ಆಕಾಶ ಮೇಲೆರಿತ್ತು ಸಿಡಿಲು ಸಿಡಿದೀತು ಎಚ್ಚರ!

| Published : Sep 01 2024, 01:46 AM IST

ಸಾರಾಂಶ

ಶ್ರಾವಣ ಮಾಸದ ಕಾರ್ಣಿಕೋತ್ಸವ ಮೈದೊಳಲು ಹನುಮಂತ ದೇವರು ಕಾರ್ಣಿಕ ನುಡಿದಿದ್ದು, ಇದನ್ನಾಧರಿಸಿ ಪ್ರಕೃತಿ ವೈಪರೀತ್ಯ, ರೈತಾಪಿ ಬದುಕಿನ ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಆಕಾಶ ಮೇಲೆರಿತ್ತು ಸಿಡಿಲು ಸಿಡಿದೀತು ಎಚ್ಚರ ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ ವಾಕ್ಯ. ದೇವರ ಕಾರ್ಣಿಕವನ್ನು ಆಧರಿಸಿ ರೈತಾಪಿ ವರ್ಗ ಇಡೀ ವರ್ಷದ ಮಳೆ ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ಪ್ರಕೃತಿ ವೈಪರೀತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗು ಹೋಗುಗಳನ್ನು ಲೆಕ್ಕಾಚಾರ ಹಾಕುತ್ತಾರೆ.

ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ವಾಡಿಕೆಯಂತೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹನುಮಂತ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗಾಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈ ಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿಯುತ್ತಾರೆ. ಈ ಬಾರಿ ಆಕಾಶ ಮೇಲೆರಿತ್ತು ಸಿಡಿಲು ಸಿಡಿದೀತು ಎಚ್ಚರ ಎಂದು ಉಕ್ತಿಯನ್ನು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಸಿಡಿಲು ರೂಪದಲ್ಲಿ ಭೂಮಿಗೆ ಬರಬಹುದು. ಆಕಾಶ ಮೇಲೆ ಹೋಗಿ ಸಿಡಿಲು ಬಡಿ ಯುತ್ತದೆ ಎಂದಿರುವುದರಿಂದ ಈ ಬಾರಿ ರೈತಾಪಿಗಳಿಗೆ ಹಿನ್ನಡೆಯಾಗುತ್ತದೆ. ದೇಶದೆಲ್ಲೆಡೆ ಅತಿವೃಷ್ಟಿಯಾಗುತ್ತಿರುವುರಿಂದ ಕೃಷಿ ಚಟುವಟಿಕೆಗಳಿಗೆ ಅಡೆಚಣೆಗಳುಂಟಾಗಬಹುದು.

ಮುಂದಿನ ಬೆಸೀಗೆಯ ಬಿಸಿಲ ಪ್ರಖರತೆ ತುಸು ಹೆಚ್ಚಿರಲಿದೆ ಎನ್ನಬಹುದು. ಕೊನೆಯಲ್ಲಿ ಎಚ್ಚರ ಎಂದಿರುವುದು ಸಂಭವಿಸಬಹು ದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣೀಕದ ವಾಕ್ಯವನ್ನು ವಿಶ್ಲೇಷಿಸಿದರು. ಕಾರ್ಣಿಕ ವಾಕ್ಯವನ್ನು ಆಧರಿಸಿ ಪ್ರಕೃತಿಯಲ್ಲಿ ಉಂಟಾಗುವ ವೈಪರೀತ್ಯಗಳನ್ನು ಹಿರಿಯರು ಅರ್ಥೈಸುವುದು ವಾಡಿಕೆ.

ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ,ಶ್ರೀರಾಮ ದೇವರುಗಳ ಉತ್ಸವಮೂರ್ತಿಗಳು ಕಾರ್ಣಿಕದಲ್ಲಿ ಭಾಗಿಯಾಗಿದ್ದವು. ಮಹಿಳೆಯರು ಮಕ್ಕಳಾದಿಯಾಗಿ ದೇವರ ಪಲ್ಲಕಿ ಹಾಗೂ ಉತ್ಸವ ಮೂರ್ತಿಗಳಿಗೆ ಆರತಿ ಮಾಡಿ ಭಕ್ತಿ ಸಮರ್ಪಿಸಿದರು. ಆಂಜನೇಯ ಸೇವಾ ಸಮಿತಿ ಸೇರಿದಂತೆ ಮೈದೊಳಲು ಸುತ್ತಮುತ್ತಲಿನ ಗ್ರಾಮಸ್ಥರು ಭಾವಹಿಸಿದ್ದರು.