ಆರ್‌ಟಿಇ ಅನುದಾನ ನೀಡದ ಗುಮಾಸ್ತನಿಗೆ ತರಾಟೆ

| Published : Jan 10 2025, 12:49 AM IST

ಸಾರಾಂಶ

ಆರ್.ಟಿ.ಇ ಅನುದಾನ ಬಿಡುಗಡೆ ಮಾಡಿ ಮತ್ತು ಆರು, ಏಳು, ಎಂಟನೇ ತರಗತಿ ಪ್ರಾರಂಭ ಮಾಡಲು ನಮಗೆ ಅನುಮತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕನಿಗೆ ೫೦ ಸಾವಿರ ಲಂಚ ನೀಡಿದ್ದರೂ ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿ ಕರ್ತವ್ಯದ ವೇಳೆ ಅಧಿಕಾರಿ ವಿರುದ್ಧ ಜೋರಾಗಿಯೇ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಆರ್.ಟಿ.ಇ ಅನುದಾನ ಬಿಡುಗಡೆ ಮಾಡಿ ಮತ್ತು ಆರು, ಏಳು, ಎಂಟನೇ ತರಗತಿ ಪ್ರಾರಂಭ ಮಾಡಲು ನಮಗೆ ಅನುಮತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕನಿಗೆ ೫೦ ಸಾವಿರ ಲಂಚ ನೀಡಿದ್ದರೂ ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿ ಕರ್ತವ್ಯದ ವೇಳೆ ಅಧಿಕಾರಿ ವಿರುದ್ಧ ಜೋರಾಗಿಯೇ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ. ಇನ್ನು ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಅಧಿಕಾರಿ ಮಂಜುನಾಥ್ ಮೊದಲೇ ಅಮಾನತು ಆಗಿದ್ದರೂ ಕರ್ತವ್ಯದಲ್ಲಿ ಇರುವುದು ಕೆಲ ಅನುಮಾನಕ್ಕೆ ಎಡೆ ಮಾಡಿದೆ.

ಅರಕಲಗೂಡಿನಲ್ಲಿರುವ ನ್ಯಾಷನಲ್ ಎರೋಡೈಡ್ ಹಿರಿಯ ಪ್ರಾಥಮಿಕ ಖಾಸಗಿ ಶಾಲೆಯ ಮುಖ್ಯಸ್ಥ ರಂಗಸ್ವಾಮಿಯು, ಹಾಸನದ ಜಿಲ್ಲಾ ಡಿಡಿಪಿಐ ಕಚೇರಿಗೆ ಬಂದು ಕೆಲಸದ ವೇಳೆಯೆ ಅಧಿಕಾರಿ ಮಂಜುನಾಥ್ ಜೊತೆ ಕೆಲ ಸಮಯ ವಾಗ್ವಾದ ನಡೆಸಿದರು. ಕಳೆದ ೨೨ ವರ್ಷದಿಂದ ಡಿಡಿಪಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್‌ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗ ೧೦ ವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿದ ಪ್ರಸಂಗವೂ ನಡೆಯಿತು.

ಚುನಾವಣಾ ಪ್ರಚಾರ ಮಾಡಿದ್ದ ಆರೋಪದಲ್ಲಿ ಜಿಲ್ಲಾಧಿಕಾರಿಗಳು ಬಿ.ಎಚ್ ಮಂಜುನಾಥರವರನ್ನು ಅಮಾನತು ಮಾಡಿರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಕೆಎಟಿಯಲ್ಲಿ ದಾವೆ ಹೂಡಿರುತ್ತಾರೆ.

ಕೆಎಟಿಯಲ್ಲಿ ಯಾವುದೇ ಆದೇಶ ಬರದ ಕಾರಣ ಹೈಕೋರ್ಟ್‌ನಲ್ಲಿ ದಾವೆ ಹೂಡಿರುತ್ತಾರೆ. ಹೈಕೋರ್ಟ್ ಜಿಲ್ಲಾಧಿಕಾರಿಗಳು, ಹಾಸನರವರು ನೀಡಿರುವ ಅಮಾನತು ಆದೇಶಕ್ಕೆ ತಡೆಯಾಗಿ ನೀಡಿರುತ್ತದೆ. ಸಂಬಂಧಿಸಿದ ಪ್ರಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ನಂತರ ಕೆ.ಎ.ಟಿನಲ್ಲಿ ಇವರು ಸಲ್ಲಿಸಿದ್ದ ಅರ್ಜಿ ವಜಾ ಆಗಿರುತ್ತದೆ. ಅಮಾನತು ಆದೇಶವು ಮುಂದುವರಿದರೂ ಕೂಡ ಇಲಾಖೆಯ ಅಧಿಕಾರಿಗಳು ಇವರನ್ನು ಕರ್ತವ್ಯದಿಂದ ಬಿಡುಗಡೆ ಮಾಡದೆ ನಿರ್ಲಕ್ಷ್ಯ ತೋರಿರುತ್ತಾರೆ. ಇವೆಲ್ಲವನ್ನೂ ಗಮನಿಸಿದರೆ ಮಂಜುನಾಥ್ ಬಗ್ಗೆ ವಿವಿಧ ಅನುಮಾನಗಳು ಮೂಡಿವೆ.

ಇದೇ ವೇಳೆ ಅರಕಲಗೂಡಿನಲ್ಲಿರುವ ನ್ಯಾಷನಲ್ ಏರೋಡೈಟ್ ಶಾಲೆಯ ಮಾಲೀಕ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ದಲಿತನಾಗಿ ಒಂದು ಶಾಲೆ ನಡೆಸುತ್ತಿದ್ದು, ಉದ್ದೇಶ ಪೂರ್ವಕವಾಗಿಯೇ ೨೦೧೯ರಲ್ಲಿ ಮೂಲಭೂತ ಸೌಕರ್ಯ ಇಲ್ಲವೆಂದು ಶಾಲೆಯನ್ನೇ ರದ್ದು ಮಾಡಿದ್ದಾರೆ. ಇನ್ನು ೧ರಿಂದ ೫ರವರೆಗೂ ಶಾಲೆ ನಡೆಸಲು ಅವಕಾಶವಿದೆ. ಆದರೆ ೬ನೇ ತರಗತಿಯಿಂದ ೮ನೇ ತರಗತಿವರೆಗೂ ಶಾಲೆ ನಡೆಸಲು ಮಾತ್ರ ಇವರಿಗೆ ಮೂಲಭೂತ ಸೌಕರ್ಯ ಬೇಕಾಗಿದೆ. ನಾನು ಒಬ್ಬ ದಲಿತನು ಶಾಲೆ ನಡೆಸುವುದು ತಪ್ಪಾ!, ೨೦೧೯ರಲ್ಲಿಯೇ ಶಾಲೆ ನಡೆಸಲು ೫೦ ಸಾವಿರ ರು.ಗಳ ಚೆಕ್ ನೀಡಿದ್ದು, ಪ್ರತಿವರ್ಷ ಶಾಲೆಯ ರಿನಿವಲ್ ಮಾಡಲು ಇವರಿಗೆ ೧೫ರಿಂದ ೨೦ ಸಾವಿರ ಲಂಚ ಕೊಡಬೇಕು ಎಂದು ದೂರಿದರು.

ಎಸ್.ಸಿ. ಕ್ಯಾಸ್ಟ್ ಎಂದು ದೌರ್ಜನ್ಯ ಮಾಡಿ ಸ್ಕೂಲನ್ನೇ ರದ್ದು ಮಾಡಿದ್ದಾರೆ ಎಂದು ದೂರಿದರು. ಚೆಕ್ ಡ್ರಾ ಆಗಿರಲಿಲ್ಲ. ಅಮೌಂಟ್ ನೀಡಿ ಚೆಕ್ ವಾಪಸ್ ಪಡೆಯುವಂತೆ ಸೂಚಿಸಿದ್ದರು. ಕಳೆದ ಎರಡು ವರ್ಷಗಳಿಂದಲೂ ಆರ್‌.ಟಿ.ಎ. ಹಣ ಕೊಟ್ಟಿರುವುದಿಲ್ಲ. ಒಂದು ಆರ್‌.ಟಿ.ಎ. ಹಣ ತೆಗೆದುಕೊಳ್ಳಬೇಕಾದರೇ ಇವರಿಗೆ ಲಂಚ ಕೊಡಬೇಕು. ಕಮಿಷನರ್‌ನಿಂದ ಆರರಿಂದ ಎಂಟನೆ ತರಗತಿವರೆಗೂ ಶಾಲೆ ನಡೆಸಲು ಆದೇಶವಾಗಿದೆ ಎಂದು ಆದೇಶದ ಕಾಪಿ ಪ್ರದರ್ಶಿಸಿದರು. ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಇದ್ದು ಶಾಲೆ ನಡೆಸಲು ಅನುಮತಿ ನೀಡಿ ಎಂದು ಬಿಒ ಕೂಡ ಅನುಮತಿ ನೀಡಿದ್ದಾರೆ. ೨೦೧೯ರಿಂದ ಇಲ್ಲಿವರೆಗೂ ಡಿಡಿಪಿಐ ಕಚೇರಿ ಅಲೆಯುತ್ತಿದ್ದೇವೆ ಎಂದರು.

ಈಗಾಗಲೇ ಮನೆಗೆ ಹೋಗಿ ೫೦ ಸಾವಿರ ಲಂಚ ಕೊಡಲಾಗಿದೆ ಎಂದು ಆರೋಪಿಸಿದರು. ಆರ್‌.ಟಿ.ಐ ಹಣ ಕಳೆದ ವರ್ಷದ್ದು ಐದುವರೆ ಲಕ್ಷ ರು. ಬರಬೇಕು. ಈ ವರ್ಷದಕ್ಕೂ ಅಮೌಂಟ್ ಬರಬೇಕು. ಸೌಲಭ್ಯ ಇಲ್ಲದ ಅನೇಕ ಶಾಲೆಗಳಿಗೆ ಅನುಮತಿ ನೀಡಿದ್ದರೂ ನಮಗೆ ಮಾತ್ರ ಅನುಮತಿ ನೀಡದೇ ಸತಾಯಿಸುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಮಾತನಾಡಿ, ಅರಕಲಗೂಡು ಸಿಟಿಯಲ್ಲಿ ಇದ್ದ ಶಾಲೆಯನ್ನು ದೊಡ್ಡಮಗ್ಗೆ ರಸ್ತೆಗೆ ಶಿಫ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಯಾವ ಅನುಮತಿ ಪಡೆಯದೇ ವರ್ಗಾವಣೆ ಮಾಡುವಂತಿಲ್ಲ. ಅಲಿಯೇಶನ್ ಲ್ಯಾಂಡ್ ಇಲ್ಲ. ಅನುಮತಿ ಇದ್ದರೇ ಶಾಲೆ ನಡೆಸಲು ಅನುಮತಿ ಕೊಡುತ್ತೇವೆ. ಈ ವಿಚಾರವಾಗಿ ನಾನು ಯಾವ ಹಣ ಆತನಿಂದ ಪಡೆದಿಲ್ಲ. ಎಲ್ಲಾವನ್ನು ಆನ್ಲೈನ್ ಮೂಲಕ ಇರುವುದರಿಂದ ಹಣ ಪಡೆಯುವುದಕ್ಕೆ ಬರುವುದಿಲ್ಲ. ಆದ್ದರಿಂದಲೇ ತಾನಾಗಿಯೇ ರದ್ದಾಗಿದೆ ಎಂದರು. ಹಿಂದಿನ ಡಿಡಿಪಿಐ ಅವರು ರದ್ದು ಮಾಡಲು ಆದೇಶ ಮಾಡಿರುತ್ತಾರೆ. ಉದ್ದೇಶಪೂರ್ವಕವಾಗಿ ರಂಗಸ್ವಾಮಿ ಎಂಬುವರು ನಮ್ಮ ಕಚೇರಿಗೆ ಬಂದಿದ್ದಾರೆ. ಶಿಫ್ಟ್ ಆಗಿದ್ದಾಗ ಆರ್‌.ಟಿ.ಐ. ದುಡ್ಡು ಕೊಡುವುದಕ್ಕೆ ಬರುವುದಿಲ್ಲ. ನಮ್ಮ ಕಚೇರಿಯವರ ಕೆಲ ಕುಮ್ಮಕ್ಕಿನಿಂದ ಬಂದಿದ್ದಾರೋ ಗೊತ್ತಿಲ್ಲ. ಡಿಡಿಪಿಐ ರದ್ದು ಮಾಡಿದನ್ನು ನೀವೇ ರದ್ದು ಮಾಡಿರುವುದಾಗಿ ನಮ್ಮ ಬಳಿ ಬಂದಿದ್ದಾರೆಂದು ದೂರಿದರು.