ಸಾರಾಂಶ
ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಹೆದ್ದಾರಿ ಬದಿಯ ಸೂಚನಾ ಫಲಕಗಳನ್ನು ಸ್ವಚ್ಛ ಮಾಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ಹೆದ್ದಾರಿ ಬದಿಯ ಸೂಚನಾ ಫಲಕಗಳನ್ನು ಸ್ವಚ್ಛ ಮಾಡಿದರು.ಒಂದು ವಾರ ಕಾಲ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಶಿಬಿರಾರ್ಥಿಗಳು ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿಯಿಂದ ಸ್ವಚ್ಛತಾ ಕಾರ್ಯ ಆರಂಭಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ ಎನ್ ಚಂದ್ರಮೋಹನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಸ್ತೆಯ ಎರಡು ಬದಿಗಳಲ್ಲಿ ಅಳವಡಿಸಿರುವ ರಸ್ತೆ ಸಂಚಾರಿ ನಿಯಮಗಳ ಫಲಕಗಳು, ಪಟ್ಟಣದ ಸಂಚಾರಿ ಪೊಲೀಸ್ ಸಿಗ್ನಲ್ ಕೇಂದ್ರಗಳನ್ನು ಸ್ವಚ್ಛಗೊಳಿಸಿದ ಶಿಬಿರಾರ್ಥಿಗಳು ಬೈಲುಕುಪ್ಪೆ ತನಕ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರಿಸಿದರು. ಈ ಸಂದರ್ಭ ಮಾತನಾಡಿದ ಎನ್‌ಎಸ್‌ಎಸ್ ಅಧಿಕಾರಿ ಎಚ್ ಆರ್ ದಿನೇಶ್, ಒಂದು ವಾರ ಕಾಲ ನಡೆಯುವ ಶಿಬಿರದಲ್ಲಿ ಶ್ರಮದಾನ ಸಾಂಸ್ಕೃತಿಕ ಸ್ಪರ್ಧೆಗಳ ಸಿದ್ಧತೆ, ಕ್ರೀಡಾ ಚಟುವಟಿಕೆ ಉಪನ್ಯಾಸ ಕಾರ್ಯಕ್ರಮಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ ಎಂದರು.ಕುಶಾಲನಗರದಿಂದ ಬೈಲುಕುಪ್ಪೆ ತನಕ ಹೆದ್ದಾರಿ ಬದಿಗಳ 150ಕ್ಕೂ ಅಧಿಕ ಸೂಚನಾ ಫಲಕಗಳ ಸ್ವಚ್ಛತಾ ಕಾರ್ಯದಲ್ಲಿ ಶಿಬಿರಾರ್ಥಿಗಳು ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾ. ಎಬಿನ್, ಆಡಳಿತ ಅಧಿಕಾರಿ ಫಾ .ಟಿಟೋ ಮತ್ತು ಎನ್‌ಎಸ್‌ಎಸ್ ಅಧಿಕಾರಿ ಎಚ್.ಆರ್. ದಿನೇಶ್ ನೇತೃತ್ವದಲ್ಲಿ ಸುಮಾರು 50ಕ್ಕೂ ಅಧಿಕ ಎನ್ಎಸ್‌ಎಸ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಶಿಬಿರದ ನಿರ್ವಾಹಕರಾದ ಬೃಂದಾ, ಲೀನಾ,ಉಪನ್ಯಾಸಕ ಕೀರ್ತನ್ ಕುಟ್ಟಪ್ಪ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಎಎಸ್ಐ ಶಿವಪ್ಪ, ಧನು ಕುಮಾರ್ ಹಾಗೂ ಸಂಚಾರಿ ಪೊಲೀಸರು ಇದ್ದರು.