ನೀರಾವರಿ ಇಲಾಖೆ ಹುದ್ದೆಗಳ ಅಕ್ರಮ: ‘ಕನ್ನಡಪ್ರಭ’ ಬಯಲಿಗೆಳೆದ ಹಗರಣ - 48 ಮಂದಿಯ ಬಂಧನ

| Published : Sep 01 2024, 01:46 AM IST / Updated: Sep 01 2024, 05:18 AM IST

ನೀರಾವರಿ ಇಲಾಖೆ ಹುದ್ದೆಗಳ ಅಕ್ರಮ: ‘ಕನ್ನಡಪ್ರಭ’ ಬಯಲಿಗೆಳೆದ ಹಗರಣ - 48 ಮಂದಿಯ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ವರದಿಗಳು ಮತ್ತು ನೊಂದ ಅಭ್ಯರ್ಥಿಗಳ ದೂರಿನ ಮೇರೆಗೆ ನೀರಾವರಿ ಇಲಾಖೆಯಲ್ಲಿ ನಡೆದಿದ್ದ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕದಲ್ಲಿ ನಡೆದಿದ್ದ ಅಕ್ರಮ ಬೆಳಕಿಗೆ ಬಂದಿದ್ದು, 48 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 ಯಾದಗಿರಿ : 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಹಗರಣ ಬೆಳಕಿಗೆ ತಂದಿದ್ದ ‘ಕನ್ನಡಪ್ರಭ’ ಇದೀಗ ನೀರಾವರಿ ಇಲಾಖೆಯಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕದಲ್ಲಿ ನಡೆದಿದ್ದ ಭಾರೀ ಗೋಲ್‌ಮಾಲ್‌ ಬಯಲಿಗೆಳೆದಿದ್ದರಿಂದಾಗಿ 48 ಮಂದಿಯ ಬಂಧನವಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿ ಪತ್ರಿಕೆಯಲ್ಲಿ ಪ್ರಕಟವಾದ ಸರಣಿ ವರದಿಗಳು ಹಾಗೂ ನೊಂದ ಅಭ್ಯರ್ಥಿಗಳ ದೂರಿನ ಪರಿಣಾಮ ಸಿಸಿಬಿ ಪೊಲೀಸರು ಇದೀಗ 37 ಅನರ್ಹ ಅಭ್ಯರ್ಥಿಗಳು ಹಾಗೂ 11 ಮಧ್ಯವರ್ತಿಗಳನ್ನು ಬೇಟೆಯಾಡಿದ್ದಾರೆ.

ಬಿಜೆಪಿ ಸರ್ಕಾರಾವಧಿಯಲ್ಲಿ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆ ಸಚಿವರಾಗಿದ್ದ ವೇಳೆ ನಡೆದಿದ್ದ ಈ ನೇಮಕಾತಿಗಳಲ್ಲಿ ಭಾರೀ ಅವ್ಯವಹಾರದ ವಾಸನೆ ಬಡಿದಿತ್ತು. ನಕಲಿ ಅಂಕಪಟ್ಟಿ ಹಾಗೂ ದಾಖಲೆ ನೀಡಿ ಅನರ್ಹ ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು ಎಂಬ ಆರೋಪಗಳ ಕುರಿತು ‘ಕನ್ನಡಪ್ರಭ’ದಲ್ಲಿ ವರದಿಗಳು ಸಂಚಲನ ಮೂಡಿಸಿದ್ದವು. ಹುದ್ದೆಗಿಟ್ಟಿಸಲು ಒಬ್ಬೊಬ್ಬರಿಂದ 10-12 ಲಕ್ಷ ರು. ಪಡೆದಿದ್ದು, ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಕುರಿತು ದಾಖಲೆಗಳ ಸಮೇತ ‘ಕನ್ನಡಪ್ರಭ’ 2022ರ ಡಿ.18ರಿಂದ ಸರಣಿ ವರದಿ ಪ್ರಕಟಿಸಿತ್ತು. 

ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್‌, ಕೊಪ್ಪಳ ಮುಂತಾದೆಡೆ ಅಭ್ಯರ್ಥಿಗಳ ಪೈಕಿ ಕೆಲವರು ನಕಲಿ ದಾಖಲೆಗಳ ಮೂಲಕ ಆಯ್ಕೆಯಾಗುವ ಪ್ರಯತ್ನ ನಡೆಸಿದ್ದು, ಇದಕ್ಕೆ ಇಲಾಖೆಯಲ್ಲೇ ಮಧ್ಯವರ್ತಿಗಳು ಇದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಆಗ ವಿರೋಧ ಪಕ್ಷದಲ್ಲಿದ್ದ, ಹಾಲಿ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದರು. ನೊಂದ ಅಭ್ಯರ್ಥಿಗಳು ಕೂಡ ರಾಜ್ಯಪಾಲರು, ಮುಖ್ಯಮಂತ್ರಿಯಾದಿಯಾಗಿ ಎಲ್ಲರಿಗೂ ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ವರದಿಗಳು ಸೇರಿ ಇನ್ನಿತರ ದಾಖಲೆಗಳ ಸಮೇತ ದೂರು ನೀಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೂ ದೂರು ನೀಡಿದ್ದ ನೊಂದ ಅಭ್ಯರ್ಥಿಗಳು ತನಿಖೆಗೆ ಆಗ್ರಹಿಸಿದ್ದರು. ಆದರೆ ತನಿಖೆಗೆ ಆಸಕ್ತಿ ತೋರದ ನೀರಾವರಿ ಇಲಾಖೆ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲೆತ್ನಿಸಿದರಲ್ಲದೆ, ಇದೇ ಜೂ.27 ರಂದು ಅಂತಿಮ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರು. ನಂತರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದಾಗ ಇದೀಗ ಮೊದಲ ಹಂತದಲ್ಲಿ 48 ಮಂದಿ ಬಂಧನವಾಗಿದೆ.

ಏನಿದು ಹಗರಣ?ರಾಜ್ಯ ಜಲಸಂಪನ್ಮೂಲ ಇಲಾಖೆ 2022ರ ಸೆಪ್ಟೆಂಬರ್‌ನಲ್ಲಿ ಗ್ರೂಪ್-ಸಿ ವೃಂದದ ದ್ವಿತೀಯ ದರ್ಜೆ ಸಹಾಯಕರ ಎಸ್ಸಿ ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿತ್ತು. ಒಟ್ಟು 182 ಎಸ್‌ಡಿಸಿ ಬ್ಯಾಕ್‌ಲಾಗ್ ಹುದ್ದೆಗಳಿಗೆ 1.12 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಅರ್ಜಿಗಳ ಪೈಕಿ 1:2ರ ಪರಿಶೀಲನಾ ಅರ್ಹತಾ ಪಟ್ಟಿಯನ್ನು ಡಿ.5, 2022 ರಂದು ಬಿಡುಗಡೆಗೊಳಿಸಿ, 364 ಅಭ್ಯರ್ಥಿಗಳ ಹೆಸರನ್ನು ಅಂತರ್ಜಾಲದಲ್ಲಿ ಪ್ರಕಟಿಸಿತ್ತು. ನಕಲಿ ಅಂಕಪಟ್ಟಿ, ದಾಖಲೆ ನೀಡಿದವರನ್ನೇ ಹುದ್ದೆಗೆ ಪರಿಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 

ಎಸ್ಸಿ ಅಭ್ಯರ್ಥಿಗಳಿಗೆ ಮೀಸಲಾಗಿರುವ ಈ ಬ್ಯಾಕ್ ಲಾಗ್ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಶೀಲನಾ ಅರ್ಹತಾ ಪಟ್ಟಿಯಲ್ಲಿ ಮುಸ್ಲಿಂ, ವೀರಶೈವ ಲಿಂಗಾಯತ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳ ಹೆಸರುಗಳಿದ್ದವು!