ಮಾರ್ಚ್ 2, 3ಕ್ಕೆ ಕನಕಗಿರಿ ಉತ್ಸವ- ಸಚಿವ ಶಿವರಾಜ ತಂಗಡಗಿ

| Published : Feb 04 2024, 01:32 AM IST

ಮಾರ್ಚ್ 2, 3ಕ್ಕೆ ಕನಕಗಿರಿ ಉತ್ಸವ- ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಮೂರು ಬಾರಿ ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿರುವೆ. ಅದರಂತೆ 2023ರ ಚುನಾವಣೆಯಲ್ಲಿ ಉತ್ಸವ ಮಾಡುತ್ತೇನೆಂದು ಮತದಾರರಿಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ.

ಕನಕಗಿರಿ: ಇದೇ ಮಾ.2, 3ರಂದು ಕನಕಗಿರಿ ಉತ್ಸವವನ್ನು ವೈಭವದಿಂದ ಆಚರಿಸಲಾಗುವುದು ಎಂದು ಕನ್ನಡ-ಸಂಸ್ಕೃತಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದ ಕನಕಾಚಲಪತಿ ದೇವಸ್ಥಾನದಲ್ಲಿ ಶನಿವಾರ ನಡೆದ ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಹಿಂದೆ ಮೂರು ಬಾರಿ ಕನಕಗಿರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿರುವೆ. ಅದರಂತೆ 2023ರ ಚುನಾವಣೆಯಲ್ಲಿ ಉತ್ಸವ ಮಾಡುತ್ತೇನೆಂದು ಮತದಾರರಿಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಈಗಾಗಲೇ ಕಿತ್ತೂರು ಉತ್ಸವ, ಕದಂಬ ಉತ್ಸವ, ಮೈಸೂರು ದಸರಾ, ಹಂಪಿ ಉತ್ಸವಗಳಿಗೆ ನನ್ನ ಬಳಿಯಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಸಲಾಗಿದೆ. ಕನಕಗಿರಿಯ ಐತಿಹಾಸಿಕ ಸ್ಮಾರಕ ವೆಂಕಟಪತಿ ಬಾವಿಯ ಮಾದರಿಯನ್ನು ಮೈಸೂರು ದಸರಾದಲ್ಲಿ ಪ್ರದರ್ಶನವಾಗಿದ್ದು, ಮುಖ್ಯಮಂತ್ರಿ ಗಮನ ಸೆಳೆದಿತ್ತು. ವೆಂಕಟಪತಿ ಬಾವಿಯ ಮಾದರಿಗೆ ಮೊದಲ ಸ್ಥಾನ ಲಭಿಸಿರುವುದಾಗಿ ತಿಳಿಸಿದರು.ರಾಜ್ಯದ ಹಲವು ಉತ್ಸವಗಳಿಗಿಂತ ಕನಕಗಿರಿ ಉತ್ಸವವನ್ನು ವಿಭಿನ್ನವಾಗಿ ಆಚರಿಸಲಾಗುವುದು. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಅವರಿಂದ ಸಲಹೆ ಪಡೆದು ಉತ್ಸವ ಆಚರಿಸುತ್ತಿರುವುದು ವಿಶೇಷವೇ ಸರಿ. ಮೈಸೂರು ದಸರಾದಲ್ಲಿನ ಪಂಜಿನ ಕವಾಯತು, ಡ್ರೋಣ್‌ ಮೂಲಕ ನಡೆಸುವ ಕಾರ್ಯಕ್ರಮವನ್ನು ಕನಕಗಿರಿ ಉತ್ಸವದಲ್ಲಿ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರು.ಮೊದಲ ಉತ್ಸವಕ್ಕೆ ₹೪೦ ಲಕ್ಷ, ೨ನೇ ಉತ್ಸವಕ್ಕೆ ₹೮೦ ಲಕ್ಷ ಬಂದಿದ್ದರೂ ಇನ್ನುಳಿದ ಹಣವನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದೆ. ಆದರೆ ನಾನು ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿರುವುದರಿಂದ ಕನಕಗಿರಿ ಉತ್ಸವಕ್ಕೆ ₹2.50 ಕೋಟಿ ಅನುದಾನ ಮೀಸಲಿರಿಸಿದ್ದೇನೆ ಎಂದರು.ಉತ್ಸವಕ್ಕೂ ಎರಡು ದಿನಗಳ ಮುಂಚೆ ಕ್ರೀಡಾಕೂಟ ಆಯೋಜಿಸಲಾಗುವುದು. ಉತ್ಸವದ ದಿನ ಕವಿಗೋಷ್ಠಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಸ್ಥಳೀಯ ಕಲಾವಿದರ ಜತೆಗೆ ಕನ್ನಡ, ಹಿಂದಿ ನಟ, ನಟಿಯರನ್ನು ಕರೆಯಿಸಲಾಗುವುದು. ಸ್ತಬ್ಧಚಿತ್ರಗಳ ಮೆರವಣಿಗೆ, ಕಲಾ ತಂಡಗಳು ಭಾಗವಹಿಸಲಿವೆ. ಎರಡು ದಿನಗಳ ಕಾಲ ನಡೆಯುವ ಕನಕಗಿರಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವುದರ ಜತೆಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಬಿಡಲಾಗುವುದು ಎಂದರು.ಬೆಂಗಳೂರಿನಲ್ಲಿ ಲಾಂಛನ ಬಿಡುಗಡೆ:ಕನಕಗಿರಿ ಉತ್ಸವವು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ರಾಮಯ್ಯ ಬೆಂಗಳೂರಿನಲ್ಲಿ ಕನಕಗಿರಿ ಉತ್ಸವದ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಉತ್ಸವದ ವೇದಿಕೆಗೆ ರಾಜಾ ಉಡಚಪ್ಪ ನಾಯಕ ಹೆಸರಿಡಲಾಗುವುದು ಎಂದು ತಿಳಿಸಿದರು.ಹೆಲಿಕಾಪ್ಟರ್‌ನಿಂದ ಸ್ಮಾರಕ ವೀಕ್ಷಣೆಗೆ ಅವಕಾಶ:ಹಂಪಿ ಹಾಗೂ ಆನೆಗೊಂದಿ ಉತ್ಸವಗಳ ಮಾದರಿಯಲ್ಲಿ ಈ ಬಾರಿಯ ಕನಕಗಿರಿ ಉತ್ಸವದಲ್ಲಿ ಹೆಲಿಕಾಪ್ಟರ್‌ನಿಂದ ಐತಿಹಾಸಿಕ ಸ್ಮಾರಕ, ಮಠ, ಮಂದಿರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕೆನ್ನುವ ಜನರ ಬೇಡಿಕೆಗೆ ಸಚಿವ ತಂಗಡಗಿ ಸ್ಪಂದಿಸಿದರು.ಅನುದಾನ ಮಂಜೂರು:ಪಟ್ಟಣದಲ್ಲಿ ಸರ್ಕ್ಯೂಟ್ ಹೌಸ್ ನಿರ್ಮಾಣಕ್ಕೆ ₹೫ ಕೋಟಿ, ಪುಷ್ಕರಣಿ ಅಭಿವೃದ್ಧಿಗೆ ₹೧ ಕೋಟಿ, ರಥದ ಮನೆ ನಿರ್ಮಾಣಕ್ಕೆ ₹೨೫ ಲಕ್ಷ ಮೀಸಲಿರಿಸಿದ್ದು, ಶೀಘ್ರವೇ ಕಾಮಗಾರಿಗಳು ಶುರುವಾಗಲಿವೆ ಎಂದರು.ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಪಂ ಸದಸ್ಯರಾದ ರಾಜಾಸಾಬ ನಂದಾಪುರ, ಶರಣೇಗೌಡ, ಕಂಠಿರಂಗಪ್ಪ, ಸುರೇಶ ಗುಗ್ಗಳಶೆಟ್ರ, ಹನುಮಂತಪ್ಪ ಬಸರಿಗಿಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇತರರಿದ್ದರು.