ಕನ್ನಡಪ್ರಭ ವಾರ್ತೆ ಹಾಸನ
ರೈತರ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸಬೇಕು. ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಬಲವಂತದ ಭೂಸ್ವಾಧೀನವನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆ.ಪಿ.ಆರ್.ಎಸ್) ರಾಜ್ಯಾಧ್ಯಕ್ಷ ಬಸವರಾಜು ಆಗ್ರಹಿಸಿದರು.ನಗರದ ಸ್ವಾಭಿಮಾನ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಾಸನ ಜಿಲ್ಲಾ 3ನೇ ರೈತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ರೈತರು ತೆಂಗು, ಮೆಕ್ಕೆಜೋಳ, ಆಲೂಗಡ್ಡೆ, ಶುಂಠಿ, ಅಡಿಕೆ, ಕಬ್ಬು, ಕಾಫಿ, ಹೊಗೆಸೊಪ್ಪು ಸೇರಿದಂತೆ ಹಲವು ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಹೈನುಗಾರಿಕೆ ಮತ್ತು ತರಕಾರಿ ಉತ್ಪಾದನೆಯಲ್ಲಿ ಕೂಡ ತೊಡಗಿದ್ದಾರೆ. ವರ್ಷಪೂರ್ತಿ ದುಡಿದರೂ ಉತ್ಪಾದನಾ ವೆಚ್ಚವೂ ವಾಪಸ್ ಬರದಂತಹ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಬದಲಾವಣೆಗಳಿಂದ ಮಳೆಯಾಶ್ರಿತ ಕೃಷಿ ಅಸ್ಥಿರಗೊಂಡಿರುವ ಹಿನ್ನೆಲೆಯಲ್ಲಿ ರೈತರು ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದಾರೆ. ಇದುವರೆಗೆ ೧೦ ಎಚ್‌ಪಿ ವರೆಗಿನ ಮೋಟಾರ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿದ್ಯುತ್ ಖಾಸಗೀಕರಣ ಮಸೂದೆ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದೆ ಎಂದು ಟೀಕಿಸಿದರು.
ರೈತರ ಬೆಳೆಗಳಿಗೆ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಸಮಿತಿ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇಕಡಾ ೫೦ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಕಾನೂನು ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನು ರೈತ ಸಮುದಾಯ ಹಲವು ಬಾರಿ ಮುಂದಿಟ್ಟಿದ್ದರೂ, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಬೀಜ ಮಸೂದೆ ಮೂಲಕ ರೈತರ ಸ್ವಾವಲಂಬಿ ಬಿತ್ತನೆ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಅಮೇರಿಕಾದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಪ್ರಕಾರ ಕೃಷಿ ಉತ್ಪನ್ನಗಳನ್ನು ತೆರಿಗೆ ರಹಿತವಾಗಿ ಆಮದು ಮಾಡಿಕೊಳ್ಳುವುದರಿಂದ ದೇಶೀಯ ರೈತರಿಗೆ ದೊಡ್ಡ ಹೊಡೆತವಾಗಿದೆ ಎಂದು ಸಂಘ ತಿಳಿಸಿದೆ. ಇದರ ಪರಿಣಾಮವಾಗಿ ಹೈನುಗಾರಿಕೆ ಉತ್ಪನ್ನಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಥಳೀಯ ಉತ್ಪಾದಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.
ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಸಾವಿರಾರು ರೈತರು ಹಕ್ಕುಪತ್ರಗಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಮಂಜೂರಾಗಿರುವ ಭೂಮಿಗಳ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ಬಡ ರೈತರಿಗೆ ಹಕ್ಕುಪತ್ರ ನೀಡಬೇಕು. ಅದೇ ರೀತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಬದಲಾವಣೆ ಮಾಡಿ ಗ್ರಾಮೀಣ ಕೃಷಿ ಕೂಲಿಕಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಖಿಲ ಭಾರತ ಕಿಸಾನ್ ಸಭಾಗೆ ಸೇರ್ಪಡೆಯಾದ ಕೆಪಿಆರ್‌ಎಸ್, ರೈತರ ಸಮಸ್ಯೆಗಳ ಆಧಾರದ ಮೇಲೆ ಹೋರಾಟಗಳನ್ನು ರೂಪಿಸುತ್ತಾ ಬಂದಿದೆ. ದೆಹಲಿಯ ರೈತ ಚಳವಳಿ ಹಾಗೂ ದೇವನಹಳ್ಳಿ, ಚನ್ನರಾಯಪಟ್ಟಣ ಭಾಗದ ಭೂಸ್ವಾಧೀನ ವಿರೋಧಿ ಹೋರಾಟಗಳಲ್ಲಿ ಸಂಘದ ಪಾತ್ರ ಮಹತ್ವದ್ದಾಗಿದೆ ಎಂದರು. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಬೇಕು ಎಂದು ಸಂಘದ ಮುಖಂಡರು ಕರೆ ನೀಡಿದ್ದಾರೆ.
ಜಿಲ್ಲೆಯ ರೈತರ ಸಮಗ್ರ ಅಭಿವೃದ್ಧಿ, ಕೃಷಿ ಉಳಿವು ಮತ್ತು ಕಾರ್ಪೊರೇಟೀಕರಣ ತಡೆಯುವ ಉದ್ದೇಶದಿಂದ ಇಂತಹ ಸಮ್ಮೇಳನ ನಡೆಸುತ್ತಿರುವುದಾಗಿ ಹೇಳಿದರು. ಸಮ್ಮೇಳನಕ್ಕೆ ಮೊದಲು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು. ಈ ವೇಳೆ ಘೋಷಣೆ ಕೂಗಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಸಂಘಟನೆ ಮುಖಂಡ ಧರ್ಮೇಶ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ನಿಧಿ ಗೌಡ, ಗಿಡ್ಡೇಗೌಡ, ಜಿಲ್ಲಾ ಮುಖಂಡ ಎಚ್.ಎಸ್. ಮಂಜುನಾಥ್, ಕಾರ್ಯದರ್ಶಿ ವಸಂತಕುಮಾರ್, ಎಂ.ಡಿ. ಪುಷ್ಪ, ಎಂ.ಜಿ. ಪೃಥ್ವಿ ಇತರರು ಉಪಸ್ಥಿತರಿದ್ದರು.