ಕನಕಗಿರಿ: ತಾಲೂಕಿನಾದ್ಯಂತ ತೀವ್ರ ಮಳೆ ಕೊರತೆಯಿಂದ ಜನ ಮತ್ತು ಜಾನುವಾರುಗಳು ತೀವ್ರ ತೊಂದರೆಗೆ ಒಳಗಾಗಿದ್ದು, ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಸಿಪಿಐಎಂ ಪಕ್ಷದ ಕಾರ್ಯಕರ್ತರು ತಹಸೀಲ್ದಾರ ಚಂದ್ರಶೇಖರ ಗಾಳಿ ಮುಖಾಂತರ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಕಾರ್ಮಿಕ ಮುಖಂಡ ಮೌಲಾಹುಸೇನ್ ಸುಳೇಕಲ್ ಮಾತನಾಡಿ, ಜುಲೈ ತಿಂಗಳು ಬಂದರೂ ಸೂಕ್ತ ಮಳೆಯಾಗದೆ ಭಿತ್ತನೆ ಕಾರ್ಯ ನಡೆದಿಲ್ಲ. ಇನ್ನು ಕೆಲವು ಕಡೆ ಅಲ್ಪಸ್ವಲ್ಪ ಮಳೆಗೆ ಭಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿರುವ ರೈತರಿಗೆ ಒಳಿತಾಗುವ ನಿಟ್ಟಿನಲ್ಲಿ ಸರ್ಕಾರವು ತಕ್ಷಣವೇ ರೈತರ ಮತ್ತು ಸಾರ್ವಜನಿಕರ ನೆರವಿಗೆ ಧಾವಿಸಬೇಕು. ಗ್ರಾಮೀಣ ಭಾಗದ ಜನರ ಹಸಿವು ನೀಗಿಸಲು ತಕ್ಷಣವೇ ಕೂಲಿಗಾಗಿ ಕಾಳು ಯೋಜನೆ ಪುನರಾರಂಭಿಸಬೇಕು. ಜೆಜೆಎಂ ಅಡಿಯಲ್ಲಿ ಸಮರ್ಪಕ ನೀರು ಪೂರೈಕೆಯಾಗಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪರಶುರಾಮ, ಮಲ್ಲಪ್ಪ ಮ್ಯಾಗಡೆ, ಪಾಮಣ್ಣ, ನಿಂಗಪ್ಪ, ಶಿವಕುಮಾರ ಈಚನಾಳ, ವೆಂಕಟೇಶ ಭಾವಿಕಟ್ಟಿ, ಕೆಂಚಪ್ಪ ಸೇರಿದಂತೆ ಇತರರು ಇದ್ದರು.