ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲಾಡಳಿತದ ವಿವಿಧ ಇಲಾಖೆಗಳ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಚ್‌ಐವಿ/ ಏಡ್ಸ್ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ 5 ಕಿ.ಮೀ. ಮ್ಯಾರಥಾನ್ ಕಾರ್ಯಕ್ರಮ ಶನಿವಾರ ನಡೆಯಿತು.ಈ ಮ್ಯಾರಾಥಾನ್‌ಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ, ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪುರುಷರ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಪ್ರಯಾಗ್ ಶೆಟ್ಟಿ ಪ್ರಥಮ ಹಾಗೂ ಮಹಿಳೆಯರ ವಿಭಾಗದಲ್ಲಿ ನಿಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ನಂದಿನಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದರು.ಉಳಿದಂತೆ ಪುರುಷರ ವಿಭಾಗದಲ್ಲಿ ನಾಗರಾಜ ಡೈಯಸ್ ಮತ್ತು ವಿವೇಕಾನಂದ, ಮಹಿಳೆಯರ ವಿಭಾಗದಲ್ಲಿ ಪ್ರತೀಕ್ಷಾ ಮತ್ತು ಸಾಕ್ಷಿ ಕ್ರಮವಾಗಿ 2ನೇ ಮತ್ತು 3ನೇ ಬಹುಮಾನ ವಿಜೇತರಾದರು.ಮ್ಯಾರಾಥಾನ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಮಹಾಮಾರಿ ಏಡ್ಸ್‌ಗೆ ತುತ್ತಾಗುತ್ತಿದ್ದು, ರೊಗವು ಒಂದು ಬಾರಿ ತಗುಲಿದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಏಡ್ಸ್ ರೋಗದ ಕುರಿತು ಜಾಗೃತಿ ವಹಿಸಿ, ಸೋಂಕು ತಗುಲದಂತೆ ಎಚ್ಚರ ಹೊಂದುವುದು ಪ್ರತಿಯೊಬ್ಬರ ಜವಾಬ್ದಾರಿ. ಏಡ್ಸ್ ಕುರಿತು ಜನರಿಗೆ ಮುಕ್ತ ಸಂದೇಶವನ್ನು ನೀಡುವ ಉದ್ದೇಶದಿಂದ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಉಡುಪಿ ಜಿಲ್ಲೆಯನ್ನು ಎಚ್.ಐ.ವಿ /ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸೋಣ ಎಂಬ ಸಂದೇಶವು ಈ ಮ್ಯಾರಾಥಾನ್ ಮೂಲಕ ಸಮುದಾಯಕ್ಕೆ ರವಾನೆಯಾಗಲಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಆದರ್ಶ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲಾ ಚಂದ್ರಶೇಖರ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.