- ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ರಷ್ಟು ಫಲಿತಾಂಶ ಬರಲು ಕನ್ನಡಪ್ರಭ ಯುವ ಆವೃತ್ತಿ ಸಹ ಕಾರಣವಾಗಿದೆ ಎಂದು ಮಹಾಲಸ ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕ ಹಾಗೂ ಆಡಳಿತ ಮಂಡಳಿ ಖಜಾಂಚಿ ಬಿ.ಎಸ್.ಆಶೀಶ್ ಕುಮಾರ್ ಅಭಿಪ್ರಾಯಪಟ್ಟರು.

ಗುರುವಾರ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಮಹಾಲಸ ಇಂಡೇನ್ ಗ್ಯಾಸ್ ಏಜೆನ್ಸಿ ಪ್ರಾಯೋಜ ಕತ್ವದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು. ನಾವು ಉಚಿತವಾಗಿ ನೀಡುತ್ತಿರುವ ಕನ್ನಡಪ್ರಭ ಯುವ ಆವೃತ್ತಿಯನ್ನು ವಿದ್ಯಾರ್ಥಿ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ ಎಂಬುದು ಪ್ರಮುಖ ಘಟ್ಟ. ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಉತ್ತಮ ಶಿಕ್ಷಕರಿ ದ್ದಾರೆ. ಮಾಜಿ ಸಚಿವ ಡಿ.ಎನ್.ಜೀವರಾಜ್ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದು ಮಕ್ಕಳಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಕನ್ನಡಪ್ರಭ ಯುವ ಆವೃತ್ತಿಯನ್ನು ಮಕ್ಕಳು ಪ್ರತಿ ದಿನ ಓದಿ ನಂತರ ಜೋಪಾನವಾಗಿ ಇಟ್ಟುಕೊಂಡು ಮಾರ್ಚ ತಿಂಗಳ ಕೊನೆ ಹೊತ್ತಿಗೆ ಎಲ್ಲಾ 250 ಪೇಪರ್ ನ್ನು ವಾಪಾಸು ತಂದು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇನೆ ಎಂದು ಘೋಷಣೆ ಮಾಡಿದರು.

ಅತಿಥಿಯಾಗಿದ್ದ ಕನ್ನಡಪ್ರಭ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 4 ವರ್ಷದಿಂದ ಕನ್ನಡಪ್ರಭ ಯುವ ಆವೃತ್ತಿಯನ್ನು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಗೆ ಮಹಾಲಸ ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕ ಬಿ.ಎಸ್.ಆಶೀಶ್ ಕುಮಾರ್ ಕೊಡುಗೆಯಾಗಿ ನೀಡುತ್ತಿದ್ದಾರೆ. ಮಕ್ಕಳ ಜ್ಞಾನಾರ್ಜನೆ ಹೆಚ್ಚಾಗಬೇಕು ಹಾಗೂ ಎಸ್.ಎಲ್.ಎಲ್ ಸಿ.ಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂಬ ಸದುದ್ದೇಶದಿಂದ 8 ಪುಟದ ಕನ್ನಡಪ್ರಭ ಯುವ ಆವೃತ್ತಿಯನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.


ದೃಶ್ಯ ಮಾದ್ಯಮಕ್ಕಿಂತ ಮುದ್ರಣ ಮಾದ್ಯಮ ಹೆಚ್ಚು ಪರಿಣಾಮಕಾರಿ.ವಿದ್ಯಾರ್ಥಿಗಳು ಪ್ರತಿ ದಿನ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡರೆ ದೇಶ, ರಾಜ್ಯ ಹಾಗೂ ಜಿಲ್ಲೆಯ ಸುದ್ದಿ ತಿಳಿಯಲಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್ ಮಾತನಾಡಿ, ನಮ್ಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕನ್ನಡಪ್ರಭ ಯುವ ಆವೃತ್ತಿಯನ್ನು ಪ್ರತಿ ದಿನ ಓದಿ ಉತ್ತಮ ಫಲಿತಾಂಶ ತಂದುಕೊಟ್ಟರೆ ದಾನ ನೀಡಿದವರಿಗೂ ತೃಪ್ತಿಯಾಗಲಿದೆ.

ಈಗಾಗಲೇ ದಾನಿ ಆಶೀಶ್ ಕುಮಾರ್ ನಮ್ಮ ಶಾಲೆಗೆ ಊಟದ ತಟ್ಟೆ,10 ಡೆಸ್ಕ್, ನೋಟ್‌ ಬುಕ್ ನೀಡಿದ್ದು ಈಗ ಕನ್ನಡಪ್ರಭ ಯುವ ಆವೃತ್ತಿ ಕೊಡುಗೆಯಾಗಿ ನೀಡಿದ್ದಾರೆ. ಆಡಳಿತ ಮಂಡಳಿಯವರು ಶಾಲೆಗೆ ಎಲ್ಲಾ ಮೂಲಭೂತ ಸೌಕರ್ಯ ನೀಡುತ್ತಿರು ವುದರಿಂದ ಉತ್ತಮ ಫಲಿತಾಂಶ ಬರಲು ಸಹಾಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದಾನಿಗಳಾದ ಆಶೀಶ್ ಕುಮಾರ್ ಅವರನ್ನು ಕನ್ನಡಪ್ರಭ ಹಾಗೂ ಶಾಲೆಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಸಹ ಶಿಕ್ಷಕರಾದ ಸೋಮಶೇಖರ್, ಶಿವಮೂರ್ತಿ, ಲಲಿತ, ಶಕುಂತಳ, ಫಾತಿಮ ಇದ್ದರು.