿಗೆ ಹಾಗೂ ಶೋಕೇಶ್ ನಿರ್ಮಾಣ ಮಾಡಲಾಗುವುದು. ಮಣ್ಣಿನಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಜೋಪಾನವಾಗಿಡಲು ಈ ಶೋಕೇಸ್ ಸಹಕಾರಿ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಸುರಪುರ, ನಗರಸಭೆ ಅಧ್ಯಕ್ಷ ಮೆಹರೂನ್ ಬೇಗಮ್, ಪೌರಾಯುಕ್ತ ರಮೇಶ್ ಬಡಿಗೇರ್, ನಗರ ಸಭೆ ಎಂಜಿನೀಯರ್ ನಾನಾಸಾಬ್, ಕಂದಾಯ ಇಲಾಖೆಯ ಶಿರಸ್ತೆದಾರ ವೆಂಕಟೇಶ್ ಸೇರಿದಂತೆ ನಗರ ಯೋಜನ ಪ್ರಾಧಿಕಾರ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಮತ್ತು ನಗರಸಭೆ ಸಿಬ್ಬಂದಿ ಇದ್ದರು.---ಬಾಕ್ಸ್---
ಸಾದಿಯಾ ಪರ್ವೀನ್ ಗೆ ನಿವೇಶನ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಅಂಗವಿಕಲೆ ಸಾದಿಯಾ ಪರ್ವೀನ್ ಬಗ್ಗೆ "ಕನ್ನಡಪ್ರಭ " ವರದಿ ಪ್ರಕಟಿಸಿತ್ತು. ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯಾಧೀಶರು ಅಂಗವಿಕಲೆ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಸಾದಿಯಾಗೆ ನಿವೇಶನ ನೀಡಿ ಮನೆ ಮಂಜೂರು ಮಾಡುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದರು. ಆಕೆಯ ಅರ್ಜಿಯನ್ನು ಸಮಿತಿಯಲ್ಲಿ ಪಾಸ್ ಮಾಡಿ ನಿವೇಶನ ಮಂಜೂರು ನೀಡಲಾಗಿದೆ.-----
ಫೋಟೊ: ಶಹಾಪುರ ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಅಧ್ಯಕ್ಷತೆಯಲ್ಲಿ ನಗರ ಆಶ್ರಯ ಸಮಿತಿ ಸಭೆ ನಡೆಯಿತು.8ವೈಡಿಆರ್22